ಪತ್ರ ೧

ಪತ್ರ ೧

ಪ್ರೀತಿಯ ಗೆಳೆಯಾ,

ಜೂನ್ ತಿಂಗಳು ಮೊದಲ ತಾರೀಕು. ಏನೋಧಾವಂತ, ಆತಂಕ ಎದೆಯೊಳಗೆ. ಇಂದು ಶಾಲೆಯ ಹೊಸ ಅಂಗಳದಲ್ಲಿ ಪುಟ್ಟ ಪಾದಗಳನ್ನು ಪ್ರಪ್ರಥಮವಾಗಿ ಹೆಜ್ಜೆ ಇಡುವ ಮಗುವಿಗೂ, ಅದರ ಅಪ್ಪ ಅಮ್ಮನಿಗೂ ಯಾವುದೇ ದೊಡ್ಡ ಯುದ್ಧದ ಮೈದಾನಕ್ಕೆ ಹೊರಡುವ ಆತಂಕ. ಒಂದೇ ದಿನದಲ್ಲಿ ತಮ್ಮ ಮಗು ದೊಡ್ಡ ಇಂಜನೀಯರ್, ಡಾಕ್ಟರ್, ಐ.ಎ.ಎಸ್. ಆಫೀಸರ್ ಆದ ಹಾಗೆ ಕಾಣುವ ಕನಸಿನ ಗಂಟು. ಇನ್ನೂ ನಿದ್ದೆ ಕಣ್ಣಿನಲ್ಲಿ ತೇಲುವ ನೋಟ ಹೊಂದಿದ ಮಗು ಶಾಲೆ ಆವರಣದಲ್ಲಿ, ಇತರ ದೊಡ್ಡ ಮಕ್ಕಳನ್ನು ಕಂಡು, ಹೌಹಾರಿ ಕಣ್ಣುಗಳ ತುಂಬು ನೀರು ತುಂಬಿಕೊಂಡು ಬಿಕ್ಕುವುದು ಕಂಡಾಗ, ನನಗೆ ಒಳಗೊಳಗೆ ಬಿಕ್ಕುಗಳು ಏಳುತ್ತವೆ.

