(ಝೆನ್ ಕಥೆಯ ಆಧಾರ- ಜಾಪಾನಿ ಭಾಷೆಯಲ್ಲಿ ಮಹಾಸಾಗರದಲ್ಲಿ ಏಳುವ ಭಾರಿ ಅಲೆಗಳಿಗೆ ಓನಮಿ ಎನ್ನುತ್ತಾರೆ)

ಒಂದೂರಿನಲ್ಲಿ ಓನಮಿ
ಎಂಬ ಮಲ್ಲನಿದ್ದ.
ಕಣಕ್ಕಿಳಿಯಲು ಆತ ಸದಾ ಸಿದ್ಧ.

ಒಬ್ಬಿಬ್ಬರೆದುರಲ್ಲಿ
ಎಲ್ಲರ ಒದ್ದು ಕೆಡವುತ್ತಿದ್ದ.
ಒಟ್ಟಿನಲ್ಲಿ, ಗುಟ್ಟಿನಲಿ
ಈತ ಗುರು ಮೀರುವ ಶೂರ
ಮಂದಿಯೆಂದರೆ ಮಾತ್ರ
ಕಂದಿಹೋಗುವ ಮೋರೆ
ಜನ ನೆರೆದರೆಂದರೆ ಇನ್ನೂ ತೊಂದರೆ
ಬಾಲರೆದುರೂ ಈತ ಅಧೀರ.

ಹಲವು ಹತ್ತು ಸಲ ಕಾಳಗದಲ್ಲಿ
ಎದುರಾಳಿಗಳಿಗೆ ಒಪ್ಪಿಸಿದ ಕಡಗ
ನಗೆಪಾಟಲಿಗೀಡಾದ ಹುಡುಗ.
ಇನ್ನಿಲ್ಲದಷ್ಟು ಸೋಲುಂಟು
ಏನಾದರೂ ಮಾಡಲೇಬೇಕೆಂದು
ಅಂದುಕೊಂಡು
ಕಿರೀಟವ ಕನಸುತ್ತ ಹೊರಟ.

ಹೀಗಿರುವಾಗ-
ರೋಗದ ಭಾಗ್ಯವೋ, ಓನಮಿಯ
ಯೋಗವೋ
ಕಡಲತಡಿಯೊಳಗೆ ಪುಟ್ಟ ಗುಡಿಯೊಳಗೆ
ಭಿಕ್ಷುವೊಬ್ಬ ಬಂದಿಳಿದ
ಓನಮಿ ಓಡೋಡಿ ಬಂದು
ನೀನೇ ಗತಿಯೆಂದು ಅಂದು
ತನ್ನ ದುಃಖವನ್ನೆಲ್ಲ ತೋಡಿಕೊಂಡ.

ಭಿಕ್ಷು ನುಡಿದ-
ಓನಮಿಯಲ್ಲವೆ ನಿನ್ನ ಹೆಸರು?
ಹೋಗು ಅಲೆಗಳನ್ನು ಆಲಿಸು
ನೀನೇ ಅಲೆಗಳೆಂದು ಭಾವಿಸು
ನಿನ್ನ ಕಿವಿಗಳನ್ನು ಅಲೆಗಳಲ್ಲಿ ಇಡು
ನಿನ್ನನ್ನೇ ಅಲೆಗಳಲ್ಲಿ ಇಡು
ನೀನೀಗ ಮಲ್ಲನಲ್ಲ
ಮರೆತುಬಿಡು ಹಿಂದಿನದೆಲ್ಲ.

ಆಕಾಶದೆತ್ತರ ಎದ್ದು
ಎದುರಿಗಿರುವುದನ್ನೆಲ್ಲ ಒದ್ದು
ನೀನಾಗು
ಎಲ್ಲವನ್ನು ನಿನ್ನೊಳಗಿರಿಸಿಕೊಂಡು
ನೀನು ಅದೇ ಆಗು
ಅಲೆಗಳನ್ನು ಲಾಲಿಸು
ಅಲೆಗಳನ್ನು ಪಾಲಿಸು
ಹೋಗು ಹಿಂಬಾಲಿಸು.

ಓನಮಿ ಅಲೆಗಳಿಗೆ
ಗಾಳ ಹಾಕಿ ಕುಳಿತ
ಯೋಚನೆಗಳ ಬಲೆ ಬೀಸಿ
ಇವನನ್ನೆ ಹಿಡಿದವು.

ಓನಮಿ
ಅಲೆಗಳನ್ನು ನೋಡಿದ
ಅದರ ಹಿಂದೆ ಓಡಿದ
ಅಲೆಗಳನ್ನು ಕರೆದ.
ಗೋಗರೆದ.
ಅಲೆಗಳು ಇವನನ್ನೆ ನೋಡಿದವು
ಹಿಂದೆ ಹಿಂದೆ ಓಡಿದವು
ಇವನನ್ನು ಧಿಕ್ಕರಿಸಿದವು.

ಚುಕ್ಕಿಗಳು ಹೊಳೆದವು
ರಾತ್ರಿಗಳು ಸವೆದವು
ಹಗಲುಗಳು ಉರಿದವು
ಮುಂಗಾರುಗಳು ಮುದುರಿದವು
ಹಿಂಗಾರುಗಳು ಹಾರಿದವು
ಋತುಗಳು ಬಾಡಿದವು
ಮೋಡಗಳ ಹಿಂಡುಗಳು
ಓನಮಿಯನ್ನೆ ನೋಡಿದವು
ತಿರುಗಿ ತಿರುಗಿ ನೋಡಿದವು
ನೋಡಿಯೇ ನೋಡಿದವು.

ಓನಮಿ
ಅಲೆಗಳನ್ನು ಧ್ಯಾನಿಸಿದ
ಧ್ಯಾನಿಸಿದ, ಧ್ಯಾನಿಸಿದ….
ಅಲೆಯ ಹಾಗೆ ನಡುಗಿದ
ಅಲೆಯೊಳಗೆ ಅಡಗಿದ
ಅಲೆಗಳಿಗೆ ಕೊರಳಾದ
ಅಲೆಗಳ ಬೆರಳಾದ
ಕಣ್ಣಾದ, ಕಿವಿಯಾದ
ಮೈಯಾದ, ಮನವಾದ
ಅಲೆಯಲ್ಲೊಂದು ಅಲೆಯಾದ

ಮತ್ತೊಂದು, ಮಗದೊಂದು
ಇನ್ನೊಂದು ಅಲೆಯಾದ
ಅಲೆಯಂತೆ ಕುಣಿದ
ಆಕಾಶಕ್ಕೆ ನೆಗೆದ.
ದೇವಾಲಯ ಮುಚ್ಚಿ ಹೋಯ್ತು
ಬುದ್ಧನ ಪ್ರತಿಮೆ ಕೊಚ್ಚಿ ಹೋಯ್ತು
ಒಬ್ಬ ಸೂರ್ಯ ಕಡಲಲ್ಲಿದ್ದ
ಮತ್ತೊಬ್ಬ ದಡದಲ್ಲಿದ್ದ

ಓನಮಿ ದಡದಲ್ಲಿದ್ದ
ಓನಮಿ ಧ್ಯಾನದಲ್ಲಿದ್ದ
ಆ ದಿನವೆ ಓನಮಿ
ಅಲ್ಲಿಂದ ಹೊರಟ
ಕಣ್ಣೊಳಗೆ ಕಡಲಿತ್ತು
ಬೆಳಕಿನದೆ ಮಾಟ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)