ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು;
ಪರನಾದದೊಳಗಿದ್ದ ಮೇಲೆ ಮರುಳೆ
ಬೋದವಾದಿಕರು ಬಹುತರದಿ ಬಗಳುವ ಜನರಪ-
ವಾದಕಂಜುವದ್ಯಾಕಲೇ ಮರುಳೆ                   ||೧||

ಗುರುಕರುಣ ತೀರ್ಥ ಪ್ರಸಾದ ತುಂಬಿದ ಪಾತ್ರೆ
ಕರಮುಟ್ಟಿ ಸವಿದು ಸುಖದಿ ಮೆರೆದು ಶರೀರವನು
ಮರೆದು ಮನ ಪರವಶದಿ ತಿರುಗುತಿರೆ
ನರಗುರಿಗಳ ಹಂಗೇನಲೇ ಮರುಳೆ               ||೨||

ಮಿಥ್ಯಾವಾಸನೆಯನಳಿದು ಮಾಯಾ ಮೋಹವ ತುಳಿದು
ಸಿದ್ಧಜ್ಞಾನ ಮನೆಯೊಳು ಇರುತಿರೆ
ಕದ್ದಡಗಲಿಬ್ಯಾಡ ಕರ್ಮಿಗಳ ಕಂಡರೆ ಕಾಲಿ-
ಲೊದ್ದು ಮುಂದಕೆ ನಡಿಯಲೋ ಮರುಳೆ               ||೩||

ತಂದೆ ಶಿಶುನಾಳ ಸದ್ಗುರುವರನು ಪಾಲಿಸಿದ
ಬಿಂದು ವಸ್ತುವಿನ ರುಚಿಯಾ ಕೊಂಡು
ಮಂದಮತಿಗಳು ನುಡಿದ ಮಾತಿಗೆ ಅಳುಕದೆ
ಅಂದದಲಿ ನಡಿದಾಡುತಿರೆ ಮರುಳೆ                 ||೪||
****