ಬಲ್ಲಿರಾ ನೀವ್ ತಿಪ್ಪೇಶನ ಮಹಿಮೆಯನು?

ಕಾಲವೊಂದಿತ್ತಂದು ತಿಪ್ಪೇಶನೆಂಬೊಬ್ಬ ದೇವನಿರುತಿ ರಲು ಉತ್ತು ಬಿತ್ತಿ ಬೆಳೆವನ್ನದುದ್ಯೋಗದೊಳು ಎಲ್ಲರಿಗೂ ವಿಹಿತದಾಸಕ್ತಿ ಆದಾಯವಿರುತ್ತಿತ್ತು ಬಲ್ಲಿದರವರಿಗವರೇ ಮಾಲಿ, ಹಮಾಲಿ, ಜಾಡಮಾಲಿ ಮಾಲಿಕರಾಗಿರಲನ್ನದೊಳು ಅನುರಾಗವಡಗಿತ್ತು - ವಿಜ್ಞಾನೇಶ್ವರಾ *****

ಅರರೇ! ಲಾಭವೆಂದೊಡದೇನು?

ಆರೊ ಕೇಳಿದರೆನ್ನವದೆಲ್ಲ ಸರಿಯಾದೊಡಂ ಬರಿ ಸಾವಯವದೊಳಿಹುದೇ ಲಾಭವೆಂದೆನುತ ಬರವಿರದೆ ತಿನ್ನಲುಡಲು ದುಡಿದಲ್ಲಿ ದಣಿ ದಿರಲು, ದಿಂಬಿರದೆ ಸುಖ ನಿದ್ರೆ ಬರುತಿರಲು ಕ್ರೂರತನದೊಳೇನು ಸೂರೆಯೋ, ಧರೆಸೊರಗೆ - ವಿಜ್ಞಾನೇಶ್ವರಾ *****

ಯುದ್ಧದುಳಿಕೆ ಗೊಬ್ಬರವನಿಟ್ಟವರು ಜಾಣರೇ?

ಪೆದ್ದನಾರಂಭ ಗೊಬ್ಬರದೊಳೆಂದೆಂಬ ಪ್ರ ಸಿದ್ಧ ಹಳ್ಳಿ ಮಾತುಂಟಾದೊಡಂ ಜಾಣರೆಲ್ಲರು ಪ್ರ ಬುದ್ಧವೆಂದೆನುತಾ ಪೇಟೆ ಸೇರುತಲಾ ಗೊಬ್ಬರಕೆ ಕೃದ್ಧ ರೂಪವ ಕೊಟ್ಟು ಪೇಳ್ವರಲಾ ಗದ್ದೆ ಗಿದನೆಸೆಯ ಪೆದ್ದ ತಾ ಬುದ್ಧನಪ್ಪನೆಂದೆನುತಾ - ವಿಜ್ಞಾನೇಶ್ವರಾ *****

ಶಾಲೆಯಕ್ಷರಕ್ಕೂ ಕೃತಕಗೊಬ್ಬರಕ್ಕೂ ಏನಾದರೂ ವ್ಯತ್ಯಾಸವುಂಟಾ?

ಕಾಲವೊಂದಿತ್ತಂದೆಲ್ಲರಲು ಕೃಷಿಯೊಡಗೂಡಿ ಕಲಿಕೆ ನಲಿಕೆ ಬಯಕೆಗಳೆಲ್ಲವುಂ ಸಾವಯವವಾಗಿರಲದನು ಬ ದಲಿಸಲೆಷ್ಟು ತಜ್ಞರು ಶ್ರಮಿಸಿದರೋ ಬಲ್ಲವರು ಇಲ್ಲ ಕಾಲ ಬದಲಿಹುದಿಂದೆಲ್ಲ ಕೃತಕ ಶಾಲೆಯೊಳು ವಿಷಕೃಷಿ ಜ್ವಾಲೆಯೊಳು ಬಿದ್ದಿಹರವರ ಬಿಡಿಸುವ ಬಲ್ಲಿದರೆ ಇಲ್ಲ - ವಿಜ್ಞಾನೇಶ್ವರಾ *****

ಚೋರ ಸೂತ್ರವಾದರೂ ಎಲ್ಲರಿಗೊಂದಾದೀತೇ?

ಆರೋಗ್ಯದಸ್ಮಿತೆಗೆ ನೂರೊಂದು ತರ ವೈದ್ಯ ಇರುತಿಹುದು ವ್ಯಕ್ತಿ - ರೋಗ ಭೇದಕೊಂದೊಂದು ಮದ್ದು ಮೂರಡಿಗೊಂದು ಮಣ್ಣಿನಾ ಗುಣವಿರಲು ಸೂತ್ರವೊಂ ದರೊಳೆಲ್ಲರಿಗು ವರ ಕೃಷಿಯನರುಹಲಳವಿಲ್ಲ ಊರ ಬರವೆಂತು ನೀಗುವುದು ಪರ ಊರ ಮಳೆಗೆ - ವಿಜ್ಞಾನೇಶ್ವರಾ...

