ಇಸ್ಲಾಂ-ಷಿಯಾ-ಸುನ್ನಿ-ಕೊಲೆ-ಇತ್ಯಾದಿ

ಚಿತ್ರ: ಅಲೆಕ್ಸಾ / ಪಿಕ್ಸಾಬೇ
ಚಿತ್ರ: ಅಲೆಕ್ಸಾ / ಪಿಕ್ಸಾಬೇ

ಯುದ್ಧದ, ಅಣ್ವಸ್ತ್ರಗಳ ಭೀತಿ ಒಂದು ಕಡೆಯಾದರೆ ಭೂಕಂಪ, ಪ್ರವಾಹ, ಚಂಡ ಮಾರುತ ಇತ್ಯಾದಿ ಪ್ರಕೃತಿಯ ವಿಕೋಪ ಮತ್ತೊಂದು ಕಡೆ. ಇವುಗಳ ಆತಂಕದಿಂದ ಬಿಡಿಸಿಕೊಂಡು ಕೊಂಚ ನೆಮ್ಮದಿ ಪಡೆಯಲು ಪ್ರಾರ್ಥನಾ ಮಂದಿರ ಹೊಕ್ಕರೆ ಅಲ್ಲಿ ಮತೀಯ, ಜನಾಂಗೀಯ ದ್ವೇಷದ ದಳ್ಳುರಿ. ಮನುಷ್ಯನಿಗೆ ರಕ್ಷಣೆ ಎಲ್ಲಿ? ಇದು ಭೂಮಿಯ ಮೇಲೆ ಬದುಕುತ್ತಿರುವ ಜೀವಿಗಳಲ್ಲಿ ಮನುಷ್ಯನ ದಾರುಣ ಸ್ಥಿತಿ. ಪಾಕಿಸ್ತಾನದಲ್ಲಿ ಷಿಯಾ ಸುನ್ನಿಗಳ ನಡುವ ನಡೆಯುತ್ತಿರುವ ಹಿಂಸಾಚಾರ ಇದಕ್ಕೆ ಒಂದು ಉತ್ತಮ ಉದಾಹರಣೆ.

ಜಗತ್ತಿಗೆ ಬಂದ ಎಲ್ಲ ದಾರ್ಶನಿಕರ ಕಾಲಾನಂತರ ಪಂಗಡಗಳು ಹುಟ್ಟಿಕೊಂಡಿವೆ. ಜೈನಧರ್ಮದ ಮಹಾವೀರ ಸತ್ತ ನಂತರ ದಿಗಂಬರ-ಶ್ವೇತಾಂಬರ ಪಂಗಡಗಳು: ಗೌತಮ ಬುದ್ಧ ಸತ್ತ ನಂತರ ಹೀನಯಾನ-ಮಹಾಯಾನ ಪಂಗಡಗಳು; ಏಸುಕ್ರಿಸ್ತ ನಂತರ ಕ್ಯಾಥೋಲಿಕ್-ಪ್ರೋಟೊಸ್ಟೆಂಟ್ ಪಂಗಡಗಳು; ಮಹಮ್ಮದ್ ಪೈಗಂಬರ್ ಸತ್ತ ನಂತರ ಷಿಯಾ-ಸುನ್ನಿ ಪಂಗಡಗಳು ಹೀಗೆ. ಇವು ಧರ್ಮವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಹಿಮ್ಮುಖವಾಗಿ ಲೌಕಿಕಗೊಂಡು ಒಳ ಜಗಳಗಳಿಗೆ ಒತ್ತುಕೊಟ್ಟಿರುವ ಕಾರಣ ಮನುಷ್ಯ ಮನುಷ್ಯರಲ್ಲಿ ದ್ವೇಷಕ್ಕೆ ಕಾರಣವಾಗಿ ಹೊಡದಾಟ ಕೊಲೆ ಸುಲಿಗೆಗಳು ಹೆಚ್ಚಾಗಿವೆ. ಅಂತಹ ಒಂದು ದಾರುಣ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ಅದೂ ಶುಕ್ರವಾರ ಪ್ರಾರ್ಥನಾ ಮಂದಿರದಲ್ಲಿ ನಡೆದಿದೆ.

