ಚಿತ್ರ: ಶಾಂತನೂ ಕಷ್ಯಪ

ಇಂದು ನಾವು ಫಾಯಿವ್‌ಸ್ಟಾರ್ ಹೋಟಲಿನಲ್ಲಿ ಮಲಗಿದ್ದು ಮರೆಯಬಹುದು… ಆದರೆ… ಒಂದು ಕಾಲಕ್ಕೆ… ಒಂದು ದಿನ… ಯಾರದೊ ಕಟ್ಟೆಯ ಮೇಲೆ ಮಲಗಿದ್ದು ಮರೆಯಲೆಂತು ಸಾಧ್ಯ?

ಹಾಂ… ಇವತ್ತಿನ ಮಿತಿಗೆ ಐವತ್ತು ವರ್ಷಗಳ ಹಿಂದಿನ ಆ ಒಂದು ರಾತ್ರಿ… ಆ ಒಂದು ಘಟನೆ… ಕಣ್ಣಲ್ಲಿ ಮಿಂಚು ಹೊಳೆದಂತೆ ಚಕಚಕನೇ ಕಣ್ಮುಂದೆ ಕಟ್ಟಿ ನಿಲ್ಲುತ್ತದೆ… ಹೇಗೆ ಮರೆಯಿಲಿ ಆ ರಾತ್ರಿ?

ಅದು ದುಡ್ಡಿನ ದಿನಮಾನವಲ್ಲ. ಐದು ನಯಾ ಪೈಸೆಗೆ ಒಂದು ಕಪ್ಪು ಚಾ…. ಹನ್ನೆರಡು ನಯಾಪೈಸೆಗೆ ಒಂದು ಮಸಾಲಿ ದ್ವಾಸಿ ಸಿಗುತ್ತಿದ್ದ ಸೋವಿ ಕಾಲ, ಕಾಲ ಸೋವಿ ಆದರೂ ರೊಕ್ಕ ಟುಟ್ಟಿ! ಯಾರ ಕಿಸೆಯಲ್ಲಾದರೂ ಹತ್ತು ರೂಪಾಯಿ ನೋಟು ಇದ್ದರೆ ಅವರಿಗೆ… ಸಾವ್ಕಾರೆ ಅಂತ ಅಡ್ರೆಸ್ ಮಾಡುತ್ತಿದ್ದ ಕಾಲ. ಹಾಂ… ಆಗಿನ್ನೂ ನಾನು ಇಂಟರ್ ಕಲಿಯುತ್ತಿದ್ದೆ. ಇಂದಿನ ಪಿಯೂಸಿ ಎರಡನೇ ವರ್ಷಕ್ಕೆ ಆಗ ಇಂಟರ್ ಅನ್ನುತ್ತಿದ್ದರು! ಯಾರಾದರೂ ಇಂಟರ್ ಫೇಲ ಆಗಿದ್ದರೆ ಅದು ಅತಿ ದೊಡ್ಡಪದವಿ! ಕಾರಣ… ಇಂಟರ್ ಈಜ್‌ ದಿ ಸೆಂಟರ್ ಆಫ್ ಎಜುಕೇಷನ್… ಅಂತ ನಮ್ಮ ಪ್ರೊಫೆಸರ್ ತೋಫಖಾನೆ ಅವರು ಹೇಳುತ್ತಿದ್ದರು!

ನಮ್ಮ ತೀರಾ ಹತ್ತಿರದ ಸಂಬಂಧಿಕರು ಬೆಳಗಾವ ಜಿಲ್ಲೆಯ ಅತಿ ದೂರದ ಅಪರಿಚಿತ ಕುಗ್ರಾಮದಲ್ಲಿ ತೀರಿಕೊಂಡಾಗ ನಾನು ಹೋಗಲೇ ಬೇಕಾಯಿತು. ಹೋದೆ. ನಾನು ಹೋಗುವಷ್ಟರಲ್ಲಿ ಹೆಣಕ್ಕೆ ಮಣ್ಣುಕೊಟ್ಟು ಎಲ್ಲರೂ ಹೊರಳಿ ಹೋಗಿದ್ದರು. ಆ ಹಳ್ಳಿಗೆ ನಾಲ್ಕುಮೈಲು ನಡೆದು ಹೋಗಿದ್ದೆ. ಮತ್ತೆ ಅಲ್ಲಿಂದ ನಾಲ್ಕು ಮೈಲು ನಡೆದು ಬಸ್ ರಾಸ್ತಾಕ್ಕೆ ವಾಪಸ್ಸು ಬಂದೆ. ಆದರೆ… ನನ್ನ ದುರ್ದೈವಕ್ಕೆ ಅಲ್ಲಿಂದ ಗೋಕಾಕಕ್ಕೆ ಹೋಗುವ ಸಂಜಿ ಎಂಟರ ಕಟ್ಟಕಡೇ ಬಸ್ಸು ಹೋಗಿಬಿಟ್ಟಿತ್ತು! ಎದೆ ಧಸ್ ಅಂತು!

