ರಂಗಣ್ಣನ ಕನಸಿನ ದಿನಗಳು – ೭

ರಂಗಣ್ಣನ ಕನಸಿನ ದಿನಗಳು – ೭

ದೊಡ್ಡ ಬೋರೇಗೌಡರು

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ – ಅದರಲ್ಲಿಯೂ ಮುಖ್ಯವಾಗಿ ಇಂಗ್ಲಿಷು ಜನರಿಗೆ – ಇದೊಂದು ಮಾದರಿ ಸಂಸ್ಥಾನ ಎಂಬ ಅಭಿಪ್ರಾಯ ಹುಟ್ಟುವ ರೀತಿಯಲ್ಲಿ ಅಭಿವೃದ್ಧಿ ಪ್ರಕಾಶನ ಮಾಡುವುದರಲ್ಲಿಯೂ ಕೇವಲ ಸಂಖ್ಯಾಬಾಹುಳ್ಯದಿಂದ ವಿದ್ಯಾ ಪ್ರಚಾರವನ್ನು ಅಳೆಯುವುದರಲ್ಲಿಯೂ ನಿರತರಾಗಿರುವರೆಂದು ಅವನಿಗೆ ಬೋಧೆಯಾಯಿತು. ಪ್ರಾಥಮಿಕ ದರ್ಜೆಯಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಓದುತ್ತಿರಬಹುದು. ಆದರೆ ಪ್ರಯೋಜನವೇನು? ಅದರಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಾಗಿ ಮೊದಲನೆಯ ತರಗತಿಯಲ್ಲೇ ಕೊಳೆಯುತ್ತಿರುವರು; ನಾಲ್ಕನೆಯ ತರಗತಿಗೆ ಬರುವ ಮಕ್ಕಳ ಸಂಖ್ಯೆ ಬಹಳ ಕಡಮೆ. ಮಧ್ಯೆ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು. ಈ ಸಂಖ್ಯೆಗಳನ್ನು ಕಟ್ಟಿಕೊಂಡು ಏನು ಮಾಡಬೇಕು? ಇನ್‌ಸ್ಪೆಕ್ಟರುಗಳೂ, ಮೇಲ್ಪಟ್ಟ ಅಧಿಕಾರಿಗಳೂ ಜುಲ್ಮಾನೆ, ಸಸ್ಪೆಂಡು ಮೊದಲಾದ ಉಗ್ರ ಕಾರ್‍ಯಕ್ರಮಗಳಿಂದ ಭಯೋತ್ಪಾದನೆ ಮಾಡುವವರೇ ಹೊರತು, ಸಹಾನುಭೂತಿಯಿಂದ ತಿದ್ದಿ ತಿಳಿವಳಿಕೆ ಕೊಟ್ಟವರಲ್ಲ. ಆ ಅಧಿಕಾರಿಗಳನ್ನು ಕಂಡರೆ ಕೆಳಗಿನವರಿಗೆ ವಿಶ್ವಾಸವಾಗಲಿ ಗೌರವವಾಗಲಿ ಸುತರಾಂ ಇರಲಿಲ್ಲ. ಊರಿಗೆ ಪ್ಲೇಗುಮಾರಿ ಬರುವುದೂ ಸ್ಕೂಲುಗಳ ತನಿಖೆಗೆ ಅಥವಾ ಭೇಟಿಗೆ ಅಧಿಕಾರಿಗಳು ಬರುವುದೂ ಎರಡೂ ಒಂದೇ ಎಂಬ ಭಾವನೆ ಉಪಾಧ್ಯಾಯರಲ್ಲಿ ನೆಲಸಿತ್ತು. ಉಪಾಧ್ಯಾಯರಲ್ಲಿ ಕೆಲವರೇನೋ ಪುಂಡರು ಇದ್ದರು. ಆದರೆ ಅವರ ಸಂಖ್ಯೆ ತೀರ ಕಡಮೆ ; ಸೇಕಡ ಹತ್ತು ಇದ್ದಿರಬಹುದು. ಅವರಿಗೆ ಬೆಂಬಲಕಾರರು ರಾಜಕೀಯದಲ್ಲಿಯ ಕೆಲವರು ಮುಖಂಡರು ; ಪ್ರಜಾಪ್ರತಿನಿಧಿ ಸಭೆಯ ಅಥವಾ ನ್ಯಾಯವಿಧಾಯಕ ಸಭೆಯ ಸದಸ್ಯರಲ್ಲಿ ಕೆಲವರು. ಆ ಪುಂಡು ಉಪಾಧ್ಯಾಯರೇ ಆ ಸದಸ್ಯರ ಏಜೆಂಟರುಗಳು, ಸರ್ಕಾರಿ ನೌಕರರ-ಅಮಲ್ದಾರರು, ಪೊಲೀಸ್ ಇನ್ಸ್ಪೆಕ್ಟರು ಮೊದಲಾದವರ – ಓಡಾಟಗಳನ್ನು ಹೊಂಚು ನೋಡುತ್ತ ನಡೆದುದನ್ನೂ ಜೊತೆಗೆ ತಮ್ಮ ಕಲ್ಪನೆಯನ್ನೂ ಸೇರಿಸಿ ತಂತಮ್ಮ ಯಜಮಾನರುಗಳಿಗೆ ವರದಿ ಮಾಡುವುದು, ವರ್ತಮಾನ ಪತ್ರಿಕೆಗಳನ್ನು ಹಂಚುವುದು- ಇವೆಲ್ಲ ಆ ಉಪಾಧ್ಯಾಯರ ಕಾರ್ಯಕಲಾಪಗಳಲ್ಲಿ ಸೇರಿದುವು. ಇವರ ವರದಿಗಳನ್ನು ಸೇರಿಸಿ ಜೊತೆಗೆ ತಾವೂ ಸ್ವಲ್ಪ ಸೃಷ್ಟನೆ ಮಾಡಿ ಆ ಮುಖಂಡರೆನಿಸಿದವರು ಆಗಾಗ್ಗೆ ದಿವಾನರನ್ನೂ ಕೌನ್ಸಿಲರುಗಳನ್ನೂ ಇಲಾಖೆಗಳ ಮುಖ್ಯಾಧಿಕಾರಿಗಳನ್ನೂ ಕಂಡು ಚಾಡಿಗಳನ್ನು ಹೇಳುತ್ತಿದ್ದರು. ಇಂಥ ಪುಂಡು ಉಪಾಧ್ಯಾಯರನ್ನು ಹತೋಟಿಗೆ ತಂದುಕೊಳ್ಳುವುದು ಹೇಗೆ ? ಹಿಂದಿನ ಇನ್ಸ್ಪೆಕ್ಟರುಗಳು ಒಮ್ಮೆ ಒಬ್ಬಿಬ್ಬರು ಪುಂಡರನ್ನು ರೇಂಜ್ ಬಿಟ್ಟು ವರ್ಗ ಮಾಡಿಸಲು ಪ್ರಯತ್ನ ಪಟ್ಟರು. ಮೇಲಿನ ಸಾಹೇಬರಿಂದ ವರ್ಗದ ಆರ್ಡರನ್ನು ತರಿಸಿ ಜಾರಿಗೆ ಕೊಟ್ಟರು ಆಗ ನಮ್ಮ ಮುಖಂಡರು ದೊಡ್ಡ ಸಾಹೇಬರಿಗೆ ಕಾಗದವನ್ನು ಬರೆದು ವರ್ಗದ ಆರ್ಡರನ್ನು ವಜಾ ಮಾಡಬೇಕೆಂದು ಹೇಳಿದರು ಮುಖಂಡರ ಆ ಕಾಗದ ಬಂದ ದಿನ ದೊಡ್ಡ ಸಾಹೇಬರು ಅದನ್ನು ಒಡೆದು ನೋಡುತಿದ್ದ ಹಾಗೆಯೇ ಆಳನ್ನು ಕರೆದು ‘ತಂಬಿಗೆಗೆ ನೀರು ಹಾಕು’ ಎನ್ನುತ್ತ ಅವಸರವಸರವಾಗಿ ಕುರ್ಚಿ ಬಿಟ್ಟು ಹೊರಟರಂತೆ! ಒಟ್ಟಿನಲ್ಲಿ ಪರಿಣಾಮ ಏನಾಯಿತು ? ಆ ಕೆಳಗಿನ ಸಾಹೇಬರಿಗೆ ಮೇಲಿನ ಸಾಹೇಬರಿಂದ ಬೈಗಳು ; ತಿಳಿವಳಿಕೆ ಇಲ್ಲ, ದಕ್ಷತೆ ಇಲ್ಲ, ಇತ್ಯಾದಿ ಬಾಣಗಳು. ಕೂಡಲೇ ವರ್ಗವನ್ನು ವಜೆ ಮಾಡಿ ವರದಿ ಕಳುಹಿಸಬೇಕು ಎಂದು ಖಾಸಗಿ ಹುಕುಂ.