ಕ್ರಿಶ್ಚಿಯನ್ನರ, ಮುಸ್ಲಿಮರ ಬಗ್ಗೆ ಅನ್ಯಧರ್ಮೀಯ ದುಷ್ಟರು ಮಾತನಾಡಿಕೊಳ್ಳುವುದುಂಟು. ಭಾನುವಾರ ಚರ್ಚಿನಲ್ಲಿ ಕ್ರಿಶ್ಚಿಯನ್ನರನ್ನೂ, ಶುಕ್ರವಾರ ಮಸೀದಿಯಲ್ಲಿ ಮುಸ್ಲಿಮರನ್ನೂ ಸುಲಭವಾಗಿ ಕೊಲ್ಲಬಹುದು ಎಂದು. ಆದರೆ ಕರಾಚಿಯಲ್ಲಿ ಅಂತಹ ಕೃತ್ಯ ನಡೆದದ್ದು ಅನ್ಯಧರ್ಮೀಯರಿಂದಲ್ಲ. ಅದು ಮುಸ್ಲಿಮರ ಮೇಲೆ ಅದೂ ಮುಸ್ಲಿಮರಿಂದಲೇ ಷಿಯಾ ಜನಾಂಗದ ಪ್ರಾರ್ಥನಾ ಮಂದಿರದಲ್ಲಿ ಸುನ್ನಿ ಜನಾಂಗದವರು ನಡೆಸಿದ ಬಂದೂಕಿನ ಹಲ್ಲೆ. ಒಂಭತ್ತು ಮಂದಿಯ ಕೊಲೆಗೈದರು. ಮುಸ್ಲಿಮರು ಮುಸ್ಲಿಮರ ಮೇಲೆ ಪ್ರಾರ್ಥನಾ ಮಂದಿರದಲ್ಲಿ ಅದೂ ಶುಕ್ರವಾರ ಇಂತಹ ಹತೈ ಗೈಯುವುದನ್ನು ಯಾರೂ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ನಡೆದಿದೆ ಎನ್ನುವುದು ವಿಪರ್ಯಾಸ.

ಭಾರತ ಇಬ್ಬಾಗವಾದಾಗ ಭಾರತವನ್ನು ಬಿಟ್ಟುಹೋದ ಮುಸ್ಲಿಮರು ಅಲ್ಲಿ ಸೌಖ್ಯವಾಗಿ ಬದುಕುವ ಆಸೆ ತುಂಬಿಕೊಂಡು ಹೋದರು. ಇಡೀ ರಾಷ್ಟ್ರದಲ್ಲಿ ‘ಇಸ್ಲಾಂ’ ಒಂದೇ ಧರ್ಮ, ಅನ್ಯಧರ್ಮೀಯರ ಆತಂಕವಿಲ್ಲ ಎಂದು ನೆಮ್ಮದಿಯ ಕನಸು ಕಂಡರು. ಆದರೆ ಅವರ ನೆಮ್ಮದಿಗೆ ಅವಕಾಶವಾಗಲಿಲ್ಲ. ಧರ್ಮ ಸಾಮರಸ್ಯಕ್ಕೆ ಅನ್ಯಮತಗಳನ್ನು ನಿಂದಿಸಿ ಪ್ರಯೋಜನವಿಲ್ಲ. ಧರ್ಮ ಹೃದಯಕ್ಕೆ ಸೇರಿದ್ದು, ಮತಗಳು ಮನಸ್ಸಿಗೆ-ಲೌಕಿಕಕ್ಕೆ ಸಂಬಂಧಿಸಿದ್ದು. ಹಾಗಾಗಿ ಇಂದು ಹೃದಯದ ಧರ್ಮ ಮರೆಯಾಗಿ ಮನಸ್ಸಿನ ಮತಗಳು ಮೆರಯುತ್ತಿವೆ. ಹೃದಯ ಸತ್ಯವನ್ನು ನುಡಿದರೆ ಮನಸ್ಸು ಸುಳ್ಳನ್ನು ಸೃಷ್ಟಿಸುತ್ತದೆ. ಹಾಗಾಗಿ ಸತ್ಯ ಮರೆಯಾಗಿ ಸುಳ್ಳು ವಿಜೃಂಭಿಸುತ್ತಿರುವ ಕಾರಣ ಪರಸ್ಪರ ಅಪನಂಬಿಕೆಗೆ, ದ್ವೇಷಾಸೂಯೆಗಳಿಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಆಗಿರುವುದು ಅದೇ. ಷಿಯಾ ಸುನ್ನಿ ಮತದವರಿಬ್ಬರೂ ಧರ್ಮವನ್ನು ದೂರಮಾಡಿ ಮತಕ್ಕಾಗಿ ಮನುಷ್ಯತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ.

