ಹೆಪ್ಪಿಟ್ಟ ಕೆನೆ ಮೊಸರು
ಹುಳಿಯಾಗುವ ಮುನ್ನ
ನಿರಂತರ ಕಡೆಯಬೇಕು!

ಉಕ್ಕಲಿ ನೊರೆನೊರೆಯ
ಹಾಲಾಹಲ!
ಏಕೆ ಕೋಲಾಹಲ?

ಮೇಲೆಲ್ಲವೂ ಕಾರ್ಕೋಟಕ ವಿಷವೇ
ಆಳಕ್ಕಿಳಿದಷ್ಟೂ ಅಮರತ್ವದ
ಅಮೃತವೇ!

ಎಷ್ಟು ಮಹಾ
ಉಕ್ಕೀತು ವಿಷ?
ಆಪೋಶಿಸಿದರೊಂದೇ ಗುಟುಕು
ಕಣ್ತೆರೆಯಲು ಸಾಕು
ಒಂದೇ ಮಿಟುಕು!

ಕಣ್ಮುಚ್ಚಿದರೆ ಕತ್ತಲು
ಕಣ್ತೆರೆದರೆ ಬೆಳಕು
ಕಣ್ಣೂ ನಮ್ಮದೇ
ಆಯ್ಕೆಯೂ ನಮ್ಮದೇ!

ಬೆಳಕು ಬೇಕೆಂದರೆ
ಏನು ಪಣಕೊಡ್ಡಿದರೂ ಸರಿ
ಮುಚ್ಚಿದ ಒಳಗಣ್ಣು
ತೆರೆಯಬೇಕು
ಸಿಹಿಸಿಹಿಯ
ನವನೀತಕಾಗಿ
ಮತ್ತೆ ಮತ್ತೆ
ಕಡೆಯಬೇಕು!

ಯಾವ ವಿಷವಾದರೂ
ಉಕ್ಕುಕ್ಕಿ ಬರಲಿ
ತಳಕಿಲ್ಲವೇ ಅಮೃತ
ಮಂಥಿಸುವ ಸತತ
ಆ ಸುಧೆಗಾಗಿ
ಕಾಯುವ ನಿರತ!
*****