ಒಂದು ಬಾರಿ ಡೆಪ್ಯುಟಿ ಕಮಿಷನರ್ ಸಾಹೇಬರು ಜನಾರ್ದನಪುರದಲ್ಲಿ ಮೊಕ್ಕಾಂ ಮಾಡಿದ್ದರು. ತಿಮ್ಮನಹಳ್ಳಿಯಲ್ಲಿ ರೈತರನ್ನೆಲ್ಲ ಎತ್ತಿ ಕಟ್ಟಿ ಕಂದಾಯದ ರೆಮಿಷನ್ ಬಗ್ಗೆ ಬಂಡಾಯ ಎಬ್ಬಿಸುತ್ತಿರುವುದಾಗಿಯೂ, ಅಲ್ಲಿಯ ಪಂಚಾಯತಿಯಲ್ಲಿ ವ್ಯಾಜ್ಯಗಳನ್ನು ಹುಟ್ಟಿಸಿ ಅದರ ಕೆಲಸಗಳೆಲ್ಲ ನಿಂತುಹೋಗುವಂತೆ ಮಾಡಿದುದಾಗಿಯೂ ಉಗ್ರಪ್ಪ ಮೇಷ್ಟ್ರ ಮೇಲೆ ರೆವಿನ್ಯೂ ಅಧಿಕಾರಿಗಳು ದೂರು ಕೊಟ್ಟಿದ್ದರು. ಡೆಪ್ಯುಟಿ ಕಮಿಷನರ್ ಸಾಹೇಬರನ್ನು ಕಾಣುವುದಕ್ಕಾಗಿ ಗ್ರಾಮಸ್ಥರು ಬಂದಿದ್ದರು. ಅವರಲ್ಲಿ ಆ ಮೇಷ್ಟ್ರು ಸಹ ಒಬ್ಬನು. ಡೆಪ್ಯುಟಿ ಕಮಿಷನರ್ ಸಾಹೇಬರು ಕೆಲವರು ರೈತರೊಡನೆ ಮಾತನಾಡಿ ಸ್ವಲ್ಪ ಸಮಾಧಾನ ಮಾಡಿದ ನಂತರ ಮೇಷ್ಟನ್ನು ಕರೆದು, ’ಏನು? ನೀನು ಬಹಳ ತುಂಟಾಟ ಮಾಡುತ್ತಿದ್ದೀಯಂತೆ? ಎಚ್ಚರಿಕೆ ಇರಲಿ ; ಪೊಲೀಸ್ ಲಾಕಪ್ ರುಚಿ ತೋರಿಸಬೇಕಾದೀತು. ನೀನು ಸರ್ಕಾರಿ ನೌಕರ, ಹದಿನೈದು ರೂಪಾಯಿ ಮೇಷ್ಟ್ರು, ಸುಮ್ಮನೆ ಪಾಠ ಹೇಳಿಕೊಂಡಿರಬೇಕು. ಗೊತ್ತಿದೆಯೋ ? ಹುಷಾರ್’ ಎಂದು ಜಬರ್ದಸ್ತಿ ಮಾಡಿದರು.