ಅಲ್ಲಿಂದ ಗೋಕಾಕಕ್ಕೆ ನಡಕೊಂಡು ಹೋಗಬೇಕೆಂದರೆ ಮತ್ತೆ ಹತ್ತು ಹದಿನೈದು ಮೈಲು ನಡೆಯಬೇಕು. ಆ ಅಪರಿಚಿತ ಊರಲ್ಲಿ ಒಂದು ಇಲಿಮರಿಯೂ ನನಗೆ ಪರಿಚಯ ಇರಲಿಲ್ಲ. ಪುಕ್ಕಟೆ ಕೊಳು ಹಾಕುವ ಮಠವೂ ಇರಲಿಲ್ಲ. ಸಂಜೆ ಚಳಿ ಬೇರೆ. ಗಡಗಡ ನಡುಗುತ್ತ ಒಂದು ಚಾದಂಗಡಿ ಕಟ್ಟೆಮೇಲೆ ಕುಂತೆ. ಅದು ಕಂಟ್ರೀ ಚಾದಂಗಡಿ. ಹೊಟ್ಟೆ ಬಕಾಸುರ ಆಗಿತ್ತು. ದೋಸೆ ತಿನ್ನಲು ದುಡ್ಡು ಇರಲಿಲ್ಲ. ಮಲಗಬೇಕೆಂದರೆ ಆ ತಂಪುಕಟ್ಟಿ ಜುಣಾಡಿಸುತ್ತಿತ್ತು!

ರಾತ್ರಿ ಒಂಬತ್ತರವರೆಗೆ ಆ ಕಟ್ಟಿ ಮೇಲೆ ಪರದೇಶಿ ಆಗಿ ಕುಂತೆ. ಚಾದಂಗ್ಡೀ ಮುಚೂಕಾಲಕ್ಕೆ ಲಂಡ ಅಂಗಿಯ ಆ ಮಾಲಿಕ ಹೊರಬಂದು, ನನ್ನನ್ನು ಹುಳುಹುಳೂ ಹುಳ್ಳಾಡಿಸಿ ನೋಡಿ ಕೇಳಿದ –

‘ಯಾರಪ್ಪ ನೀನು?’

ನನ್ನ ಕಥೆ ವ್ಯಥೆ ಎಲ್ಲ ತೋಡಿಕೊಂಡೆ. ಆದರೆ ಆತ ನನ್ನ ಮಾತು ಕೇಳದವರಂತೆ ಚಾದಂಗಡಿ ಒಳಗೆ ಹೋಗಿಬಿಟ್ಟ. ಅಂಜುತ್ತ ಆಕಾಶ ನೋಡಿದೆ ಆಕಾಶದಲ್ಲಿ ನಕ್ಷತ್ರ ದ್ವಾಸಿ ತಿಂದು, ಚಾ ಕುಡಿಯುತ್ತಿದ್ದವು. ಹೊಟ್ಟಿ ಡೊಂಬರಾಟ ಆಡುತ್ತಿತ್ತು. ಅರ್ಧಗಂಟೆ ಬಿಟ್ಟು ಆತ ಹೊರಗೆ ಬಂದು ನನ್ನನ್ನು ಕರೆದ –

‘ಬಾ ತಮ್ಮಾ ಒಳಗ…’ ನಾನು ಕುಂಟ ದನದಂತೆ ಒಳಗೆ ಹೋದೆ. ಆತ ಒಂದು ಟೇಬಲ್ಲು ಕುರ್ಚಿ ಮಸೇ ಅರಿಬಿಯಿಂದ ವರೆಸಿ ನನ್ನನ್ನು ಕುಂಡ್ರೀಸಿದ. ನಾನು ಥಂಡಿಹತ್ತಿದ ಕಪ್ಪೆಯಂತೆ ಗಪ್ಪುಗಾರಾಗಿ ಕುಂತೆ.

ಆತ ನನ್ನ ಮುಂದೆ ಸ್ಟೀಲ ಗಂಗಾಳ ಇಟ್ಟ! ಆ ಕಾಲದಲ್ಲಿ ಸ್ಟೀಲ ಗಂಗಾಳದಲ್ಲಿ ಉಣ್ಣುವವರು ಮಹರಾಜರು ಮಾತ್ರ! ನನ್ನ ಕಣ್ಣು ಕುಕ್ಕಿದವು.

ಆ ಗಂಗಾಳದ ತುಂಬ ಸುಡುಸುಡು ಅನ್ನ ಸುರುವಿದ ಅದರ ಮೇಲೆ ಕಂಪು ಹೆರತುಪ್ಪ ಹಾಕಿದ ಗಮಗಮಾ ಸಾರು ನೀಡಿದ! ಆ ಸಾರಿನ ವಾಸನಿ ಇಂದಿಗೂ… ನಾಲ್ವತ್ತಾರು ವರ್ಷಗಳ ನಂತರವೂ… ನನ್ನ ಮೂಗಿಗೆ ಬಡಿಯುತ್ತಿದೆ! ಮೇಲೆ ಉಪ್ಪಿನ ಕಾಯಿ ಹಪ್ಪಳ ಹಚ್ಚಿದ. ಚಾದಂಗಡಿಯ ಬಿದಿರ ತಟ್ಟೆಯ ಭಜಿ ತಂದು ನೀಡಿದ.