ನೀನು ಹಾಗೆಯೇ ಪ್ರಥಮವಾಗಿ ಶಾಲೆ ಆವರಣ ಕಂಡು ಅತ್ತಿದ್ದಿಯೋ? ಹೇಗೆ ರಚ್ಚೆ ಹಿಡಿದಿದ್ದೆ? ಅಮ್ಮನ ಸೆರಗಿನಲ್ಲಿ ಮುಖ ಮುಚ್ಚಿಕೊಂಡಿದ್ದೀಯೋ ಹೇಗೆ? ನನಗಂತೂ ಚಿಕ್ಕಿ ದರದರ ಗದ್ದೇ ಅಂಚಿನಲ್ಲಿ ಕೈ ಹಿಡಿದು ಎಳೆದು ಕೊಂಡು ಹೋಗಿ ಕೂಡಿಸಿ ಬಂದಿದ್ದಳು. ನಾನು ಬೆತ್ತ ಹಿಡಿದು ನಿಂತಿದ್ದ ಬಿಳಿಲುಂಗಿ, ಬಿಳಿ ಅಂಗಿಯ ಮೇಷ್ಟ್ರರ ಅವತಾರ ಕಂಡೇ ಭೂಮಿಗೆ ಇಳಿದು ಹೋಗಿದ್ದೆ. ಸಂಜೆ ಶಾಲೆ ಬಿಟ್ಟ ನಂತರ ಟಿ.ಬಿ. ಆಗಿ ನಮ್ಮಿಂದ ದೂರದ ಕೋಣೆಯಲ್ಲಿದ್ದ ಕಾತಿಯ ಬಾಗಿಲಿನ ಅಂಚಿಗೆ ನಿಂತು ಬಿಕ್ಕಿದೆ. ಆಗ ಕಾತಿ ಹೇಳಿದ ಒಂದು ಮಾತು ನನಗೆ ಈಗಲೂ ನೆನಪಿದೆ. ಬಹಳಷ್ಟು ಓದಬೇಕು. ಬರೀ ಓದಬೇಕು. ಆದರೆ ಆ ಸಂಜೆ ಎಲ್ಲಾ ತಾಯಿಯಂತೆ ಕಾತಿ ನನ್ನ ತಬ್ಬಲಿಲ್ಲ. ತೊಡೆಯ ಮೇಲೆ ಕೂಡಿಸಿಕೊಳ್ಳಲಿಲ್ಲ. ಗೆಳೆಯಾ, ಎಂದಿಗೂ ಬಿಡಿಸಲಾಗದ ಒಂಟಿತನದ ಗಂಟು ನನ್ನೆದೆಯೊಳಗೆ ಶಾಶ್ವತವಾಗಿ ಕಗ್ಗಂಟಾಗಿ ಉಳಿದು ಬಿಟ್ಟಿತು. ನೀನು ಶಾಲೆಗೆ ಹೋಗಿ ಬಂದ ಮೊದಲ ದಿವಸ ನಿನ್ನಮ್ಮ ನಿನಗೆ ತಿನ್ನಲು ಏನು ಕೊಟ್ಟಿದ್ದಳು, ನೆನಪಿದೆಯಾ? ಈಗಿನ ಮಕ್ಕಳ ಕಂಪಾಸ ತುಂಬ ಎಷ್ಟೊಂದು ಪೆನ್ನುಗಳು, ಬಣ್ಣದ ಪೆನ್ಸಿಲ್ಗಳು. ನನಗೆ ಒಂದೇ ಪಾಟಿ, ಏಳನೇಯ ತರಗತಿಯವರಿಗೆ ಒಂದೇ ಅಂಗಿ, ಒಂದು ಪುಟ್ಟ ಚೂರು ಬಳಪದ ಕಡ್ಡಿ, ಅಜ್ಜಯ್ಯ ಒಂದುವಾರದ ಲೆಕ್ಕ ಇಟ್ಟು ಮುರಿದು ಕೊಡುತ್ತಿದ್ದರು. ಸೀಳಿದ ಪಾಟಿಯ ತುಂಬ ನಾನು ಎಷ್ಟು ಚೆನ್ನಾಗಿ ಮಗ್ಗಿ ಬರೆಯುತ್ತಿದ್ದೆ ಗೊತ್ತಾ? ಆ ಸೀಳಿದ ಗೆರೆಯ ಸಂದಿಯಲ್ಲಿ ನಾನು ಕಂದೀಲಿನ ಬೆಳಕಿನ ಕೋಲನ್ನು ಕೆಂಪು ನೆಲದ ಮೇಲೆ ಮೂಡಿಸುತ್ತಿದ್ದೆ. ಮಗ್ಗೀ ಬರೆದು ಬೇಸರವಾದಾಗ ಅದು ನನ್ನ ಪ್ರೀತಿಯ ಆಟವಾಗಿತ್ತು. ಒಮ್ಮೊಮ್ಮೆ ಕಂದೀಲಿನ ದೀಪ ಏರಿಸುವುದು ಇಳಿಸುವುದು ಮಾಡಿದಾಗ, ಅದು ಕೈಯ ಹಿಡಿತಕ್ಕೆ ಸಿಗದೇ ನಂದಿಹೋಗುತ್ತಿತ್ತು. ಆವಾಗ ನಾನು ಗುನ್ನೇಗಾರಳಾಗಿ, ಅಜ್ಜಯ್ಯನಿಂದ ಬೆನ್ನ ಮೇಲೆ ಡುಬುಕ್ ಡುಬುಕ್ ಗುದ್ದುಗಳನ್ನು ಹೇರಿಸಿಕೊಳ್ಳುತ್ತಿದ್ದೆ. ನಿನಗೇನಾದರೂ ಆ ತರಹದ ಕಡತಗಳು ಬಿದ್ದಾವೇನು? ಈಗ ಆ ತರಹದ ಕಂದಿಲೂ ಇಲ್ಲ, ಮಕ್ಕಳ ದಂಡೂ ಇಲ್ಲ. ಬೆನ್ನ ಮೇಲೆ ಗುದ್ದೂ ಇಲ್ಲ. ನನ್ನ ಶಾಲೆಯ ಮಕ್ಕಳು ಪಾಟ ಕಂದೀಲು ಅಂದರೆ ಏನ್ರೀ Mam ಅನ್ನುತ್ತಾವೆ.

