ಇಲ್ಲವೆನ್ನುವ ಭಾವ
ಉಲಿಯದಿರು… ಒಲವೇ,
ಇರುವುದಾದರೂ ಪ್ರೇಮ
ಎದೆಯ ಒಳಗೆ.

ಬೆಳಗು ಬಿಮ್ಮನೆ ಬಂದು
ಬೆಳಗುತಿದೆ ಮುಗಿಲು
ಕಣ್ಣಂಚಲಿ ಗುನುಗುತಿದೆ
ಮಧುರ ಸೆಲೆಯು.

ನೀನಿಲ್ಲದಿರೆ ಒಲವೇ
ಮನೆಯಂಗಳದ ಹೂ
ಕಮರಿ ಹೆಣ್ಣಹೆರಳಿನ ಗಂಟು
ಸಡಿಲವಿವುದು.

ಬತ್ತಿಹೋದ ಬರಡು
ಹೊಂಡದಲಿ ಜಲವಿಲ್ಲ:
ಜಳದ ಕಾವು ಹರಡಿ
ಮುಸುಕಿದಂದು.

ಗೊನೆ ಕಡಿದ ಬಾಳೆ
ಬದುಕದದು ಬಹಳ
ಬೆಂಡಾಗಿ ನರಳಿ
ಉರುಳುವುದು ಶೀಘ್ರ.

ಇಷ್ಟ ಕಷ್ಟವ ಕೇಳಿ
ರಮಿಸುವವರಿಲ್ಲದಿರೆ
ಒಡಲ ಕಡಲಿಗೆ ಸುನಾಮಿ
ಉಕ್ಕದಿರದು.

ಬಿಲದಲ್ಲಿ ಮೊಲವಿಹುದು
ಮುಗ್ಧ ಮಳೆಯಲಿ ಮಿಂದು
ಮೊಗೆಮೊಗೆವ ಪ್ರೀತಿಗದು
ಮಿಡುಕುತಿಹುದು.

ಮೂಲೆಸೇರಿದ ಬುಟ್ಟಿ
ಕಸದ ತೊಟ್ಟಿ ಸುಳ್ಳಲ್ಲ
ಮೋಹದಾ ಮಂದರಿಯ
ಹೊದೆಯದಿರೆ ಅದು ಬಾಳಲ್ಲ

ಕರುಣಿಸು ಒಲವೇ
ಕಮರದಂತೆ ಕನಸು
ಅನುಗ್ರಹಿಸು ನಿನ್ನೊಲವ
ಮರೆಯದಂತೆ ಮನಸು
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)