ಬುದ್ಧನಾಗಲಿಲ್ಲ ನಾ
ಕೇರಿಂದೆದ್ದು ಬರಲಾಗಲೇ ಇಲ್ಲ!
ಬಿದ್ದಲ್ಲೆ ಬಿದ್ದು ಬಿದ್ದು…
ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು…
ಒದ್ದಾಡುತ್ತಿರುವೆ!
ಕೇರಿಂದೆ ಹೊರಗೇ ಬರಲಾಗಲೇ ಇಲ್ಲ
ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ!
*

ಜಗವೆಲ್ಲ ಮಲಗಿರಲು
ಶತಶತಮಾನಗಳಿಂದಾ ಎದ್ದಿರುವೆವು ನಾವು!
ನಿದ್ದಿಲ್ಲದೆ, ಮನೆ, ಮಠ, ಸೂರಿಲ್ಲದೇ…
ಬುದ್ಧನಾಗುವ ಸಂಕಲ್ಪ ನಮಗುಂಟೇ?!
ಹೊಟ್ಟೆ, ಬಟ್ಟೆಗೆ,
ಆಸೆ ಪಟ್ಟು
ಕಟ್ಟು ನಿಟ್ಟಿಗೆ,
ಒಳಪಟ್ಟು
ಗತಿಗೆಟ್ಟವರೆಂಬಾಪಟ್ಟ,
ಗಿರಿಜನರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಸಾವೆಂಬಾ ಅವಮಾನ!
ಕಂಗೆಟ್ಟ ಹಸಿವು,
ರೋಗರುಜಿನೆಂಬಾ ಹಾಸಿಗೆ
ಬಡತನವೆಂಬಾ ಸಂಕೋಲೆ
ಜಾತಿ, ಮತ, ಕುಲ, ಭೇದಗಳೆಂಬಾ ಕೆಂಭೂತ,
ಅನಕ್ಷರೆಂಬಾಭೂತ
ಸಂಸಾರವೆಂಬಾ ಪಿಶಾಚಿಗೆ,
ಬೇಸತ್ತರೂ ವೈರಾಗ್ಯವೆಂಬುದಿಲ್ಲ!
ಇನ್ನು ಬುದ್ಧನಾಗುವ ಬಯಕೆ…
ನಮಗೆಲ್ಲಿದೆ ಬುದ್ಧಾ?!
ದರಿದ್ರರೆಂಬಾ-ಪಟ್ಟ,
ಹರಿಜನರೆಂಬಾ-ಚಟ್ಟ,
ನಮಗಲ್ಲದೆ ಇನ್ಯಾರಿಗಿದೆ ಬುದ್ಧಾ?!
*

ನಿದ್ದಿಲ್ಲದೆ,
ಬುದ್ಧಿಲ್ಲದೆ,
ದುಡಿದ ದೇಹಕ್ಕಿಲ್ಲ ತುಂಡು ಬಟ್ಟೆ?!
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ದರಿದ್ರ ಜನರೆಂದು ಜರಿವಾಗ
ಬಾಹುಬಲಿಯೆಂಬಾಪಟ್ಟ,
ಹೊಲಗೇರಿಯವರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಬೋಧಿ ವೃಕ್ಷದಾ ಕೆಳಗೆ!
ಮರ, ಗಿಡಗಳಾ ಆಸರೆಲಿ,
ನಿದ್ದಿಲ್ಲದೆ, ರಾತ್ರೆಲ್ಲ ಎದ್ದು,
ಬೋಧಿವೃಕ್ಷಕೆ, ತೊಟ್ಟಿಲ ಕಟ್ಟಿ, ತೂಗಿದರೂ…
ಬುದ್ಧನಾಗುವಾ ಯೋಗ, ನಮೆಗೆಲ್ಲಿದೆ ಬುದ್ಧಾ…?!
*****

ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)