ಅದಕ್ಕೆ ಆ ಸಿಪಾಯಿ ಮೇಷ್ಟ್ರು, “ಸ್ವಾಮಿ, ತಾವು ದೊಡ್ಡ ಮನುಷ್ಯರು, ದೊಡ್ಡ ಅಧಿಕಾರದಲ್ಲಿರತಕ್ಕವರು, ಡಿಸ್ಟಿಕ್ಟ್ ಮ್ಯಾಜಿಸ್ಟ್ರೇಟರು. ನಾನು ಹದಿನೈದು ರೂಪಾಯಿ ಸಂಬಳದ ಬಡ ನೌಕರ. ತಮ್ಮ ದಫೇದಾರನಿಗೆ ಹೆಚ್ಚು ಸಂಬಳ ಬರುತ್ತಿರಬಹುದು. ಆದರೆ ಗೌರವದ ವಿಚಾರದಲ್ಲಿ ಮೇಷ್ಟ್ರಾದ ನಾನು ತಮಗೆ ಪಾಠ ಕಲಿಸಬೇಕಾಗಿದೆ. ಮರ್ಯಾದೆ ಕೊಟ್ಟು ಮರ್ಯಾದೆ ಪಡೆಯಬೇಕು ಎಂಬುದೊಂದು ನೀತಿ. ತಾವು ನನ್ನನ್ನು ಏಕವಚನದಲ್ಲಿ ಸಂಬೋಧಿಸಿದರೆ ನಾನು ಸಹ ತಮ್ಮನ್ನು ಏಕವಚನದಲ್ಲಿಯೇ ಸಂಬೋಧಿಸಬೇಕಾಗುತ್ತದೆ – ಎಂದು ಉತ್ತರ ಕೊಟ್ಟನು.

“ಏನ್ರಿ ! ಬಹಳ ಜೋರ್ ಮೇಲೆ ಇದ್ದಿರಿ. ನಾಳೆ ನಿಮ್ಮನ್ನು ಈ ಸ್ಥಳದಿಂದ ಮಲೆನಾಡಿಗೆ ವರ್ಗ ಮಾಡಿಸುತ್ತೇನೆ. ತಿಳಿಯಿತೋ?’

‘ಒಳ್ಳೆಯದು ಸ್ವಾಮಿ ! ಇಲ್ಲಿಗೆ ನಾನು ಬಂದಿರುವುದು ಮೇಷ್ಟರಾಗಲ್ಲ. ಆದು ತಮಗೆ ತಿಳಿಯಬೇಕು. ನಾನು ಕಂದಾಯ ಕಟ್ಟುವ ರೈತ. ವರ್ಷಕ್ಕೆ ಐವತ್ತು ರೂಪಾಯಿ ಕಂದಾಯ ಕಟ್ಟುತ್ತೇನೆ. ನಾನು ಶ್ರೀಮನ್ಮಹಾರಾಜರವರ ಪ್ರಜೆ ; ತಮ್ಮ ಸಂಬಳ ಕೊಡುತ್ತಿರುವ ರೈತ. ನೀವು ನೇಮಕರಾಗಿರುವುದು ನಮ್ಮ ಸೇವೆ ಮಾಡುವುದಕ್ಕೆ, ನಾವು ಧಣಿಗಳು, ನೀವು ಸೇವಕರು, ತಿಳಿಯಿತೋ? ನನ್ನನ್ನು ವರ್ಗ ಮಾಡಿಸುತ್ತೀರಾ
ನೀವು ? ನಿಮ್ಮ ಹಣೆಯಲ್ಲಿ ಬರೆದಿಲ್ಲ. ನಾನು ಇಚ್ಛೆ ಪಟ್ಟರೆ ನಿಮ್ಮನ್ನು ಒಂದು ವಾರದೊಳಗಾಗಿ ವರ್ಗ ಮಾಡಿಸುತ್ತೇನೆ. ಅಹವಾಲು ಹೇಳಿ ಕೊಳ್ಳುವುದಕ್ಕೆ ಬಂದ ಬಡ ರೈತನನ್ನು ಪೊಲೀಸ್ ಲಾಕಪ್ಪಿಗೆ ಹಾಕುವ ಈ ದಬ್ಬಾಳಿಕೆ ನಾಳೆ ನಾಳಿದ್ದರಲ್ಲಿ ಸಂಸ್ಥಾನವಾದ್ಯಂತ ಪತ್ರಿಕೆಗಳಲ್ಲಿ ಬರುವುದನ್ನು ನೀವೇ ಓದುತ್ತೀರಿ!” ಎಂದು ಆ ಸಿಪಾಯಿ ಮೇಷ್ಟರು ಹೇಳಿ, ಅಲ್ಲಿ ನಿಲ್ಲದೆ ಡೆಪ್ಯುಟಿ ಕಮಿಷನರಿಗೆ ನಮಸ್ಕಾರವನ್ನೂ ಮಾಡದೆ ಹೊರಟೇ ಹೋದನು.

ಮತ್ತೊಬ್ಬ ಪುಂಡು ಉಪಾಧ್ಯಾಯನು ಹಿಂದಿನ ಡಿಸ್ಟಿಕ್ಟ್ ಇನ್ಸ್ಪೆಕ್ಟರ ಮೇಲೆ ಕೋರ್ಟುಗಳಲ್ಲಿ ಕೇಸುಗಳನ್ನು ದಾಖಲ್ಮಾಡಿ ಅವರಿಂದ ದಮ್ಮಯ್ಯ ಗುಡ್ಡೆ ಹಾಕಿಸಿಕೊಂಡನು.

