ಪುಟ್ಟ ಮಕ್ಕಳು ಚಂದ್ರನನ್ನು
ಕರೆಯುತ್ತಿದ್ದಾರೆ ಭೂಮಿಗೆ.

ನಾನೂ ಮಗುವಾಗಿದ್ದಾಗ
ಮೊಗ್ಗಿನಂತಹ ಬೆರಳುಗಳನ್ನು
ಮಡಿಸಿ ಅರಳಿಸಿ
ಚಂದ್ರನನ್ನು ಕರೆದಿದ್ದೆ ಭೂಮಿಗೆ.

ನನ್ನ ತಮ್ಮಂದಿರು, ತಂಗಿ
ಗೆಳೆಯ ಗೆಳೆತಿಯರು
ಯಾರೆಲ್ಲ ಕರೆದಿದ್ದರು
ಭೂಮಿಗೆ.

ಗೂಡಲ್ಲಿ ಕಣ್ಣರಳಿಸಿ
ಕೂತಿರುವ ಮರಿಹಕ್ಕಿ
ನದಿಯೊಳಗೆ ಈಸುತ್ತಿರುವ
ಮರಿ ಮೀನು, ಯಾರೆಲ್ಲ
ಕರೆದಿದ್ದರು ಚಂದ್ರನನ್ನು ಭೂಮಿಗೆ.

ಅಂದು ತೊದಲು ನುಡಿಯುತ್ತಿದ್ದ
ಮರಿಕೋಗಿಲೆ ಇಂದು
ಪಂಚಮದಲ್ಲಿ ಹಾಡಿದೆ.

ಅಂದು ನದಿಯೊಳಗೆ ಈಸುತ್ತಿದ್ದ
ಮರಿ ಮೀನು ಇಂದು
ಸಮುದ್ರವ ಸೇರಿದೆ.

ಅಂದು ಚಂದ್ರನನ್ನು ಕರೆಯುತ್ತಿದ್ದ
ನನ್ನ ಬೆರಳುಗಳು ಇಂದು
ಭೂಗೋಳ, ವಿಜ್ಞಾನ ಪುಸ್ತಕಗಳ
ಪುಟ ತಿರುವಿ ಒರಟಾಗಿವೆ.

ಮುಗಿಲು ಮುಟ್ಟಿ ನಿಂತಿರುವ ಹೆಮ್ಮರ
ಮೊಳೆಕೆಯೊಡೆದ ದಿನಗಳನ್ನು
ಮೆಲುಕು ಹಾಕುವ ಹಾಗೆ
ನಾನೊಮ್ಮೆ ಹಿಂದಿರುಗಿ ನೋಡಲೆ?

ಆಸೆ, ದುಃಖ, ಹರ್‍ಷ, ವಿಷಾದದ
ಎಲೆಗಳನ್ನು ಕಳಚಿಕೊಂಡು
ಧ್ಯಾನದಲ್ಲಿರುವಂತಿದೆ ಮರ
ನೋಡಿಯೂ ಸುಮ್ಮನಿರಲೆ?

ಕಂದಮ್ಮಗಳೆ….
ಕೇಕೆ ಹಾಕಿ ಕುಣಿಕುಣಿದು
ಕರೆಯಿರಿ ಚಂದ್ರನನ್ನು ಭೂಮಿಗೆ
ಹೂವಿನ ಹಾಗೆ ಬೆರಳುಗಳನ್ನು
ಅರಳಿಸಿ ನೀವೇ
ಕರೆಯಿರಿ ಚಂದ್ರನನ್ನು ಭೂಮಿಗೆ.

ನಾನು ನಾನಿರುವಂತೆಯೇ
ನೋಡುವೆ ಒಂದು ಘಳಿಗೆ.
*****