ಸೋದರ ಭಾವನೆಯನ್ನು ಇಸ್ಲಾಂ ಧರ್ಮದಷ್ಟು ಪರಿಣಾಮಕಾರಿಯಾಗಿ ಪ್ರಪಂಚದ ಮತ್ತಾವ ಧರ್ಮವೂ ಬೋಧಿಸುವುದಿಲ್ಲ. ಆ ಕಾರಣದಿಂದಲೇ ಇಸ್ಲಾಂ ಧರ್ಮೀಯರು ಪರಸ್ಪರ ತಬ್ಬಿ ಆಲಂಗಿಸಿಕೊಳ್ಳುವ ಕ್ರಿಯೆ ಹೃದಯ ಹೃದಯವನ್ನೂ ಬೆಸೆಯುವಂಥದ್ದು. ಆದರೆ ಮುಸಲ್ಮಾನರು ಷಿಯಾ ಸುನ್ನಿಗಳಾಗಿ ಒಡೆದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿ ಅವರ ಸಹೋದರರನ್ನು ಅವರೇ ಕೊಲ್ಲುವುದು ಅದೂ ಶುಕ್ರವಾರ ಪ್ರಾರ್ಥನೆ ಮಾಡುವ ಮಸೀದಿಯಲ್ಲಿ ಎಂದರೆ ಧರ್ಮದ ಹೆಸರಿನಲ್ಲಿ ನಡೆಯುವ ಕ್ರೌರ್ಯ ಇದಕ್ಕಿಂತ ಮತ್ತೊಂದಿಲ್ಲ.

ಇದಕ್ಕೆ ಕಾರಣ ಧರ್ಮವನ್ನು ಅರಿಯದೆ ಕೇವಲ ಅಪ್ಪಿಕೊಂಡಿರುವುದು. ಆದಕಾರಣವೆ ವಿವೇಕಾನಂದರು ‘ಪ್ರತಿಯೊಬ್ಬರೂ ತಮ್ಮ ದೇವದೂತನೊಬ್ಬನೇ ನಿಜವಾದ ದೇವದೂತನೆಂದರೆ ಅದು ಸರಿಯಲ್ಲ ಅಂಥವರಿಗೆ ಧರ್ಮದ ತಿಳಿವಳಿಕೆಯೇ ಇಲ್ಲ. ಈ ದೃಷ್ಟಿಯಲ್ಲಿ ಮಹಮದೀಯರು ಇನ್ನೂ ಹಿಂದುಳಿದಿರುವರು. ಕುರಾನ್ ಅನ್ನು ಸ್ವೀಕರಿಸಬೇಕು, ಇಲ್ಲವೇ ಮೃತ್ಯುವಶರಾಗಬೇಕು. ಬೇರೆ ಮಾರ್ಗವೇ ಇಲ್ಲ! ನೀವು ಕುರಾನ್ ಅನ್ನು ಓದಿದರೆ, ಬಹಳ ಪ್ರಖ್ಯಾತವಾದ ಸತ್ಯವಾಣಿಗಳು ಮೂಢನಂಬಿಕೆಯೊಂದಿಗೆ ಬೆರೆತಿರುವುದು ಕಾಣುತ್ತದೆ. ನಿಸ್ಸಂಶಯವಾಗಿಯೂ ಮಹಮ್ಮದನು ಪಳಗಿದ ಯೋಗಿಯಾಗಿರಲಿಲ್ಲ’ ಎಂದಿದ್ದಾರೆ. ಈ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಮನನ ಮಾಡಬೇಕು. ಅದರ ಒಳ ಬೆಳಕನ್ನು ಕಾಣಬೇಕು. ಆದ್ದರಿಂದ ಯಾವುದೇ ಧರ್ಮವನ್ನು ಅರಿತು ಅಪ್ಪಿಸಿಕೊಳ್ಳುವುದು ಆರೋಗ್ಯಕರ, ಅರಿಯದೆ ಅಪ್ಪಿಕೊಳ್ಳುವುದು ಅಪಾಯಕರ.