ಹೀಗೆ ಕೆಲವರೇನೋ ಪುಂಡರು ಇದ್ದರು. ಅವರು ಆಯಾ ಪ್ರಾಂತಗಳಲ್ಲಿ ಪಾಳೆಯಗಾರರಾಗಿ ಭಯಗ್ರಸ್ತರಾದ ಇತರ ಮೇಷ್ಟರುಗಳನ್ನು ತಮ್ಮ ಹತೋಟಿಯಲ್ಲಿಟ್ಟು ಕೊಂಡು ಆಳುತ್ತಿದ್ದರು. ಹಿಂದಿನ ಕೆಲವರು ಇನ್ಸ್ಪೆಕ್ಟರುಗಳು ಅವರ ದೆಶೆಯಿಂದ ಬಹಳ ಭಂಗಪಟ್ಟದ್ದೂ ಉಂಟು ; ಕೆಲವರು ಅವರನ್ನೇ ಸ್ನೇಹಿತರನ್ನಾಗಿ ಮಾಡಿಕೊಂಡು, ಅವರ ಮುಖಂಡರ ಇಚ್ಛಾನುಸಾರ ವರ್ಗಗಳನ್ನು ಮಾಡುತ್ತಾ ಪ್ರಮೋಷನ್‌ಗಳನ್ನು ಕೊಡಿಸುತ್ತಾ ಇದ್ದುದೂ ಉಂಟು.

ಹೊರಗಿನವರ ಪ್ರಭಾವ ಬೀಳದೇ ಇದ್ದಾಗ ಸಾಮಾನ್ಯವಾಗಿ ರೇಂಜಿನಲ್ಲಿ ಶೇಕಡ ಎಪ್ಪತ್ತು ಮಂದಿ ಉಪಾಧ್ಯಾಯರು ತಂತಮ್ಮ ಕೆಲಸಗಳನ್ನು ಭಯದಿಂದ ಮಾಡಿ ಕೊಂಡು ಹೋಗುತ್ತಿದ್ದರು. ದೇವರು ಕೊಟ್ಟ ಬುದ್ಧಿಯನ್ನು ಉಪಯೋಗಿಸಿ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಒಂದು ವೇಳೆ ಟ್ರೈನಿಂಗ್ ಆಗಿದ್ದರೂ ಸಹ ಆ ನಾರ್‍ಮಲ್ ಸ್ಕೂಲುಗಳಲ್ಲಿ ಕಲಿತದ್ದನ್ನು ಆ ಋಣ ತಮಗೆ ಬೇಡವೆಂದು ಅಲ್ಲಿಯೇ ಗುರುದಕ್ಷಿಣೆ ಕೊಟ್ಟು ಬಿಟ್ಟು ತಮ್ಮ ಹಿಂದಿನ ಪದ್ಧತಿಗಳಂತೆಯೇ ಪಾಠ ಮಾಡುತ್ತಿದ್ದರು. ಸುಮಾರು ಶೇಕಡ ಇಪ್ಪತ್ತು ಮಂದಿ ಒಳ್ಳೆಯ ದಕ್ಷರಾದ ಉಪಾಧ್ಯಾಯರು ಇರುತ್ತಿದ್ದರು; ಅವರು ಯಾರಿಂದಲೂ ಹೇಳಿಸಿಕೊಳ್ಳದೆ, ಯಾರ ಕಾವಲೂ ಮೇಲ್ವಿಚಾರಣೆಯೂ ಬೇಕಿಲ್ಲದೆ ತಂತಮ್ಮ ಕೆಲಸಗಳನ್ನು ಚೆನ್ನಾಗಿ ಮಾಡಿ ಕೊಂಡು ಹೋಗುತ್ತಿದ್ದರು.

