ಧೂಪ-ದೀಪದಲ್ಲಿದ್ದ
ಹೂವು-ಗಂಧದಲ್ಲಿದ್ದ
ಚೆಲುವ ನಾರಾಯಣ

ಕರ್‍ಪೂರದಾರತಿಯಲ್ಲಿದ್ದ
ಕುಂಕುಮದಕ್ಷತೆಯಲ್ಲಿದ್ದ
ಚೆಲುವ ನಾರಾಯಣ

ಗಂಟೆ ಜಾಗಟೆಯಲ್ಲಿದ್ದ
ಮಂತ್ರ ಘೋಷದಲ್ಲಿದ್ದ
ಚೆಲುವ ನಾರಾಯಣ

ನಿತ್ಯ ಪೂಜೆಯಲ್ಲಿದ್ದ
ಹೊತ್ತ ಹರಕೆಯಲ್ಲಿದ್ದ
ಚೆಲುವ ನಾರಾಯಣ

ಮುದ್ದನುಕ್ಕಿಸುತ್ತಿದ್ದ
ನೆಟ್ಟಗೆ ದಿಟ್ಟಿಸುತ್ತಿದ್ದ
ಮರುಳಾಗದವರುಂಟೆ,
ಚೆಲುವ ನಾರಾಯಣ?

ಮುದ್ದು ಮುಖವನೆ
ನೆನೆದು
ಗಂಡನ ನೆನಪನೆ
ತೊರೆದು
ಕರೆಯಬಹುದೆ
ಚೆಲುವ ನಾರಾಯಣ?

ಮುದ್ದು ಮಗುವಿನ ತಾಯಿ
ಮನಸು
ತತ್ತರಿಸುವ ಹಾಯಿ
ಕರೆಯಬಹುದೆ
ಚೆಲುವ ನಾರಾಯಣ?

ಬಂಧುವನೆ ಬದಿಗಿರಿಸಿ
ಊರ ಮಂದಿಯನೂ
ಕಡೆಗಣಿಸಿ
ಕರೆಯಬಹುದೆ
ಚೆಲುವ ನಾರಾಯಣ?

ಯಾಕೆಂದು ತಿಳಿಯದು
ಏನೊಂದು ಹೊಳೆಯದು
ಒಲವಿನಾವೇಶ!
ವಿವಶಳಾದಳೆ ಅವಳು
ಚೆಲುವ ನಾರಾಯಣ?

ಹೊರಗೇನೂ ಕಾಣಿಸದು
ಒಳಗೇನೊ ಅನಿಸುವುದು
ಅದಕೂ ಅವನೆ ಕಾರಣ
ಚೆಲುವ ನಾರಾಯಣ

ನೆಮ್ಮಿ ನಲುಗಿರಬಹುದು
ಒಲಿದು ಕೆಟ್ಟವರುಂಟೆ?
ಒಲುಮೆ ಇಲ್ಲದಿರೆ
ಅವನ ಮುಟ್ಟುವುದುಂಟೆ?
ಎಂಟೆದೆಯ ತುಂಟನೆ
ಚೆಲುವ ನಾರಾಯಣ…..
*****