ಆಶಮಾಡಿ ಪಾಶಕ ಬಿದ್ದಿತೋ ಚಿಗರಿ
ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ  ||ಪ||

ಮೇಯಲಿಕ್ಕೆ ಬಿಟ್ಟುಬಂದಿತು ತನ್ನ ಮರಿ
ಮೋಸದಿ ಸಿಲುಕಿತು ಅರಸನ ಕೈಸೇರಿ  ||ಅ.ಪ.||

ಬಿಡರಿ ಸ್ವಲ್ಪ ಕುಡಿಸಿ ಬರುನೆನು ಹಾಲ
ಅಗಲಿದಿಯಾ ಅಯ್ಯೋ ಬಾಲಗೋಪಾಲ
ಅರಸನಿಗೆ ಕರುಣ ಬರಲಿಲ್ಲರಿ
ಮುಖಭಂಗವಾಗಿತ್ತು ದುಃಖದೊಳು ಚಿಗರಿ  ||೧||

ಮನಿಗೆ ಹೋಗಿ ಮಕ್ಕಳ ನೋಡಿ ಬರುವೆನ್ರಿ
ಬೇಕಾರದವ್ರ ಬೇಡ್ರಿ ಕೊಡುನೆನು ಜಾಮೀನ್ರಿ
ಮೃಗಜಾತಿ ನಿನ್ನ ನಂಬಿಗೆಯೇನು
ಅಡವಿಯಲ್ಲಿ ಮೇಯುತ್ತಿದ್ದಿ ಬೆದರಿ  ||೨||

ಶರಣರ ಚರಣಕ್ಕೆ ಎರಗಿತು ಚಿಗರಿ
ಅರಸನ ಕೈಯೊಳಗಿಂದ ಬಿಡಿಸಿರಿ
ಅರವುಳ್ಳ ಶರಣರು ಕಕಲಾತಿ ಮಾಡಿದರು
ಸಕಲಸಂಪನ್ನರಾಗಿ ಬಿಡಿಸಿದರು ಚಿಗುರಿ  ||೩||

ಕರಮುಗದು ಚಿಗರಿ ವಂದನಮಾಡಿ
ಸೆರಮನಿ ಬಿಡಿಸಿರಿ ಕರುಣೆಮಾಡಿ
ಎರಡು ಮಕ್ಕಳ ತಂದು ಶರಣರ ಮುಂದೆ
ಅಡಿದಾವರೆಗೆ ಒಪ್ಪಿಸೇನಿ ಬೇಕಾದ್ದಮಾಡ್ರಿ  ||೪||

ಮಕ್ಕಳು ಅಂದಾವು ಮುಂಚೆ ನಮ್ಮನ್ನು ಕೊಯ್ಯಿರಿ
ನಮ್ಮ ತಾಯಿ ಸಲಹಿ ನೀವು ಹಿತವಂತರಾಗಿರಿ
ಅರಸನ ಮನಸಿಗೆ ಆದೀತೋ ಫನಶಾಂತಿ
ಅನುಮಾನ ಯಾತಕ್ಕೆ ಹೋಗು ಚಿಗರಿ  ||೫||

ಶರಣರ ಅನುಗ್ರಹದಿ ಉಳಿದಾವು ಮೂರು ಜನ್ಮ
ಸರ್ವಜನರು ಅನ್ನುವರು ಶರೀಫಸಾಹೇಬನ ಕಲ್ಮಾ
ಅಲ್ಲಮನ ಧ್ಯಾನ ಕಲ್ಮಾನ ಸೂತ್ರ
ಬಹದ್ದೂರ ಗೋವಿಂದನ ಧ್ಯಾನ  ||೬||

*****