ಆದ್ದರಿಂದ ಪಾಠ ಶಾಲೆಗಳಿಗೆ ತಕ್ಕ ಕಟ್ಟಡಗಳೂ ಉಪಕರಣಗಳೂ ಇಲ್ಲದೇ ಇರುವುದರ ಜೊತೆಗೆ ಮೇಲೆ ಹೇಳಿದ ನಿರುತ್ಸಾಹಕ ಸನ್ನಿವೇಶಗಳನ್ನೂ ಸೇರ್ಪಡಿಸಿಕೊಂಡು ರೇಂಜಿನಲ್ಲಿ ವಿದ್ಯಾಭಿವೃದ್ಧಿಯನ್ನುಂಟು ಮಾಡಬೇಕಾಗಿತ್ತು ; ಉಪಾಧ್ಯಾಯರಲ್ಲಿ ಶಿಸ್ತನ್ನು ಬೆಳಸಬೇಕಾಗಿತ್ತು ; ಅವರಲ್ಲಿ ಉತ್ಸಾಹವನ್ನೂ ತನ್ನ ಬಗ್ಗೆ ಪ್ರೇಮವನ್ನೂ ರಂಗಣ್ಣನು ಬೆಳಸಬೇಕಾಗಿತ್ತು. ಮೇಲಿನ ಆಲೋಚನಾ ತರಂಗಗಳಲ್ಲಿ ಮಗ್ನನಾಗಿ ರಂಗಣ್ಣನು ಹರಪುರದ ಬಂಗಲೆಯಲ್ಲಿ ಮಂಚದ ಮೇಲೆ ಮಲಗಿದ್ದನು. ಸೊಗಸಾದ ಮೆತ್ತನೆಯ ಹಾಸಿಗೆ; ಕಸೂತಿ ಕೆಲಸ ಮಾಡಿ ನೀಲಿ ದಾರದಲ್ಲಿ ಅವನ ಹೆಸರನ್ನು ಚಿತ್ರಿಸಿದ್ದ ಗವುಸುಳ್ಳ ದಿಂಬುಗಳು ; ಬ್ರಿಟಿಷ್‌ ತಯಾರಿಕೆಯ, ಬೂರ್ನೀಸು. ಶುಭ್ರವಾದ ಸೊಳ್ಳೆಯ ಪರದೆ. ಆ ವಿಲಾಸದ ಭೋಗದ ಶಯ್ಯೆಯಲ್ಲಿ ರಂಗಣ್ಣ ಮಲಗಿದ್ದಾನೆ. ಆ ಕೊಟಡಿಯಲ್ಲಿ ಮೇಜಿನ ಮೇಲೆ ಹಾಸಿದ್ದ ಸ್ವಂತವಾದ ಹಸುರಬಣ್ಣದ ನುಣುಪಾದ ಮುಚ್ಚು ಬನಾತು. ಅದರ ಮೇಲೆ ಕಚೇರಿಯ ಕೆಲವು ಕಾಗದಗಳು, ಪಕ್ಕದ ಸ್ಟೂಲಿನ ಮೇಲೆ ಹೊಳಪಿನ ಕಂಚಿನ ಕೂಜ, ಲೋಟ, ನೆಲಕ್ಕೆ ಹಾಕಿದ್ದ ಜಮಖಾನದ ಒಂದು ಕಡೆ ತಿಂಡಿಗಳು ತುಂಬಿದ್ದ ಚಿಕ್ಕ ಬೆತ್ತದ ಪೆಟ್ಟಿಗೆ ; ದೂರದಲ್ಲಿ ಅದರ ಮೇಲೆ ಚೆನ್ನಾಗಿ ಮಡಿಸಿಟ್ಟಿದ್ದ ಶಾಲು, ಟರ್ಕಿ ಟವಲ್ಲುಗಳು ಮತ್ತು ಪಂಚೆಗಳು. ಅಂಗಿಯ ನಿಲುಕಟ್ಟಿನ ಮೇಲೆ, ಅವನ ಸೂಟುಗಳು ಮತ್ತು ರುಮಾಲು, ಆ ಸರ್ಕಿಟು ಜೀವನದ ಸೊಗಸನ್ನು ನೋಡಿ ದೇವತೆಗಳು ಭೂಮಿಯಲ್ಲಿ ಅವತರಿಸಲು ತವಕ ಪಡುತ್ತಿದ್ದರೆಂದ ಮೇಲೆ ಹೆಚ್ಚಾಗಿ ಹೇಳತಕ್ಕದ್ದೇನು! ಬೇರೆ ಇಲಾಖೆಯವರು ಬೆರಗಾಗಿ ಹೋಗಿದ್ದರು. ಆ ದಿನ ಬೆಳಗ್ಗೆ ರಂಗಣ್ಣ ಬಹಳ ಸುತ್ತಾಡಿಕೊಂಡು ಬಂದಿದ್ದುದರಿಂದ ಊಟ ಮಾಡಿದ ಮೇಲೆ ಹೆಚ್ಚು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಿತ್ತು,

ಸಾಯಂಕಾಲ ನಾಲ್ಕು ಗಂಟೆಗೆ ಹಾಸಿಗೆಯಿಂದೆದ್ದು ಮುಖವನ್ನು ತೊಳೆದು ಕೊಂಡು ಕೊಟಡಿಗೆ ರಂಗಣ್ಣನು ಬಂದನು. ಗೋಪಾಲ ತಟ್ಟೆಯಲ್ಲಿ ಸಜ್ಜಿಗೆ, ಲೋಟದಲ್ಲಿ ಕಾಫಿ, ನಾಲ್ಕು ರಸಬಾಳೆ ಹಣ್ಣುಗಳನ್ನು ತಂದಿಟ್ಟನು. ಆ ಹೊತ್ತಿಗೆ ಶಂಕರಪ್ಪ ತಲೆ ಹಾಕಿ, ‘ಆವಲಹಳ್ಳಿಯ ದೊಡ್ಡ ಬೋರೇಗೌಡರು ಬಂದಿದ್ದಾರೆ’ ಎಂದು ವರ್ತಮಾನವನ್ನು ಕೊಟ್ಟನು. ‘ಒಂದು ಕುರ್ಚಿ ತಂದು ಹಾಕಿ, ಶಂಕರಪ್ಪ! ಗೋಪಾಲ! ಗೌಡರಿಗೂ ಏನಾದರೂ ತಂದುಕೊಡು’ ಎಂದು ಹೇಳಿ ರಂಗಣ್ಣನೇ ಎದ್ದು ಹೋಗಿ, ‘ಬರಬೇಕು, ಗೌಡರು, ಕ್ಷಮಿಸಬೇಕು ; ಬಹಳ ಹೊತ್ತಿನಿಂದ ಕಾದಿದ್ದಿರೋ ಏನೋ ? ಎಂದು ಹಸ್ತಲಾಘವ ಕೊಟ್ಟು ಅವರನ್ನು ಸ್ವಾಗತಿಸಿ ಒಳಕ್ಕೆ ಕರೆದುಕೊಂಡು ಬಂದನು. ದೊಡ್ಡ ಬೋರೇಗೌಡರು ಭಾರಿ ಒಕ್ಕಲಿಗರು, ವರ್ಷಕ್ಕೆ ಒಂದು ಸಾವಿರ ರೂಪಾಯಿಗಳ ಮೇಲೆ ಕಂದಾಯ ಕಟ್ಟುವ ಗಟ್ಟಿ ಕುಳ, ಆದರೆ ಅವರು ರಾಜಕೀಯದಲ್ಲಿ ಪ್ರವೇಶ ಮಾಡಿದವರಲ್ಲ ; ಅವರಿಗೆ ಪ್ರಜಾಪ್ರತಿನಿಧಿಸಭೆ ಮೊದಲಾದುವು ಬೇಕಾಗಿರಲಿಲ್ಲ. ತಮ್ಮ ಹಳ್ಳಿಯಲ್ಲಿ ಐದು ಸಾವಿರ ರುಪಾಯಿ ಖರ್ಚು ಮಾಡಿ ಪ್ರಾಥಮಿಕ ಪಾಠಶಾಲೆಗೆ ಒಳ್ಳೆಯ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಇತರ ವಿಧಗಳಲ್ಲಿಯೂ ಸಾರ್ವಜನಿಕ ಕಾರ್‍ಯಗಳಿಗೆ ಸಹಾಯ ಮಾಡುತ್ತಿದ್ದರು. ಗೋಪಾಲನು ಗೌಡರಿಗೂ ಉಪಾಹಾರವನ್ನು ತಂದಿಟ್ಟ ಮೇಲೆ ರಂಗಣ್ಣ ತನ್ನ ತಿಂಡಿಯ ವೆಟ್ಟಿಗೆಯನ್ನು ತೆರೆದನು. ಅವನ ಹೆಂಡತಿ ಸರ್ಕಿಟು ಕಾಲದಲ್ಲಿ ಗಂಡನಿಗೆ ಕೈಗಾವಲು ತಿಂಡಿ ಇರಲೆಂದು ಮಾಡಿ ಕೊಟ್ಟಿದ್ದ ತೇಂಗೊಳಲು, ಚಕ್ಕುಲಿ ಮತ್ತು ಬೇಸಿನ್ ಲಾಡುಗಳು ಅದರಲ್ಲಿದ್ದುವು. ಅವುಗಳಲ್ಲಿ ಕೆಲವನ್ನು ತೆಗೆದು ರಂಗಣ್ಣ ತಟ್ಟೆಯಲ್ಲಿಟ್ಟನು. ಗೌಡರು ಸಂತೋಷ ಪಟ್ಟದ್ದು ಒಂದೇ ಅಲ್ಲ ; ‘ಏನು ಸ್ವಾಮಿ ! ದೊಡ್ಡ ಸಾಹೇಬರಿಗೂ ಇಂಥ ಉಪಾಹಾರ ದೊರೆಯುವುದಿಲ್ಲವಲ್ಲ! ಪುಣ್ಯವಂತರು ಸ್ವಾಮಿ ತಾವು!’ ಎಂದು ಮೆಚ್ಚಿಕೆಯ ಮಾತುಗಳನ್ನಾಡುತ್ತ ತಟ್ಟೆಯಲ್ಲಿದ್ದುದನ್ನು ತೆಗೆದು ಕೊಂಡರು.