ಸದ್ದಿನ ಪೇಟೆಯಳಿಸದೆ ಸಾವಯವ ವ್ಯಾಪಾರದಿಂದೇನು ?

ಸಂಭ್ರಮದಿ ಪೇಳುವರು ಅವರಿವರಿಂದು ಸಾವಯವಕೊಂದು ಮಾನ್ಯತೆ ಬಂದಿಹುದೆಂದು ಸಂತೆಯೊಳು ವ್ಯಾಪಾರ ನಡೆಯುತಿರೆ ಮುಂದು ಸೂಕ್ಷ್ಮದೊಳವಲೋಕಿಸಲರಿವ ಸತ್ಯವೆ ಬೇರೊಂದು ಸ್ವಾರ್ಥ ಸದ್ದಿನ ಪೇಟೆಯುಳಿಸಲು ದಾಳವಿದೆಂದು - ವಿಜ್ಞಾನೇಶ್ವರಾ *****

ಬರಿ ಲಂಚವಿರುವಲ್ಲಿ ಸಾವಯವ ಮಂಚವೇರೀತೇ?

ಸರಕಾರಿ ನೌಕರರು, ಹೊಸತಾಗಿ ಸೇರಿಹರು ಕಿರಿ ಕಿರಿಯಿದ್ಯಾಕೆಂದು ಲಂಚಕೊಗ್ಗಿಕೊಳ್ಳುವಂದದಲಿ ತರಕಾರಿ ಸಾವಯವವೆಂದು ಮೊದಲೊಳಂದವರು ಬರಬರುತೆ ಅರ್ಥ ಪಂಡಿತರಾಗುತಿಹರಿಲ್ಲಿ ಬರಿ ವ್ಯರ್ಥವೆಲ್ಲ ಪರಿಸರದ ಭಾಷಣವು ಬರದಲ್ಲಿ - ವಿಜ್ಞಾನೇಶ್ವರಾ *****

ಗರಿಕೆ ಕಿತ್ತು ಮನೆಯ ಕಟ್ಟಿದವರುಂಟೇ?

ಕೆರೆದರದುವೇ ಕೃಷಿಯೆಂದರಿಯದವರರುಹುತ್ತಿರೆ ಗರಿಕೆಯನು ಕೆರೆದುನ್ನತದ ಮನೆಯ ಕನ ವರಿಸುತಲಿ ಇಳೆಯ ಕಳೆಯನ್ನು ಕಳೆಯುತಿರೆ ಕೆರೆದು ಕೆಟ್ಟಿಹನೆಮ್ಮ ರೈತನು, ಆದೊಡಾತನು ಕೆರೆವ ಯಂತ್ರಗಳನಿತ್ತವನು ಮನೆಯ ಕಟ್ಟಿಹನು - ವಿಜ್ಞಾನೇಶ್ವರಾ *****

ಜಾರಿದ ದಾರಿಯನರಿಯದೆ ಭಾರಿ ಹುಡುಕಿದೊಡೇನು?

ನೂರೊಂದಾರೋಗ್ಯ ದೋಷವನೆಣಿಸಿ ಉಣುವಾ ಹಾರದೊಳು ಸಾವಯವವೆಂದಾಗ್ರಹಿಸಿದೊಡೇನು? ವರುಷವೈವತ್ತರ ಮೊದಲು ಯಂತ್ರ ತಂತ್ರದ ಬ್ಬರದ ಬದಲಿದ್ದ ಬದುಕೆಲ್ಲ ಸಾವಯವವೆಂ ದರಿತು ಮರಳಿದರಾ ನೆಲಮನದೊಳಿಕ್ಕು ಸಾವಯವ - ವಿಜ್ಞಾನೇಶ್ವರಾ *****

ಎಮ್ಮ ತನು ದಣಿಯದೆ ಸಾವಯವ ಖರೀದಿ ಸಾಧ್ಯವಾ?

ಅಮೃತವು ದಕ್ಕೀತು ಕಡೆಗೋಲು ಮಥಿಸಿದೊಡೆ ಹಮ್ಮನತ್ತಿಕ್ಕಿ ವಿಚಾರದುರುಳನೆಳೆದೊಡೆ ಸುಮ್ಮನುಂಡುದನು ಸಾವಯವವೆಂದೊಡದು ಬುರುಡೆ ಎಮ್ಮ ತನುಮನದೊಳನುದಿನ ಉದಿಪ ವಿಷ ವಮೃತಮಪ್ಪೊಡೆ ಅನಿವಾರ್‍ಯ ಬೆವರ ಬಿಡುಗಡೆ - ವಿಜ್ಞಾನೇಶ್ವರಾ *****