ಭೂಮಿಯ ಮೇಲಿನ ಮನುಷ್ಯನ ಜೀವನ ಕಾಲದಿಂದ ಕಾಲಕ್ಕೆ ಅರಿವಿನ ಕಡೆಗೆ ಪಯಣಿಸುತ್ತಾ ಸಾಗಿದೆ. ಒಂದು ಕಾಲದ ಅರಿವೇ ಸಾರ್ವಕಾಲಿಕವಾದುದು ಎಂದು ಬಾವಿಸುವುದು ಹಾಗೆ ಒಪ್ಪಿ ಅದಕ್ಕೆ ಬಂದಿಯಾಗುವುದು ಅಪಾಯಕಾರಕ. ಆದಕಾರಣ “ಪ್ರಪಂಚದ ಆಧ್ಯಾತ್ಮಿಕ ದರ್ಶನಗಳು ಒಂದು ಅಮೋಘಶಾಸ್ತ್ರ, ಬೈಬಲ್ಲು, ವೇದ, ಕುರಾನ್ ಮತ್ತು ಇತರ ಧರ್ಮಶಾಸ್ತ್ರಗಳೆಲ್ಲಾ ಕೆಲವು ಪುಟಗಳು ಮಾತ್ರ, ವ್ಯಕ್ತವಾಗಲು ಇನ್ನೂ ಅನಂತ ಪುಟಗಳಿವೆ” ಎಂದು ವಿವೇಕಾನಂದರು ಮನುಕುಲ ಮುಂದೆ ಕ್ರಮಿಸಬೇಕಾದ ವಿಸ್ತಾರದ ಅಗಾಧತೆಯನ್ನು ಮನವರಿಕೆ ಮಾಡಿದ್ದಾರೆ.

ಆದರೆ ಇಸ್ಲಾಂ ಧರ್ಮದಲ್ಲಿ ಅದಕ್ಕೆ ಅವಕಾಶವೆ ಇಲ್ಲ. ಕುರಾನ್ ಆಚೆಗೆ ನೋಡುವ ಸ್ವಾತಂತ್ರ್ಯದಿಂದ ಇಸ್ಲಾಂ ಧರ್ಮೀಯರು ವಂಚಿತರಾಗಿದ್ಧಾರೆ. ಅಲ್ಲದೆ ಪೈಗಂಬರ್ ಕಡೆಯ ಪ್ರವಾದಿ ಎಂದು ನಂಬಿರುವ ಕಾರಣ ಅನೇಕ ಮಹಾನ್ ಚಿಂತಕರೂ ಕೂಡ ಅದರ ವ್ಯಾಖ್ಯಾನದಲ್ಲೆ ತಮ್ಮ ಶಕ್ತಿಯನ್ನು ವ್ಯಯಿಸುವ ದುರಂತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಸ್ಲಾಂ ಒಂದೆ ಅಲ್ಲ ಅಂತಹ ಬಂಧನಕ್ಕೆ ಒಳಗಾಗಿರುವ ಎಲ್ಲ ಧರ್ಮಗಳೂ ಸಂಘರ್ಷಕ್ಕೆ ಕಾರಣವಾಗಿ ಅವರವರು ಅವರವರೊಳಗೇ ಹೊಡೆದಾಡುವ, ಒಬ್ಬರು ಮತ್ತೊಬ್ಬರ ಕತ್ತನ್ನೂ ಕತ್ತರಿಸುವ, ವಂಚಿಸಿ ಸುಲಿಯುವ ಕ್ರೌರ್ಯಕ್ಕೆ ಒಳಗಾಗಿದ್ದಾರೆ. ಧರ್ಮದ ಕ್ರಿಯೆ ಕೊಲ್ಲುವುದಲ್ಲ, ಕೊಲ್ಲುವ ಮನಸ್ಸುಗಳನ್ನು ಗೆಲ್ಲುವುದು: ಸುಲಿಯುವುದಲ್ಲ ಪರಸ್ಪರ ಒಲಿಯುವಂತೆ ಮಾಡುವುದು.

