ಜಾಹಿರಾತು ಕೊಡುತ್ತಾಳೆ ಅವಳು
ಇಪ್ಪತ್ತೆರಡು ವರ್ಷದ ಕನ್ಯೆ
ಶ್ರೀಮಂತ ಅಮೇರಿಕಾದ ಮಗಳು.
“ನನ್ನ ಹೆಸರು ಬ್ರುನೆಟ್
ನನಗೀಗ ಇಪ್ಪತ್ತೆರಡು ವಯಸ್ಸು
ಅಮೇರಿಕಾದ ಮಗಳು ನಾನು
ನನ್ನ ಕನ್ಯತ್ವ ಪರಿಶುದ್ಧ
ಅದಕ್ಕಿದೆ ವೈದ್ಯರ ಪ್ರಮಾಣಪತ್ರ
ಯಾರಾದರೂ ಕೊಳ್ಳುತ್ತೀರಾ?
ಬನ್ನಿ ಹೆಚ್ಚಿನ ಬಿಡ್ಡುದಾರರೇ
ಅತೀ ಹೆಚ್ಚು ಹಣನೀಡುವವರ
ಜೊತೆ ಮಲಗಲು ಸಿದ್ಧಳಿದ್ದೇನೆ.”
ಇದು ಯಾಕೆ ಎನ್ನುತ್ತೀರಾ?
“ನಾನು ಸ್ನಾತಕೋತ್ತರ ಪದವಿಗೆ
ಓದಲು ಅಪಾರ ಹಣ ಬೇಕಾಗಿದೆ.”
ಮಹಿಳೆಯರ ಮಾನವನ್ನೂ ಬಿಡದೇ
ಎಲ್ಲವನ್ನೂ ಸರಕಾಗಿಸುವ
ಬಂಡವಾಳಿಗರ ಮಾರುಕಟ್ಟೆಯಲ್ಲಿ
ಶಿಕ್ಷಣವೂ ಸರಕು. ಖಾಸಗೀಕರಣದ
ಪರಿಣಾಮ ಕನ್ಯತ್ವವೂ ಸರಕು.
ಶೀಲ ಉಳಿಸಲು ಸಹಗಮನ
ಮಾಡಿಸಿದ ಸನಾತನಿಗಳೇ
ದೇವಿಯೆಂದು ಪೂಜಿಸುವವರೇ
ಬನ್ನಿ ಅವಳ ಮಾನ ಕಾಪಿಡಬಲ್ಲಿರಾ?
ಡಾಲರ್ ದೊರೆಗಳ ನಿಜದ ದರ್ಶನ
ಈಗಲಾದರೂ ಆಗುವುದೇ ನಿಮಗೆ?
ಇಂದು ಅಮೇರಿಕಾ-ನಾಳೆ ಭಾರತ
ಖಾಸಗೀಕರಣದ ಪರಿಣಾಮ
ಎಂತಹ ಕರಾಳ?
*****