ಬನ್ನಿರಿ ಬಾಲರೆ ನಡೆಯಿರಿ ಗೆಳೆಯರೆ
ನಾಡಿನ ಬಿಡುಗಡೆ ಕಾಳೆಗಕೆ
ತನ್ನಿರಿ ನಿಮ್ಮ ಕಪ್ಪ ಕಾಣಿಕೆಯ
ಭಾರತ ಮಾತೆಯ ಓಲಗಕೆ!

ಸತ್ಯದ ಕುದುರೆಯನೆಲ್ಲರು ಹತ್ತಿ
ಹಿಡಿದು ಝಳಪಿಸಿರಿ ಅಹಿಂಸೆ ಕತ್ತಿ
ತಿರುಗಿಸಿ ಗಿರ್‍ರನೆ ನೂಲುವ ಚರಕ
ಹುಟ್ಟಡಗಲಿ ದಾರಿದ್ರ್‍ಯದ ನರಕ.

ಹಿಂದೂ ಮುಸ್ಲಿಮ ಸಿಕ್ಕ ಪಾರಸಿಕ
ಜೈನ ಬೌದ್ಧ ಈಸಾಯಿ ಯೆಹೂದ್ಯ
ಉಚ್ಚ ನೀಚ ಕುಲ ಸ್ಪೃಶ್ಯಾಸ್ಪೃಶ್ಯ
ಎಂಬೀ ಭೇದಗಳನು ಮರೆದು
ಒಂದೇ ಮನದಲಿ ನುಗ್ಗಿರಿ ಮುಂದಕೆ
ದ್ವೇಷಭಾವನೆಯ ತೊರೆದು!

ವೈರಿಗಳೆಲ್ಲರು ಮಿತ್ರರೆ ಅಂದು
ಅವರೆಲ್ಲರ ರಣರಂಗದಿ ಕೊಂದು
ಪಾಪವ ಗೈಯುವ ಉದ್ಯೋಗ
ಇಲ್ಲ: ನಮ್ಮದಾತ್ಮತ್ಯಾಗ.
ಮೂಡಿದಂದು ಸ್ವಾತಂತ್ರ್‍ಯದ ಸೂರ್‍ಯ
ಮುಗಿವುದು ನಮ್ಮ ಯುದ್ಧದ ಕಾರ್‍ಯ;
ಅದಕಾಗಿಯೆ ನಾವ್ ದುಡಿಯೋಣ,
ಅವಶ್ಯಬಿದ್ದರೆ ಮಡಿಯೋಣ!
*****