“ಇಸ್ಲಾಂ ತನ್ನ ಮತಾನುಯಾಯಿಗಳನ್ನೆಲ್ಲಾ ಸಮದೃಷ್ಟಿಯಿಂದ ನೋಡುತ್ತದೆ. ಮಹಮದೀಯ ಧರ್ಮ ಬಂದುದು ತಮ್ಮ ಮತಾನುಯಾಯಿಗಳಲ್ಲಿ ಅನುಷ್ಠಾನ ಸಾಧ್ಯವಾದ ಒಂದು ಸೋದರ ಭಾವನೆಯನ್ನು ಸಾರುವುದಕ್ಕೆ. ಇದೇ ಮಹಮದೀಯ ಧರ್ಮದ ತಿರುಳು. ಮಹಮದೀಯರಲ್ಲಿ ಸೋದರಭಾವ ಇರಬೇಕು ಎಂಬುದನ್ನು ಮಹಮ್ಮದ ತನ್ನ ಜೀವನದಲ್ಲಿ ತೋರಿದ” ಎಂದು ವಿವೇಕಾನಂದರು ಅ ಧರ್ಮದ ಶ್ರೇಷ್ಟತೆಯನ್ನು ಕೊಂಡಾಡಿದ್ದಾರೆ. ಆದರೆ ಆ ಧರ್ಮದಲ್ಲಿ ಈಗ ಆಗುತ್ತಿರುವುದೇನು? ಅನ್ಯಧರ್ಮೀಯರೊಟ್ಟಿಗಿರಲಿ ಅವರವರಲ್ಲಿಯೇ ಸಾಮರಸ್ಯವಿರದ ಷಿಯಾ- ಸುನ್ನಿ ಹೆಸರಿನ ಅಸಹನೆ, ಕೊಲೆ, ಸುಲಿಗೆ ಇತ್ಯಾದಿ- ಇದನ್ನ ‘ಅಲ್ಲಾ’ ಎಂದೂ ಕ್ಷಮಿಸುವುದಿಲ್ಲ.

ಮಸೀದಿಯಲ್ಲಿ ಷಿಯಾ ಪಂಗಡದವರು ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಸುನ್ನಿ ಪಂಗಡದವರು ಬಂದೂಕಿನಿಂದ ಒಂಭತ್ತು ಜನರ ಹತ್ಯೆಗೈದಿದ್ದಾರೆ. ಮಸೀದಿಯ ಹೊರಗೆ ಲೆಕ್ಕವಿಲ್ಲದಷ್ಟು ಕೊಲೆ, ಸುಲಿಗೆ, ಹಿಂಸಾಚಾರ ಪರಸ್ಪರ ನಡೆಯುತ್ತಿದೆ. ಪ್ರಾರ್ಥನೆಯನ್ನು ದಿನಕ್ಕೆ ಐದು ಸಾರಿ ಕಡ್ಡಾಯವಾಗಿ ಮಾಡುವ ಮುಸಲ್ಮಾನರು ಆ ಐದು ಬಾರಿ ಏನೆಂದು ಪ್ರಾರ್ಥಿಸುತ್ತಾರೆ! ಓ ದೇವರೇ, ಸಹೋದರನ ಕತ್ತನ್ನು ಕತ್ತರಿಸಲು ಶಕ್ತಿಕೊಡು ಎಂದೆ?

ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿದ ಪೈಗಂಬರರು ಅವರೇ ಪ್ರಾರ್ಥನೆಗೆ ಒಮ್ಮೆ ತಡವಾಗಿ ಬಂದಾಗ ಆತನ ಶಿಷ್ಯರು ಕೇಳಿದರು, ನೀವೇ ತಡವಾಗಿ ಬರಬಹುದೆ ಎಂದು. ಆಗ ಪೈಗಂಬರರು ತಡವಾದುದಕ್ಕೆ ಕಾರಣ ಹೇಳುತ್ತಾರೆ. “ಬರುವಾಗ ದಾರಿಯಲ್ಲಿ ಒಂದು ಮಗು ತಪ್ಪಿಸಿಕೊಂಡು ಅಳುತ್ತಿತ್ತು. ಅದನ್ನು ಎತ್ತಿಕೊಂಡು ಅದರ ತಾಯಿಯನ್ನು ಹುಡುಕಿ ತಾಯಿಯ ಬಳಿ ಬಿಟ್ಟು ಬರುವಲ್ಲಿ ತಡವಾಗಿದೆ. ತಾಯಿಗೆ ಮಗುವನ್ನ, ಮಗುವಿಗೆ ತಾಯಿಯನ್ನ-ತಾಯಿ ಮಗುವನ್ನ ಒಂದಾಗಿಸುವ ಕ್ರಿಯೆ ಪ್ರಾರ್ಥನೆಗಿಂತ ಪವಿತ್ರವಾದುದು. ಅಂತಹ ಕಾರ್ಯಗಳು ಪ್ರಾರ್ಥನೆಗಿಂತ ಪವಿತ್ರವಾದುದು” ಎಂದು ಜೀವ ಜೀವಗಳು ಒಂದಾಗುವ ಕ್ರಿಯೆಗೆ ಪ್ರಾರ್ಥನೆಗಿಂತ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ.

ಅಂತಹ ಪೈಗಂಬರರನ್ನು ಸ್ವೀಕರಿಸಿದ ಮುಸಲ್ಮಾರು ಅವರು ಷಿಯಾ ಆಗಿರಲಿ-ಸುನ್ನಿ ಆಗಿರಲಿ ನಿಜವಾದ ಮುಸಲ್ಮಾನರಾಗಿದ್ದರೆ ಜೀವಗಳನ್ನು ಒಂದಾಗಿ ಕಂಡು ರಕ್ಷಿಸಬೇಕು. ಹಾಗಲ್ಲದೆ ಅವರು ಬಂದೂಕು ಹಿಡಿದು ಮಸೀದಿಯಲ್ಲಿ ಅದೂ ಶುಕ್ರವಾರ ಜೀವ ತೆಗೆಯುವುದೆಂದರೆ ಅದು ಪ್ರವಾದಿ ಪೈಗಂಬರರಿಗೆ, ಕುರಾನ್‌ಗೆ, ಇಸ್ಲಾಂ ಧರ್ಮಕ್ಕೆ ಹಾಗೂ ಜೀವಕೊಟ್ಟ ತಾಯಿಗೆ ಮಾಡುವ ದ್ರೋಹವಾಗುತ್ತದೆ.

ಇದು ಇಂದು ಕರಾಚಿಯ ಷಿಯಾ-ಸುನ್ನಿಗಳ ನಡುವೆ ನಡೆಯುತ್ತಿರಬಹುದು. ಅದು ನಾಳೆ ಎಲ್ಲೆಡೆ ಎಲ್ಲ ಧರ್ಮಗಳ ನಡುವೆ ನಡೆಯಬಹುದು. ಧರ್ಮಗಳ ಬಗ್ಗೆ ಇರುವ ನಮ್ಮ ಮೆನೋಧರ್ಮ ಹೀಗೇ ಮುಂದುವರೆದರೆ ಅದು ಆಗುವುದರಲ್ಲಿ ಆಶ್ಚರ್ಯವಿಲ್ಲ.

ಆದ್ದರಿಂದ ಇಂಥ ಮತಧರ್ಮಗಳ ಅನುಯಾಯಿಗಳಾಗುವುದಕ್ಕಿಂತ ಆ ಮತ ಧರ್ಮಗಳಿಂದ ದೂರ ಇದ್ದು ಕನಿಷ್ಟ ಮನುಷ್ಯರಾಗಿ ಪರಸ್ಪರ ಪ್ರೀತಿಸೋಣ, ಪ್ರೀತಿಯೇ ದೇವರು, ಧರ್ಮ ಎಲ್ಲ. ಆ ಪ್ರೀತಿ ನಮ್ಮ ಹೃದಯವನ್ನು ಬೆಳಗಲಿ. ಪ್ರೀತಿಯೇ ನಿಜವಾದ ಧರ್ಮವಾಗಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಬ್ಬಗಳು
Next post ಕಟುಕ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys