ಅದೊ ನೋಡು! ಹೊಲದಲ್ಲಿ ನೇಗಿಲನು ಬಲ್ವಿಡಿದು
ಮೈಬೆವರಿನಿಂದುತ್ತ ಮಣ್ ನೆನೆವರಂ ದುಡಿದು
ಹೆರವರಿಗೆ ಹೊನ್ ಬೆಳೆಯ ತೆಗೆಯೆ ಜೀವವ ತೇದು
ನೇಗಿಲಿನ ರೇಖೆಯಿಂ ದುಡಿವ ಬಾಳ್ ನೆತ್ತರಿಂ

ಭಾರತ ಭವಿಷ್ಯವನು ಬರೆವನವನು
ನೆಲತಾಯ ನಲ್ಗುವರ-ಬಡ ರೈತನು.

ಮತ್ತದೋ ನೋಡಲ್ಲಿ! ಯಂತ್ರಶಾಲೆಗಳಲ್ಲಿ-
ಯಂತ್ರಗಳ ನಡುವೆ ತಾನೊಂದು ಯಂತ್ರವೆ ಆಗಿ
ಹೆರರ ಸೌಖ್ಯಕೆ ತನ್ನ ಬಾಳ ಸವಿಯನೆ ನೀಗಿ
ಮೌನವೇ ಮಸಿಯಾಗೆ ಗೈಮೆ ಲೇಖನಿಯಾಗೆ

ಭಾರತ ಭವಿಷ್ಯವನು ಬರೆವನವನು
ಕರ್ಮಯೋಗಕೆ ಕಲಶವಿಡುವ ಕಾರ್ಮಿಕನು

ಇತ್ತ ನಿರುಕಿಸು! ಶಸ್ತ್ರಸನ್ನದ್ಧನಾಗಿಯುಂ
ತಾನಹಿಂಸಾ ಸತ್ಯ ತತ್ತ್ವಕ್ಕೆ ತಲೆಬಾಗಿ
ಹೆರರ ನೆಲಕಾಶಿಸದೆ ತಾಯ್ ನೆಲಕೆ ಮುಡಿಪಾಗಿ
ತನ್ನ ಬಾಳನ್ನಿರಿಸಿ, ಇಳೆ ಮೆಚ್ಚುವದಟಿನಿಂ

ಭಾರತ ಭವಿಷ್ಯವನು ಬರೆವನವನು
ಧರ್ಮಯುದ್ಧಕ್ಕಳುಕದಿಹ ವೀರಭಟನು.

ಮೇಣದೋ! ವಿಜ್ಞಾನಶಾಲೆಯಲಿ ಭೇದಿಸುತ
ಪ್ರಕೃತಿಯ ರಹಸ್ಯವನು, ಸತ್ಯವನು ಶೋಧಿಸುತ,
ನಾಡ ಮಣ್ಣನು ಚಿನ್ನ ಮಾಳ್ಪ ಕಲೆ ಸಾಧಿಸುತ
ವಿಜ್ಞಾನಸಿದ್ಧಿಯನು ಯುದ್ಧಕೆ ನಿರೋಧಿಸುತ

ಭಾರತ ಭವಿಷ್ಯವನು ಬರೆವನವನು
ಸತ್ಯ-ಪರಮೇಶ್ವರನ ಭಕ್ತ, ವಿಜ್ಞಾನಿ.

ಮೇಣಿದೋ! ಜನರೊಡನೆ ನಲವಿನಿಂ ಬೆರೆಯುತ್ತ
ಅನ್ಯಾಯವಸಮತೆ ಅಧರ್ಮಗಳ ಜರೆಯುತ್ತ
ಕಾವ್ಯ ಕಹಳೆಯನೂದಿ ಜನರನೆಚ್ಚರಿಸುತ್ತ
ಸತ್ಯ ಸೌಂದರ್ಯಗಳ ಮಂತ್ರವುಚ್ಚರಿಸುತ್ತ

ಭಾರತ ಭವಿಷ್ಯವನು ಬರೆವನವನು
ಭಾರತಿಯ ವರಪುತ್ರ ಕವಿವರ್‍ಯನು.

ಅದೊ! ವಿಶಾಲಪ್ರಪಂಚಕೆ ಭಾರತದ ಕೀರ್ತಿ
ಹರಡಿ, ಮೇಣ್ ಗಳಿಸುತ್ತ ಹೊರದೇಶಗಳ ಅರ್ತಿ.
ದೇಶ ದೇಶಕೆ ನಂಟುನೇಹಗಳ ಬಲಿಸುತ್ತ
ಯುದ್ಧವನು ನಿಲಿಸಿ ಶಾಂತಿ ಧ್ವಜವ ನಿಲಿಸುತ್ತ

ಭಾರತ ಭವಿಷ್ಯವನು ಬರೆವರವರು
ಸ್ವಾತಂತ್ರ್‍ಯ ಪಡೆದ ಭಾರತದ ನಾಯಕರು.

ಆಹ! ನೋಡು! ಕೊಂಡಾಡು ಭಕ್ತಿಯಿಂ ಪೊಡಮಡು
ಸತ್ಯ ಧರ್ಮ ಅಹಿಂಸೆಗಳಿಗಾಗಿ ಜೀವವನು
ಮುಡಿಪಿರಿಸಿ, ಬುದ್ಧದೇವನ ಧರ್ಮ ಚಕ್ರವನು
ಅಂತು ಚರಕವಗೈದು ನಡೆನುಡಿಯ ನೂಲಿನಿಂ

ಭಾರತ ಭವಿಷ್ಯವನು ಬರೆದು ಬರೆಯುತಲಿಹನು
ಜನತಾ ಜನಾರ್ದನನ ಭಕ್ತ ಗಾಂಧಿ ಮಹಾತ್ಮ
ಕ್ರಿಸ್ತ ಬುದ್ಧರ ಪಂತಿಯೊಳು ನಿಲುವ ಪೂತಾತ್ಮ
ಪ್ರತ್ಯಕ್ಷದೈವ ಪಾಮರರ ಪರಮಾತ್ಮ!
*****