ಶಾಲೆ ಪ್ರತಿಯೊಬ್ಬರಿಗೂ ವಿಚಿತ್ರ ಸೆಳೆತದ ಸ್ಪಂದನದ ಸ್ಥಳ. ಮನುಕುಲಕದ ಮಹಾತ್ಮರೆಲ್ಲರೂ ಈ ಅಂಗಳದ ದೂಳಿನಲ್ಲಿ ಆಡಿದವರೇ. ಮಕ್ಕಳು ಬಯಲಲ್ಲಿ ಗುಂಪು ಗುಂಪಾಗಿ ಆಡುವಾಗ ಹೂಗುಚ್ಛಗಳು ತೇಲಿದ ಹಾಗೆ ಅನಿಸುತ್ತವೆ. ಒಮ್ಮೊಮ್ಮೆ ಅವರಾಡುವ ಮಾತುಗಳನ್ನು ಕೇಳುವುದೇ ಸ್ವರ್ಗಸುಖ. ಇವತ್ತು ಆರನೇ ತರಗತಿಯಲ್ಲಿ ಹುಡುಗ ಹುಡುಗಿಯರಲ್ಲಿ ಪುಟ್ಟ ಜಗಳ. ತುಂಟನೊಬ್ಬ ಕರಿ ಇದ್ದ ಹುಡುಗಿಗೆ ನಿನ್ನ Black ಬಣ್ಣವನ್ನು White ಮಾಡಿಯೇಮಾಡುತ್ತೀನಿ ಅಂದನಂತೆ. Staff roomನಿಂದ ಕರೆ ಕಳುಹಿಸಿ ವಿಚಾರಿಸಿದಾಗ ನನಗೆ ಲೇ ಅಂತ್ಯಾಳೆ ಮ್ಯಾಮ್ ಅಂದ. ನನಗೆ ಅವೆರಡು ಮಕ್ಕಳ ಮುಖದ ಗೊಂದಲ ಹಾಗೂ ಮನಸ್ಸಿನ ಗೊಂದಲು ಎರಡನ್ನೂ ಹೇಗೆ ಬಿಡಸಬೇಕು ಎಂಬುದೇ ಹೊಳೆಯಲಿಲ್ಲ. ನಾನೇ ಗೊಂದಲಕ್ಕೆ ಒಳಗಾದೆ.

ನಾನು ಇಗರ್ಜಿ ಸ್ಕೂಲಿನಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ವಿಶ್ವನಾಥ ಎಂಬ ಕೊಂಕಣಿಯ ಧಡಿಯ ನಿನ್ನನ್ನು ದೆವ್ವಕ್ಕೆ ಹಿಡಿದು ಕೊಡುತ್ತೇನೆ. ನೀನು ನನ್ನ ಪಾಟಿಯಲ್ಲಿ ಮೂವತ್ತರ ತನಕ ಮಗ್ಗಿ ಬರೆಯದೇ ಇದ್ದರೆ ಅಂತ ಹೆದುರಿಸುತ್ತಿದ್ದ. ನಾನು, ಲಿಲ್ಲೀ ಪಾಟಿಯ ಹಿಂದುಗಡೆ ಮುಂದುಗಡೆ ಪ್ರಾರ್ಥನೆ ಗಂಟೆಹೊಡೆಯುವದರೊಳಗೆ ಬಗ್ಗಿ ಮಗ್ಗಿ ಬರೆದುಕೊಡುತ್ತಿದ್ದೆವು. ಬರೆಯಿಸಿಕೊಂಡು, ಗಣಿತ ಮೇಷ್ಟ್ರುರ ಬೆತ್ತದ ಏಟಿನಿಂದ ತಪ್ಪಿಸಿಕೊಂಡಿದ್ದ. ಒಮ್ಮೆ ಕಾತಿ ಮುಂದೆ ಅವಲತ್ತು ಕೊಂಡಾಗ ದೆವ್ವಗಳು ಇಲ್ಲವೇ ಇಲ್ಲ ಅಂದಿದ್ದಳು. ಈಗಿನಂತೆ ಆಗಲೂ ಕೂಡಾ ರ್‍ಯಾಗಿಂಗ ಇತ್ತಲ್ಲ. ಒಮ್ಮೆ ಆಫ್ ಪಿರೇಡಿನಲ್ಲಿ ಗಣಿತ ಮೇಷ್ಟ್ರು ಎಲ್ಲರಿಗೂ ಈಗಲೇ ಮೂವತ್ತರ ತನಕ ಮಗ್ಗಿ ಬರೆದು ತೋರಿಸಿರಿ ಎಂದಾಗ ಅವನ ಹೂರಣ ಹೊರಗೆ ಬಿತ್ತಲ್ಲ. ಆ ದಿನ ಗಣಿತ ಮೇಷ್ಟ್ರು ಅವನಿಗೆ ಬರಲು ಕೋಲಿನಿಂದ ಹೊಡೆದಾಗ ನನಗೆ ಲಿಲ್ಲಿಗೆ ಎಷ್ಟೊಂದು ಖುಷಿಯಾಗಿತ್ತು ಗೊತ್ತಾ? ಮತ್ತೆ ಅವನು ನಮ್ಮ ಸುದ್ದಿಗೆ ಬರಲಿಲ್ಲ. ನೀನು ಹೀಗೆ ಶಾಲೆಯಲ್ಲಿ
ಹುಡುಗಿಯರನ್ನು ಕಾಡಿಸಿ ಪೀಡಿಸಿದ ನೆನಪಿದೆಯಾ? ದೋಸ್ತ.

