ಬಂದೇ ಬರುವುವು ಬಂಗಾರದ
ಹೊಂಗಿರಣದ ನಾಳೆಗಳು,
ಬಣ್ಣ ಬಣ್ಣದಾ ಬದುಕನು ಬರೆಯಲು
ತೆರೆದಿದೆ ಹಾಳೆಗಳು.

ಎಲ್ಲೆಲ್ಲೂ ಹೊಗೆಯಾಡಿದೆ ನೋವೇ
ಅಳುಕದಿರಲಿ ಮನವು,
ಕಲಕದೆ ಬಾಳು ತಿಳಿವುದೆ ಹೇಳು
ಜಗದ ದುಃಖ ನೋವು?

ನಾಳೆಯ ಬಾಳಿನ ಸವಿಯನು ಕನಸದ
ಜೀವವಿಲ್ಲ ಜಗದಿ,
ಆಸೆಯ ಅಮೃತದ ಸಿಂಚನವಾಗಲು
ಕೆರೆ ಆಗದೆ ಜಲಧಿ?

ಬಂದೇ ಬರಲಿವೆ ನಾಳೆಗಳು
ಬೆಳಕಿನ ತಾರೆಗಳು,
ಬಂದೇ ಬರಲಿವೆ ನಾಳೆಗಳು
ಹೊನ್ನಿನ ತೀರಗಳು.
*****