ಕನಸಿಳಿಯದ ಗಂಟಲಿನಲಿ
ನೋವುಗಳ ತುಂಬಿಸಿದಂತೆ!

ಒಡಲಾಳದೊಳಗೆ ಮಥಿಸಿ ಮಥಿಸಿ
ಲಾವಾರಸವಾದ ಅಮೂರ್ತ ನೋವುಗಳು
ಸಿಡಿಯಲಾಗದ ಜ್ವಾಲಾಮುಖಿಯಂತೆ!

ಧ್ವನಿಯಡಗಿಸಿದ ಕಂಠವಾಗಿ
ಹನಿಯಡಗಿಸಿದ ಕಡಲಾಗಿ
ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ
ನೋವುಗಳು ಮಾತಾಗುವುದೇ ಇಲ್ಲ
ಬದಲಿಗೆ ಹಾಡಾಗುತ್ತವಲ್ಲಾ!

ಆಳದಲ್ಲೆಲ್ಲೋ ಮದ್ದುಗುಂಡುಗಳು
ಸಿಡಿದು, ಎದೆಯೊಳಗೆಲ್ಲಾ ದಹಿಸಿ
ಆಡಲಾಗದ ಅನುಭವಿಸಲಾಗದ ಕಸಿವಿಸಿ
ಎರಡು ಪದರು ರೊಟ್ಟಿಯೊಳಗೆ
(ಅತ್ತ ದರಿ-ಇತ್ತ ಪುಲಿಯಂತೆ)
ಸ್ಯಾಂಡ್‌ವಿಚ್ ಆಗುವ ಹಸಿ-ಬಿಸಿ!
ಮತ್ತೆ ಉಲಿಯುವುದು ಅಶಾಸ್ತ್ರೀಯ ಹಾಡೇ!

ಹಾಡಬಹುದೇ ರಾಗವಿಲ್ಲದೇ
ತಾಳವಿಲ್ಲದೇ, ಭಾವವಿಲ್ಲದೇ ಹೀಗೆ?
ಬರೀ ನೋವು ತುಂಬಿದ ಹಾಡು?
ಶಾಸ್ತ್ರೀಯ ಸಂಗೀತವರಿಯದ
ಕಾಡುಹಕ್ಕಿಯ ಪಾಡು!

ತಾನೊದರಿದ್ದೆಲ್ಲಾ ಸಂಗೀತವೇ
ಎಂಬ ಹಠವಿಲ್ಲ ಹಕ್ಕಿಗೆ
ಯಾರು ಕೇಳಲಿ ಬಿಡಲಿ
ತನ್ನೆದೆಯ ನೋವುಗಳ
ತಾಳಲಾಗದ ಭಾವಗಳ
ಹಾಡಾಗಿಸಿ ತಾನೇ ನಲಿಯುತ್ತದೆ
ತನ್ನ ಹಾಡಿಗೆ!
ನಗುತ್ತದೆ;
ತನ್ನ ಪಾಡಿಗೆ!
*****