“ಅಲೆ! ನೀನು ಸಮುದ್ರವಾಗುವುದು ಯಾವಾಗ?” ಎಂದಿತು ಬೆಟ್ಟ. “ನನ್ನ ತುಮುಲ ಅಡಗಿ ಶಾಂತವಾದಾಗ ನಾನು ಸಮುದ್ರವಾಗುವೆ” ಎಂದಿತು ಅಲೆ. ಮತ್ತೆ ಬೆಟ್ಟ ಸಮುದ್ರವನ್ನು ಕೇಳಿತು “ನೀನು ಅಲೆಯಾಗುವುದು ಏಕೆ?” ಎಂದು. ಸಮುದ್ರ ಹೇಳಿತು “ನಾನು ಅಲೆದಾಡಿ ಬರಲು ಅಲೆ‌ಅಲೆ ಯಾಗುವೆ” ಎಂದಿತು.

ಬೆಟ್ಟ “ಭಲೆಭಲೆ!” ಎಂದಿತು.

ಈಗ ಸಮುದ್ರ ಕೇಳಿತು- “ಬೆಟ್ಟ! ನೀನು ಗಟ್ಟಿಯಾಗಿ ಏಕೆ ಕುಳಿತಿರುವೆ?” ಎಂದು, “ಅಲೆ ಸಮುದ್ರವಾಗುವದನ್ನು, ಸಮುದ್ರ ಅಲೆಯಾಗಿ ಅಲೆದಾಡುವುದನ್ನು ನೋಡಿ ನೋಡಿ ಮಂತ್ರ ಮುಗ್ಧವಾಗಿ ಗಟ್ಟಿಯಾಗಿ ಕುಳಿತಿರುವೆ” ಎಂದಿತು.
*****