ಇಲ್ಲೇ ಎಲ್ಲೋ ಇರುವ ಕೃಷ್ಣ
ಇಲ್ಲೇ ಎಲ್ಲೋ ಇರುವ,
ಇಲ್ಲದ ಹಾಗೆ ನಟಿಸಿ ನಮ್ಮ
ಮಳ್ಳರ ಮಾಡಿ ನಗುವ.
ಬಳ್ಳೀ ಮಾಡದ ತುದಿಗೆ – ಅಲ್ಲೇ
ಮೊಲ್ಲೆ ಹೂಗಳ ಮರೆಗೆ
ಹಬ್ಬಿತೊ ಹೇಗೆ ಧೂಪ – ಅಥವಾ
ಚಲಿಸಿತೊ ಕೃಷ್ಣನ ರೂಪ?
ಬೀಸುವ ಗಾಳಿಯ ಏರಿ
ಮಾಡಿದೆ ಗಂಧ ಸವಾರಿ
ಹೇಳುತ್ತಿದೆ ‘ವನಮಾಲಿ
ಹಾಯ್ದುಹೋದ ಈ ದಾರಿ’
ತಿಂಗಳ ಬಾನಿನ ತುಂಬ
ನಡೆದಿದೆ ಮುಗಿಲಿನ ಆಟ,
ಮೂಡಿತು ಥಟ್ಟನೆ ಅಲ್ಲೇ
ಕಂಡಿತು ಕೃಷ್ಣನ ಮಾಟ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.