ನಾನು ಗಬಾಗಬಾ ನುಂಗಿದ್ದು ನನಗೇ ಗೊತ್ತಾಗಲಿಲ್ಲ. ಢರಕಿ ಬಂತು. ಆದರೆ ಆತ ಒಂದು ದೊಡ್ಡ ವಾಟಿ ತುಂಬ ಬಿಸಿ ಬಿಸಿ ಹಾಲು ಇಟ್ಟು, ಆ ಹಾಲಲ್ಲಿ ಸಕ್ಕರೆ ಹಾಕಿದ. ಅಬ್ಬಬ್ಬಾ! ಆಕ್ಷಣದಲ್ಲಿ ಆತ ನನಗೆ ದೇವರಿಗಿಂತ ದೊಡ್ಡವನಾಗಿಕೆಂಡ ಆದರೂ… ಇವನೇನಾದರೂ ಉಂಡಮೇಲೆ ಬಿಲ್ ಕೇಳುತ್ತಾನೆಯೋ ಏನೋ ಅಂತ ಟುಕುಟುಕು ನನಗೆ ಇದ್ದೇ ಇತ್ತು. ಆತ ದುಡ್ಡು ಕೇಳಿಲಿಲ್ಲ!

ಇನ್ನೂ ಆಶ್ಚರ್ಯ! ನಾನು ಕೈತೊಳೆದು ಹೊರ ಬರುವಷ್ಟರಲ್ಲಿ ಆ ಕಟ್ಟೆಯ ಮೇಲೆ… ಒಂದರ ಮೇಲೊಂದು… ಜೋಡು ಗಾದಿ ಹಾಸಿದ್ದ! ಅದು ಚಾಪೆಯ ಮೇಲೆ ಮಲಗುತ್ತಿದ್ದ ಕಾಲ! ಅಂದು ಜೋಡು ಗಾದಿ ಮೇಲೆ ಚವ್ವಾಳಿ, ತೆಲಿದಿಂಬು. ಜೋಡಿಸಿದ ಜೋಡು ಚಾದರು. ಮತ್ತೆ ಮೇಲೆ ಮಚ್ಚರದಾನಿ ಕಟ್ಟಿದೆ.

ಆ ರಾತ್ರಿ ನನಗೆ ಸಿಕ್ಕ ನಿದ್ರೆಯ ಸುಖ ಜೀವಮಾನದಲ್ಲಿ ಸಿಕ್ಕಿರಲಿಕ್ಕಿಲ್ಲ!

ಮರುದಿನ ಬೆಳಿಗ್ಗೆ ಪ್ರಾತಃ ಸಂಚಾರ ಮುಗಿಸಿ, ಅವನ ಬಚ್ಚಲದಲ್ಲಿ ಸ್ನಾನ ಮಾಡಿ ಹೊರಟು ನಿಂತೆ, ಆತ ನನ್ನನ್ನು ಮತ್ತೆ ಕರೆದು ಕುಳ್ಳಿರಿಸಿ ಬಿಸಿ ಬಿಸಿ ಉಪಿಟ್ಟು ಕೊಟ್ಟ, ಅದರ ಮೇಲೆ ಸೇವು ಢಾಣಿ ಹಾಕಿದ ಮೇಲೆ ಒಂದು ದೊಡ್ಡ ಕಪ್ಪು ಚಾ ಇಟ್ಟ.

ಕಡೆಗೆ… ನಾನು ಅವನಿಗೆ ಕೈಮುಗಿದು ಹೊಂಟು ಬಿಟ್ಟೆ! ಆತ… ಹೋಗಿಬಾ…. ಅಂತ ಕಳಸಿದ!

ಇಷ್ಟು ವರ್ಷವಾದರೂ ನಾನು ಆ ಊರಿಗೆ ಹೋಗಿಲ್ಲ. ಆದರೆ ಅವನ ಆ ಮುಖ ಮರೆಯಲು ಇನ್ನೂ ಸಾಧ್ಯವಾಗಿಲ್ಲ!

ಇಂದು ಆ ಹೊಟೆಲ್ಲು ಹೇಗಿದೆಯೋ ಏನೊ? ಆತ ಜೀವಂತ ಇರುವನೊ ಇಲ್ಲವೊ?

ಆದರೆ ಅವನ ನೆನಪು ಇಂದಿಗೂ ನೂರುಪಟ್ಟು ನಿಚ್ಚಳ! ಹೇಗೆ ಮರೆಯಲಿ ಆ ಮನುಷ್ಯರೂಪದ ದೇವರನ್ನು?
*****