ಮಕ್ಕಳ ಜಗತ್ತು ಎಷ್ಟೊಂದು ನಿಗೂಢ. ಅವು ಅತ್ತರೆ ಎದೆಯಲ್ಲಿ ಕಳವಳ, ಅವುನಕ್ಕರೆ ಮನಸ್ಸಿಗೆ ಹಾಯಿ, ಅವು ಹೊಸ ವಿಷಯ ಹೇಳಿದರೆ ವಿಸ್ಮಯ. ಪ್ರತಿ ಕ್ಷಣವೂ ಹೊಸತನ. ಮಕ್ಕಳಿಂದ ನಾವುಗಳು ಕಲಿಯುವುದು ಎಷ್ಟೊಂದು ಇದೆ ಗೆಳೆಯಾ, ನಾವು ಮಕ್ಕಳಿದ್ದಾಗ ಮನಸ್ಸಿಗೆ ಎಷ್ಟೊಂದು ಕನಸುಗಳು. ಎಷ್ಟೊಂದು ತಿಳಿಭಾವ. ಈಗ ಏಕೆ ಆ ನಿರ್ಮಲ ಕೋಮಲ ಸೂಕ್ಷ್ಮತೆ ಹುಟ್ಟುವದಿಲ್ಲ. ನನಗೆ ಪುಠಾಣಿ ಒಬ್ಬಳು ದಿನಾಲೂ ಒಂದು ಹೂವು ತಂದು ಕೊಡುತ್ತಾಳೆ. ನಮ್ಮನೆ ಗಿಡದಲ್ಲಿ ಅರಳಿದ್ದು ಎನ್ನುತ್ತಾಳೆ. ಅವಳು ತಂದುಕೊಡುವ ಎಲ್ಲಾ ಹೂವಿನ ಬಣ್ಣಗಳಲ್ಲೂ ನನಗೆ ನಿನ್ನ ಮುಖ ಕಾಣಿಸುತ್ತದೆ.

