ಭಂಡಾರ

ಅರಳಿ ದಳದಳ ಸುರಿಯೆ ರಜಕಣ-ಹರಿಯೆ ಮಧುರಸ ಮೆರೆಯೆ ದುಂಬಿಯು
ತಿರುಳ ಭಾವಕೆ ಹರಿಯೆ ವೀರ್ಯವು ಗೂಢ ತೆರದೊಳಗೆ
ಹೊರಗಣಾರ್ಥಿಕ ಸರದಿ ಕಳೆಯಲು- ಇರದು ಮಧುರಸವಿರದು ಶುಭರಜ
ವಿರದು ರಂಗಿನಪೆಂಪದಾವದು ಬಲಿಯೆ ಬಂಡಾರ.
* * *

ಹೊರಳಿ ಧ್ವಜಪಠ ಸುಳಿದು ಹೊಂಬೊಗೆ
ಹರಿದು ಹೊಗಳಿಕೆ ಮೊರೆಯೆ ಕವಿಗಳು
ಭರತಭುವಿಯಲಿ ವೀರ್ಯ ಹರಿಯಿತು ತಿರುಳಿನಂತರಕೆ
ಹೊರಗಣಾರ್ಥಿಕ ಸರದಿ ಕಳೆಯಿತು!
ಇರದೆ ಹೊಂಬೊಗೆಯಿರದೆ ಹೊಗಳಿಕೆ!
ಸುರಳಿ ಧ್ವಜಪಠ ಸುರಟಿ ಭವಸುಖ ಬಲಿತು ಭಂಡಾರ!
ನಾಡಹೃದಯವು ಸೊರಗಿ ಸುರುಟಿದೆ-ಆಡುವಾಕಳಿಯಿಲ್ಲ ಮೊಗದಲಿ
ನೋಡೆನೆಂಬೊಡೆ ನೆಳಲ ಕಾಣೆನು ಪೂರ್ವ ಶುಭಯುಗದ!
ನಾಡು ಬಲಿತಿಹ ಬೀಜಕೋಶವು-ಬೀಡು ಪೂರ್‍ವದ ಬೀಜ ಭಾಗ್ಯಕೆ!
ನಾಡು ಸೊರಗಿದ ನಾಡು ನಮ್ಮದು! ಬಿರಿವ ಭಂಡಾರ!
ವ್ಯಾಸನಾವಾಲ್ಮೀಕಿ ಮೊದಲಾ- ದೇಸು ಕವಿಗಳು ವಕ್ಕಿ ತೂರುತ
ಭಾಸುರಾತ್ಮಕ ಭಾವವೆಲ್ಲವ ಕಾವ್ಯ ಕಣಜದಲಿ
ಏಸನಿಟ್ಟರೋ! ಯೋಗಮರ್ಮದೊ-ಳಾಸುಯೋಗದ ಸುಗ್ಗಿ ಕಳೆಯಿತು!
ಈಸುಕಾವ್ಯಗಳೆಲ್ಲ ಕೇಳಿರಿ ರತುನ ಭಂಡಾರ!
ಜಂಬುದ್ವೀಪವು ಬಿರಿವಬೊಕ್ಕಸ! ನಂಬಿನಂಬಿರಿ! ನಿಮ್ಮ ಹೃದಯಗ
ಳೆಂಬ ವೋಟೆಗಳೆಲ್ಲ ಬಿರಿವವು ನಾಳೆ ಶುಭಯುಗಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೨
Next post ನವಿಲುಗರಿ – ೫

ಸಣ್ಣ ಕತೆ