ಗೌಡರೇ ! ನನಗೆ ಭತ್ಯದ ಹಣವನ್ನು ಸರ್ಕಾದವರು ಏನು ಕೊಡುತ್ತಾರೋ ಅದರ ಮೇಲೆ ಹತ್ತು ರೂಪಾಯಿಗಳನ್ನು ನಾನು ಖರ್ಚು ಮಾಡುತ್ತೇನೆ, ಭತ್ಯದ ಹಣದಲ್ಲಿ ಉಳಿತಾಯ ಮಾಡ ಹೋಗಿ ಹೊಟ್ಟೆಯನ್ನು ಒಣಗಿಸುವುದಿಲ್ಲ. ನಾನೂ ಹೊಟ್ಟೆ ತುಂಬ ತಿನ್ನುತ್ತೇನೆ; ನಿಮ್ಮಂಥ ಸ್ನೇಹಿತರು ಬಂದರೆ ಯಧಾಶಕ್ತಿ ಕೊಡುತ್ತೇನೆ. ನನ್ನ ಸರ್ಕೀಟು ಜೀವನದ ಮರ್ಮ ಇದು. ಬೇರೆ ಏನೂ ಇಲ್ಲ.’

‘ಹೌದು ಸ್ವಾಮಿ! ತಾವು ಹೇಳುವುದು ಸರಿ. ಹೊರಗೆ ಸುತ್ತಾಡುವ ಮನುಷ್ಯರು ಪುಷ್ಟಿಯಾಗಿ ಊಟಾ ಮಾಡಬೇಕು.’

‘ನಾನು ಊಟ ಮಾಡುವಾಗಲೆಲ್ಲ ಬಡ ಉಪಾಧ್ಯಾಯರ ನೆನಪು ನನಗೆ ಬರುತ್ತದೆ ಗೌಡರೆ!’

‘ಹಾದು ಸ್ವಾಮಿ! ಉಪಾಧ್ಯಾಯರಿಗೆ ಸಂಬಳ ಸಾಲದು. ಅದರಲ್ಲೂ ಆ ಗ್ರಾಂಟು ಸ್ಕೂಲ್ ಮೇಷ್ಟರುಗಳ ಗೋಳು ಹೇಳೋಕ್ಕಾಗೋದಿಲ್ಲ. ಏನು ಸ್ವಾಮಿ ! ಏಳು ರೂಪಾಯಿ, ಎಂಟು ರೂಪಾಯಿಗೆ ಜೀವನ ಹೇಗೆ ಮಾಡೋದು ? ಅವುಗಳನ್ನೆಲ್ಲ ಸರ್ಕಾರಿ ಸ್ಕೂಲುಗಳನ್ನಾಗಿ ಮಾಡಿಬಿಡಿ ಸ್ವಾಮಿ.’

‘ಸರ್ಕಾರದಲ್ಲಿ ಹಣ ಇಲ್ಲ ಅನ್ನುತ್ತಾರೆ. ಮಾಡುವ ಖರ್ಚುಗಳನ್ನೇನೋ ಬೇರೆ ಕಡೆಗಳಲ್ಲಿ ಮಾಡಿ ಬಿಡುತ್ತಾರೆ ದೇಶಕ್ಕೆ ಇರುವುದೇ ವಿದ್ಯೆ, ಅದೇ ಸಂಪತ್ತು, ಆ ಉಪಾಧ್ಯಾಯರ ಸ್ಥಿತಿ, ಆ ವಿದ್ಯಾಭ್ಯಾಸದ ಸ್ಥಿತಿ ಜ್ಞಾಪಕಕ್ಕೆ ಬಂದುಬಿಟ್ಟರೆ ಬಹಳ ದುಃಖವಾಗುತ್ತದೆ.’