ಶಾಲೆಗೆ ಸೇರುವುದು ಹೊಸ ಹೆಜ್ಜೆ. ಶಾಲೆಯಲ್ಲಿ ಓದುವುದು, ಗೆಳೆತನ ಮಾಡುವುದು, ಟೀಚರನ್ನು ಆರಾಧಿಸುವುದು ಹೊಸ ಚಿಗುರು. ಬೆಳವಣಿಗೆಯ ಘಟದ ಈ ದಿಕ್ಕಿನಲ್ಲಿ ಹಲವು ಬದಲಾವಣೆಗಳೊಂದಿಗೆ ಪ್ರಶ್ನೆಗಳು ಕಾಲಕಾಲಕ್ಕೆ ನಡೆಯುತ್ತ ಬಂದಿವೆ. ಇಲ್ಲಿ ಚೇತನಗೊಂಡ ಮನಸ್ಸುಗಳು ಜಗತ್ತನ್ನಾಳುಕತ್ತವೆ. ಬದುಕು ಸಂಸ್ಕೃತಿ ಕಟ್ಟುತ್ತವೆ. ಇತಿಹಾಸ ಮೆಲ್ಲಗೆ ಸದ್ದಿಲ್ಲದೇ ಅರಳುತ್ತದೆ. ಮುಂದುವರಿಯುತ್ತಿರುವ ಭಾಷೆ ಭಾವಗಳೊಟ್ಟಿಗೆ ನಮ್ಮ ಬದುಕು ಜೀವಂತಿಕೆಗೊಳ್ಳುತ್ತದೆ. ಶಾಲೆಯ ಅಂಗಳದಲ್ಲಿ ಚಿಗುರಿದ ಭಾವ ಚಿಂತನೆಯಾಗಿ ರೂಪಗೊಳ್ಳುತ್ತದೆ. ಪಡೆಯುವುದು, ಪ್ರಖ್ಯಾತರಾಗುವುದು, ಈ ಅಂಗಳದ ಧೂಳಿನಿಂದಲೇ. ಎಷ್ಟೇ ಜನಪ್ರಿಯರಾದರೂ ಖಾತಿಯ ಉತ್ತುಂಗಕ್ಕೆ ಏರಿದರೂ, ಈ ಬಾಗಿಲುಗಳ ಕಿಟಕಿಗಳು ಗೋಡೆಗಳು, ಗೆಳೆಯರು ವಿಚಿತ್ರ ಚಿತ್ರವನ್ನು ಶಾಶ್ವತವಾಗಿ ಮನಸ್ಸಿನಲ್ಲಿ ಸ್ಥಾಪಿಸಿ ಬಿಟ್ಟಿರುತ್ತಾರೆ. ಎಲ್ಲೇ ಹೋದರೂ, ಯಾವ ಮೂಲೆಯಲ್ಲಿ ಇದ್ದರೂ, ಈ ಹಸಿ ನೆನಪು ಎಲ್ಲರನ್ನೂ ಕಾಡದೇ ಬಿಡುವುದಿಲ್ಲ. ನೀನು ಇಂಗ್ಲೆಂಡಿನಲ್ಲಿದ್ದಾಗ ಶಾಲೆ ನೆನಪಾದ ಹಾಗೆ. ಒಂದು ನಡೆದ ಘಟನೆ. ಬ್ಯಾಂಕ್ ಮೇನೇಜರನ ಹೆಂಡತಿಯೊಬ್ಬಳು ಕಾರಿನಲ್ಲಿ ಮುಂಜು ಮುಂಜಾನೆ ನೈಟಿ ಮೇಲೆಯ ಶಾಲೆಯ ಅಂಗಳಕ್ಕೆ ಬಂದವಳು, ಏನ್ರೀ ಯಾವನೋ ಕೆಟ್ಟ ಹುಡುಗ ನನ್ನ ಮಗನ ಡಬ್ಬಿಯ ದೋಸೆ ತಿಂದಿದ್ದಾನೆ ಅಂತೆ. ನನ್ನ ಮಗನೊಟ್ಟಿಗೆ ಯಾರನ್ನೂ ಕೂಡಿಸಬ್ಯಾಡ್ರಿ. ಅವನಿಗೆ ನಾನು ಎಲ್ಲಾ ಸ್ಪೆಶಲ್ಲಾಗಿ ಮಾಡ್ತೀನಿ ಅಂತ ಜೋರಾಗಿ ಕಿರುಚಿದಾಗ, ನೈಟಿ ಮೇಲೆ ಶಾಲೆಗೆ ಬರುವ ಮಹಾತಾಯಿ ತನ್ನ ಮಗುವಿಗೆ ಎಂತಹ ಸಾಮಾಜಿಕ ಸಾಂಗತ್ಯ ಕಲಿಸಬಲ್ಲಳು ಅಂತ ಅನಿಸಿತು. ಗೆಳೆಯ ಪಾಠದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡದಿದ್ದಕ್ಕೆ ಲೂಯಿ ಮಾಸ್ತರ ದೊಣ್ಣೆಯಲ್ಲಿ ಬಡೆದಾಗ ಮಂಡೆ ಒಡೆದು ಎರಡು ಹೊಲಿಗೆ ಬಿದ್ದಾಗಲೂ ಅಜ್ಜಯ್ಯ ಶಾಲೆಯ ಅಂಗಳಕ್ಕೆ ಕಾಲಿಡಲಿಲ್ಲ. ಯಾಕೋ ಎಲ್ಲ ನೆನಪಿಗೆ ಬರುತ್ತಲಿದೆ ಈ ದಿನ.

