ಬಾಗಿಲ ಬಡಿದಿದೆ ಭಾವೀ ವರ್ಷ
ಬಗೆ ಬಗೆ ಭರವಸೆ ನೀಡಿ,
ಭ್ರಮೆ ನಮಗಿಲ್ಲ ನೋವೋ ನಲಿವೋ
ಬರುವುದ ಕರೆವೆವು ಹಾಡಿ.
ಎಲ್ಲ ನಿರೀಕ್ಷೆ ಸಮಯ ಪರೀಕ್ಷೆಗೆ
ಕೂರದೆ ವಿಧಿಯೇ ಇಲ್ಲ,
ಕೂತದ್ದೆಲ್ಲ ಪಾಸಾದೀತೆ?
ಜೊತೆ ಜೊತೆ ಬೇವೂ ಬೆಲ್ಲ
ಕಾಲದ ಚೀಲದೊಳೇನೇ ಇರಲಿ
ಕಾಣದ ಅನುಭವ ನೂರು,
ಎಲ್ಲವು ಇರಲಿ ನಿಲ್ಲದೆ ಬರಲಿ
ಸರಿಗಮ ಪದನಿಸ ಅರಳಿ.
ಸುಖವೋ ದುಃಖವೋ ಒಂದೇ ಬಂದರೆ
ಏನಿದೆ ಅದರಲಿ ಘನತೆ?
ಎರಡೂ ಬೆರೆದು, ಬಹುಸ್ವರ ನುಡಿದು
ಮೂಡುವುದೇ ನಿಜಗೀತೆ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.