‘ನಾವೇನು ಮಾಡುವುದು ಸ್ವಾಮಿ! ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಮೇಲಿನವರೋ ಬರಿಯ ಥಳಕು ಬಳಕು, ಮೋಟಾರುಗಳಲ್ಲಿ ಬಂದವರು ಬಂದದ್ದೆ, ಹೋದವರು ಹೋದದ್ದೇ! ನಮ್ಮ ಊರಿನ ಕೆರೆ ಆರು ವರ್ಷಗಳಿಂದ ನಾದುರಸ್ತಿನಲ್ಲಿದೆ. ಎಷ್ಟು ಅರ್ಜಿ ಕೊಟ್ಟರೂ ಕೇಳುವವರೇ ಇಲ್ಲ’

‘ಹೀಗೇ ! ನಡೆಯಲಿ ದರ್ಬಾರು. ಏನು ಗೌಡರು ಇಷ್ಟು ದೂರ ಬಂದದ್ದು?’

ಇಲ್ಲೇ ನಮ್ಮ ನೆಂಟರನ್ನ ನೋಡೋಣ ಅಂತ ಬಂದಿದ್ದೆ. ಸ್ವಾಮಿಯವರು ಸರ್ಕಿಟು ಬಂದಿದ್ದೀರಿ ಎನ್ನುವುದು ತಿಳಿಯಿತು. ಕಂಡು ಹೋಗೋಣ, ನಮ್ಮ ಹಳ್ಳಿಗೆ ಯಾವಾಗ ದಯಮಾಡಿಸ್ತಿರೋ ಕೇಳಿ ಕೊಂಡು ಹೋಗೋಣ ಅಂತ ಬಂದೆ.’

‘ಸಂತೋಷ ಗೌಡರೇ ! ನಾವೇನೂ ಇತರ ಇಲಾಖೆಗಳ ಅಧಿಕಾರಿಗಳಂತೆ ಪ್ರಭಾವಶಾಲಿಗಳಲ್ಲ. ವಿದ್ಯಾಭ್ಯಾಸದ ಇಲಾಖೆಯ ನೌಕರರನ್ನು ಆದರಿಸುವವರು ಯಾರಿದ್ದಾರೆ? ಅಪರೂಪವಾಗಿ ನಿಮ್ಮಂಥ ದೊಡ್ಡ ಮನಸ್ಸಿನ ದೊಡ್ಡ ಗೌಡರು ಅಷ್ಟೇ.’

‘ಸ್ವಾಮಿ, ತಾವು ಉಪಾಧ್ಯಾಯರಿಗೆಲ್ಲ ತಿಳಿವಳಿಕೆ ಕೊಟ್ಟು ಬಹಳ ಚೆನ್ನಾಗಿ ಪಾಠ ಶಾಲೆಗಳನ್ನು ಅಭಿವೃದ್ಧಿ ಸ್ಥಿತಿಗೆ ತರುತ್ತಿದ್ದೀರಿ ಎಂದು ಎಲ್ಲರೂ ಹೊಗಳುತ್ತಾರೆ.’

‘ಆ ಹೊಗಳಿಕೆ ನನಗೆ ಬೇಡ. ಈ ದಿನ ಹೊಗಳಿಕೆ ನಾಳೆ ತೆಗಳಿಕೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ರೂಢಿ. ನಿಮ್ಮ ಹಳ್ಳಿಗೆ ಬರಬೇಕೆಂದು ಹೇಳುತ್ತಿದ್ದೀರಿ. ನನ್ನ ಮಾತನ್ನು ನೀವು ನಡಸಿ ಕೊಡುವ ಭರವಸೆ ಕೊಟ್ಟರೆ ಬರುತ್ತೇನೆ’ ಎಂದು ಹೇಳಿ ರಂಗಣ್ಣ ನಕ್ಕನು.

‘ಅದೇನು ಸ್ವಾಮಿ ನಾನು ಮಾಡಬೇಕಾದ್ದು?’

‘ಗೌಡರೇ ! ಈಗ ನೋಡಿ, ನಮ್ಮ ಉವಾಧ್ಯಾಯರ ಸಂಘಗಳು ಅಲ್ಲಲ್ಲಿ ಸಭೆ ಸೇರುತ್ತವೆ. ಉಪಾಧ್ಯಾಯರು ಸರಿಯಾಗಿ ಬರುವುದಿಲ್ಲ. ಒಂದು ಗಂಟೆಯ ಕಾಲ ಅಥವಾ ಒಂದೂವರೆ ಗಂಟೆಯ ಕಾಲ ಏನೋ ಭಾಷಣ, ತಪ್ಪು ತಪ್ಪಾಗಿ ಒಂದು ಮಾದರಿ ಪಾರ, ಸ್ವಲ್ಪ ಸಂಗೀತ ಇಷ್ಟನ್ನು ಮಾಡಿ ಊರುಗಳಿಗೆ ಹೊರಟು ಹೋಗುತ್ತಾರೆ. ಪಾಠಶಾಲೆಗಳಲ್ಲಿ ನೋಡಿದರೆ ಟ್ರೈನಿಂಗ್ ಆದ ಉಪಾಧ್ಯಾಯರ ಸಂಖ್ಯೆ ಕಡಮೆ ; ಆಗಿದ್ದವರು ಎಲ್ಲವನ್ನೂ ಮರೆತುಕೊಂಡಿದ್ದಾರೆ. ಈ ಸಂಘದ ಸಭೆಗೆ ಇಲ್ಲಿ ನಿಜವಾಗಿಯೂ ಅವರಿಗೆ ಉಪಕಾರವಾಗುವ ಕೆಲಸ ನಡೆಯಬೇಕು. ಅದನ್ನು ಬಹಳ ದಿನಗಳಿಂದ ಆಲೋಚನೆ ಮಾಡುತ್ತಿದ್ದೇನೆ. ನಿಮಗೆ ದೇವರು ಕೃಪೆ ತೋರಿದ್ದಾನೆ ; ನೆಮ್ಮದಿ ಕುಳ ನೀವು, ನೀವು ಬಡ ಮೇಷ್ಟರುಗಳ ಮೇಲೆ ಕೃಪೆ ತೋರಿ ಒಪ್ಪೊತ್ತು ಅವರಿಗೆ ಊಟ ಹಾಕುವ ಏರ್ಪಾಟು ಮಾಡಿದರೆ ಆ ಸಭೆಯಲ್ಲಿ ಏನು ಕೆಲಸ ಮಾಡಬಹುದೆಂಬುದನ್ನು ನಾನು ತೋರಿಸುತ್ತೇನೆ. ವರ್ಷಕ್ಕೆ ಒಂದು ದಿನ, ಒಪ್ಪೊತ್ತು, ಮೇಷ್ಟರಿಗೆ ಅನ್ನ ಹಾಕಬೇಕು. ಅಷ್ಟೇ ನನ್ನ ಕೋರಿಕೆ.’

