ಬಿಸಿಲು ಕುದುರೆಯನೇರಿ ಹೋಗಬೇಡೋ ಗೆಳೆಯಾ
ಬೆಂಗಾಡಿನಲಿ ಸುತ್ತಿ ಬೆವರ ಸುರಿಸಲು ಬೇಡ
ಬಯಕೆ ಬೆಟ್ಟವ ಹತ್ತಿ ಹೋಗಬೇಡೋ ಗೆಳೆಯಾ
ಬಂಡೆಯಂತೆ ಉರುಳಿ ಬೆರಗಾಗಲು ಬೇಡ ||ಬಿಸಿಲು||

ಬಿಸಿಲು ಮಚ್ಚಿನ ಮೇಲೆ ಬಿರಿದಿರಲು ಬಳಿ ಸೂರ್‍ಯ
ಕಿಸುರ ಕಣ್ಣ ಒರೆಸಿ ತುಂಬಿಕೊ ಬೆಳಕ ಪೂರ
ಬಿದಿರು ಮೆಳೆಯಲ್ಲಿ ಅಡಗಿಹನು ಪಿಳ್ಳಂಗೋವಿಯ ಒಡೆಯ
ನವಿಲುಗಣ್ಣ ತೆರೆದು ನೋಡೊ ಒಮ್ಮೆ ಗೆಳೆಯಾ ||ಬಿಸಿಲು||

ಬಿದಿರು ಕಡ್ಡಿಯೆ ಬೇರೆ ಬಿಸಿಲು ಕೋಲೆ ಬೇರೆ
ಬಿದಿರು ಕಡ್ಡಯೆಂದೇ ಬಗೆದು
ಬಿಸಿಲು ಕೋಲ ನುಡಿಸಲು ಬೇಡ ||ಬಿಸಿಲು||

ಅಂಬರದ ಹಕ್ಕಿಗೆ ಆಕಾಶದಗಲದ ರೆಕ್ಕೆ
ರೆಕ್ಕೆ ಬೀಸಿ ಹಕ್ಕಿ ಮೆರೆದರೂ ಬಾನೊಳಗೆ
ಕಾಳು ಕಡ್ಡಿ ಹೆಕ್ಕಿ ಬೆಚ್ಚನೆ ಗೂಡ ಕಟ್ಟಿ
ಬಣ್ಣದ ಹಾಡ ಹೆಣೆದು ಹಣ್ಣಾಯಿತು ನೆಲದೊಳಗೆ ||ಬಿಸಿಲು||

ಮಿಂಚು ಹುಳುವೆ ಬೇರೆ ಮಿನುಗೊ ಚುಕ್ಕಿಯೆ ಬೇರೆ
ಮಿಂಚು ಹುಳುವೆಂದೆ ಬಗೆದು
ಮಿನುಗೊ ಚುಕ್ಕಿಯ ಹಿಡಿಯಲು ಬೇಡ ||ಬಿಸಿಲು||

ನೀರೊಳಗಿನ ನೈದಿಲೆಗೂ ನೀರಡಿಕೆ ತಪ್ಪಿಲ್ಲ
ಚಿಪ್ಪಿನ ಮುತ್ತಿಗೆ ನತ್ತಾದರೂ ನೆಮ್ಮದಿಯಿಲ್ಲ
ಕಾಲು ಕಂಗಾಲಾದರೂ ಕನಸಿಗೆ ಬರವಿಲ್ಲ
ನಡೆದಷ್ಟು ದಾರಿಯು ನಿಲ್ಲೊ ಮಾತೇ ಇಲ್ಲ ||ಬಿಸಿಲು||

ಒಡಲೊಳಗುರಿದರೂ ಬೆಂಕಿ
ಒಲೆಯೊಳಗುರಿದರೂ ಬೆಂಕಿ
ಬೆಂಕಿಯೊಳಗೆ ಬೆಂದು ಬಯಲು ಕಾಣೊ ಗೆಳೆಯಾ ||ಬಿಸಿಲು||
*****