ಮನುಷ್ಯರನ್ನು ಅಂತಃ ಕರಣದಿಂದ ನೋಡುವ ಒಂದೇ ಸ್ಥಳವೆಂದರೆ ಶಾಲೆ ಅಲ್ಲವಾ. ಗೆಳೆಯಾ ಎಲ್ಲಾ ಗಳಿಗೆಗಳು ಸಹಜ ಸಂಪೂರ್ಣ ವಿಸ್ಮಯಗಳು, ಅಲ್ಲಿ ಕಳೆದ ಅಪರೂಪದ ಹೊಳಲುಗಳು. ನನಗೆ ಕೈ ತುಂಬಾ ಸಂಬಳ ಇಲ್ಲದಿದ್ದರೂ ಏನೋ ಹಿತವಿದೆ. ಒಮ್ಮೊಮ್ಮೆ ಆಡಳಿತ ಮಂಡಳಿಯವರ ಧೋರಣೆ ಬಹಳ ಬೇಸರ ಹೇಸಿಗೆ ಹುಟ್ಟುಹಾಕುತ್ತವೆ. ಮತ್ತೆ ಮರುದಿನ ಮಕ್ಕಳ ಲೋಕದಲ್ಲಿ ನನ್ನ ಉಡಿಯ ತುಂಬಾ ನಕ್ಷತ್ರಗಳು, ನೀನು ಎಷ್ಟು ದುಡಿಯುತ್ತಿ ಅಂತ ನಾನು ಕೇಳಲಾರೆ. ಆದರೆ ಎಷ್ಟು ನೆಮ್ಮದಿಯ ಕ್ಷಣಗಳು ಎದೆಗೆ ಅಮರಿಕೊಂಡವು ಗೆಳೆಯಾ ಅಂತ ಕೇಳಲು ಬಯಸುತ್ತೇನೆ.

ಯಾವುದೋ ಮನೆಯ ಜಂತಿಯ ಜೋಳಿಗೆಯಲ್ಲಿ ತೇಲಿದ ಮಗು, ನನ್ನ ಎದೆಯ ಅಂಗಳಕ್ಕೆ ಬಂದಾಗ ನಾನು ಮೆಲ್ಲ ಮೆಲ್ಲಗೆ ಮೃದು ಹಸ್ತಗಳನ್ನು ಹಿಡಿದು ಶಾಲೆಯ ಕ್ಲಾಸಿನೊಳಗೆ ತಂದು ನಿಲ್ಲಿಸುತ್ತೇನೆ. ಮತ್ತೆ ಬೆಚ್ಚನೆಯ ಭರವಸೆಯ ಮಾತುಗಳನ್ನಾಡುತ್ತೇನೆ. ಅವು ಮೆಲ್ಲಗೆ ನನ್ನ ಕೈಬಳೆ, ವಾಚು, ಸೆರಗು ಮುಟ್ಟುತ್ತವೆ. ಶಾಲೆಯ ಮುಂದಿನ ಗಿಡದಲ್ಲಿ ಕುಳಿತ ಹಕ್ಕಿಗಳನ್ನು ಅವುಗಳಿಗೆ ಅಪರೂಪಕ್ಕೆ ಒಮ್ಮೆ ತೋರಿಸುತ್ತೇನೆ. ಅವುಗಳ ಕಣ್ಣುಗಳಲ್ಲಿ ಬತ್ತಲಾರದ ಕನಸಿನ ತೊರೆಗಳಿವೆ. ನನಗೆ, ನಾನು ತಾಯಿ ಅಲ್ಲದಿದ್ದರೂ, ತಾಯತನದ ಸುಖ ಎದೆಗೆ ಅಮರುತ್ತದೆ. ನಿನಗೆ ಗೆಳೆಯಾ?

ನಿನ್ನ,
ಕಸ್ತೂರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಕಾವ್ಯ
Next post ಮೋಡ ಕವಿದಿದೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…