‘ಎಷ್ಟು ಮಂದಿ ಬಂದಾರು ಸ್ವಾಮಿ? ಇನ್ನೂರು ಜನ ಬಂದಾರಾ?’

‘ಎಲ್ಲಿ ಬಂತು! ಈ ಪ್ರಾಂತದ ಮೇಷ್ಟರುಗಳು ನಲವತ್ತು ಜನ, ಮಿಡಲ್ ಸ್ಕೂಲಿನವರು ಹತ್ತು ಜನ ಒಟ್ಟು ಐವತ್ತು ಜನ.’

‘ಇದೇನು ಹೆಚ್ಚು ಸ್ವಾಮಿ! ಭೇಷಕ್ ಏರ್ಪಾಟು ಮಾಡುತ್ತೇನೆ. ಸಂಘದ ಸಭೆ ನಮ್ಮ ಊರಿನಲ್ಲಿ ಸೇರಿಸಿ ಸ್ವಾಮಿ, ನೀವೇನೂ ಯೋಚನೆ ಮಾಡಬೇಡಿ.’

‘ಇದನ್ನು ನಿಮ್ಮಲ್ಲಿ ಪ್ರಸ್ತಾಪ ಮಾಡಬೇಕು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಈ ದಿನ ನೀವು ಇಲ್ಲಿಗೆ ಬಂದದ್ದು ಅನುಕೂಲವಾಯಿತು.’

‘ಆಗಲಿ ಸ್ವಾಮಿ, ಭರ್ಜರಿ ಏರ್ಪಾಟು ಮಾಡಿಸುತ್ತೇನೆ. ಇನ್ನೊಂದು ವಾರ ಬಿಟ್ಟು ಕೊಂಡು ಸಭೆ ಸೇರಿಸುತ್ತೀರಾ?’

‘ಹೌದು. ನಿಮಗೆ ಬಹಳ ಕೃತಜ್ಞನಾಗಿದ್ದೇನೆ’

‘ಅಯ್ಯೋ ಸ್ವಾಮಿ! ಇದೇನು ? ನಮ್ಮ ಮಕ್ಕಳು, ನಮ್ಮ ಸ್ಕೂಲು ಉದ್ಧಾರವಾಗುವುದಕ್ಕೆ ನೀವು ಹೇಳಿದ್ದೀರಿ. ನಿಮ್ಮ ಹೊಟ್ಟೆಗೇನಲ್ಲವಲ್ಲ.’

ಹೀಗೆ ಮಾತುಕತೆಗಳು ಮುಗಿದುವು. ಸಾಯಂಕಾಲ ಗೌಡರೂ ರಂಗಣ್ಣನೂ ಗಾಳಿ ಸೇವನೆಗೆ ಹೊರಟರು. ಹಿಂದಿರುಗಿ ಬರುವಾಗ ಗೌಡರು ತಮ್ಮ ನೆಂಟರ ಮನೆಗೆ ರಂಗಣ್ಣನನ್ನು ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. ರಾತ್ರಿ ಎಂಟು ಗಂಟೆಗೆ ರಂಗಣ್ಣ ಬಂಗಲೆಗೆ ಹಿಂದಿರುಗಿದನು. ಆ ಸಾಯಂಕಾಲ ಅವನ ಮನಸ್ಸಿನಲ್ಲಿ ಬಹಳ ಉತ್ಸಾಹ ಸಂತೋಷಗಳು ತುಂಬಿದ್ದುವು. ‘ಮೊದಲು ಒಂದು ಕಡೆ ಪ್ರಾರಂಭವಾಗಲಿ. ಆಮೇಲೆ ರೇಂಜಿನಲ್ಲೆಲ್ಲ ಇಂಥ ಏರ್ಪಾಟುಗಳನ್ನು ಮಾಡಿಬಿಡುತ್ತೇನೆ. ತಿಂಗಳಿಗೊಂದು ದಿನವಾದರೂ ಉಪಾಧ್ಯಾಯರು ಕಾಷ್ಠ ವ್ಯಸನಗಳನ್ನು
ಮರೆತು ಸಂತೋಷವಾಗಿರಲಿ; ಉಪಾಧ್ಯಾಯ ಸಂಘಗಳ ಸಭೆಗಳು ನಾರ್‍ಮಲ್ ಸ್ಕೂಲಿನ ಪ್ರತಿರೂಪಗಳಾಗಿ ಮೇಷ್ಟರುಗಳಿಗೆ ತಿಳಿವಳಿಕೆ ಹೆಚ್ಚಲಿ; ಉಪಾಧ್ಯಾಯರ ಮತ್ತು ಗ್ರಾಮಸ್ಥರ ಪರಸ್ಪರ ಸೌಹಾರ್ದ ಸಹಕಾರಗಳು ಬೆಳೆಯಲಿ’ – ಎಂದು ಹಾರೈಸುತ್ತ ಊಟಕ್ಕೆ ಕುಳಿತನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷೇಮ
Next post ಪ್ರಾಪ್ತಿ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…