ಮಾಳಿಗೆ ಮೆಟ್ಟಲಲ್ಲೊಂದು ಬೆಕ್ಕು
ಮೇಲೆ ಹೋಗಲೊ ಕೆಳಗೆ ಹೋಗಲೊ ಎಂದು
ತಿಳಿಯದೆ ಗಾಢಾಲೋಚನೆಯಲ್ಲಿ ಸಿಕ್ಕು

ಬಂದೆನೆಲ್ಲಿಂದ ಹೋಗುವೆನೆಲ್ಲಿಗೆ
ಇಲ್ಲಿರುವೆ ಯಾಕೆ-ಒಂದೂ ಗೊತ್ತಿರದೆ
ನೊಡುವುದು ಮೇಲೆ ನೋಡುವುದು ಕೆಳಗೆ

ಯಾವುದು ನಿಜ ಯಾವುದು ಸುಳ್ಳು
ಮೇಲಿನಂತೆಯೆ ಇದೆ ಕೆಳಗೆ ಕೂಡ
ಯಾವ ರೂಪಕ್ಕೆ ಯಾವ ನೆರಳು ?

ತೆರೆದು ಮುಚ್ಚಿದ ಹಾಗೆ ಬಾಗಿಲು
ಬಂದವರು ಯಾರು ಹೋದವರು ಯಾರು
ಎವೆಯಿಕ್ಕಿ ತೆರೆದರೆ ರಾತ್ರಿಹಗಲು

ಬೆಕ್ಕು ಕಿವಿ ನಿಮಿರಿ ಆಲಿಸುವುದು
ಇಂಥ ನೀರವ ನಿಮಿಷಗಳಲ್ಲಿ ಸ್ವಂತ
ಯೋಚನೆಗಳು ಸಹ ಮಾಡುವುವು ಸದ್ದು

ಒಂದು ಯೋಜನ ದೂರ ಗೊಂಡಾರಣ್ಯ
ಅಲ್ಲಿ ಸಂಚರಿಸುವುದು ಇನ್ನೊಂದು ಮೃಗ-
ಇನ್ನೊಂದು ಯುಗದ ನಿರ್ಭೀತ ಪುಣ್ಯ
*****