ಕನ್ನಡ ಸಂಸ್ಕೃತಿ ರೂಪಿಸಿದ ಚಿ.ಶ್ರೀ.

ಕನ್ನಡ ಸಂಸ್ಕೃತಿ ರೂಪಿಸಿದ ಚಿ.ಶ್ರೀ.

ಚಿತ್ರ: ಮಾತುಕತೆ.ವರ್ಡಪ್ರೆಸ್.ಕಾಂ
ಚಿತ್ರ: ಮಾತುಕತೆ.ವರ್ಡಪ್ರೆಸ್.ಕಾಂ

ಅಗಲಿದ ಇಷ್ಟಪಾತ್ರರನ್ನು ನೆನಪಿಸಿಕೊಳ್ಳುವುದು ಯಾತನೆಯ ಸಂಗತಿಯೂ ಹೌದು; ಹಿತ ಅನುಭವವೂ ಹೌದು. ಯಾತನೆಗೆ ಕಾರಣ ಅವರು ನಮ್ಮೊಂದಿಗಿಲ್ಲ ಎನ್ನುವುದು. ಅವರ ನೆನಪು ಮನಸ್ಸನ್ನು ಆರ್ದ್ರಗೊಳಿಸುವುದು ಹಿತ ಅನುಭವಕ್ಕೆ ಸಂಬಂಧಿಸಿದ್ದು. ಆರ್ದ್ರತೆಯ ಈ ಆನುಭವ ಆ ಕ್ಷಣಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಇಂಥ ಸ್ಮರಣೆಯ ಅನುಭವಗಳು ನಮ್ಮನ್ನು ಮಾನವೀಯಗೊಳಿಸುತ್ತವೆ; ಆ ಮೂಲಕ ನಮ್ಮೊಳಗಿನ ಕೆಡುಕನ್ನು ಕಿಂಚಿತ್ತಾದರೂ ತೊಳೆಯುತ್ತವೆ ಎನ್ನುವುದು ನನ್ನ ನಂಬಿಕೆ. ರಾಜುಮೇಷ್ಟ್ರು- ಚಿ.ಶ್ರೀನಿವಾಸರಾಜು ಅವರ ಸ್ಮರಣೆ ಕೂಡ ನನ್ನ ಪಾಲಿಗೆ ಯಾತನೆಯ ಹಾಗೂ ಹಗುರಗೊಳ್ಳುವ ಮಾರ್ಗ.

ಶ್ರೀನಿವಾಸರಾಜು ಅವರ ಬಗೆಗಿನ ನನ್ನ ವೈಯಕ್ತಿಕ ಅನುಭವಗಳು ತೀರಾ ಸೀಮಿತ. ಯಾಕೆಂದರೆ ಆ ಅನುಭವಗಳು ನನ್ನ ಗೆಳೆಯರ, ಸಮಕಾಲೀನ ಬರಹಗಾರರ ಅನುಭವಗಳೂ ಆದುದರಿಂದ ಅವುಗಳಿಗೆ ಖಾಸಗಿತನದ ಹಂಗಿಲ್ಲ. ಹಾಗಾಗಿಯೇ ಚಿ.ಶ್ರೀ. ಅವರೆ ಬಗ್ಗೆ ಏನನ್ನು ಬರೆಯಲು ಹೊರಟರೂ ಅದು ಕ್ಲೀಷೆಯಂತೆ ಕಾಣಲಿಕ್ಕೆ, ಇತರರ್‍ಅ ವೈಯಕ್ತಿಕ ಅನಿಸಿಕೆಗಿಂಥ ಸಾರ್ವತ್ರಿಕ ಅನುಭವದಂತೆ ಕಾಣುತ್ತದೆ. ರಾಜುಮೇಷ್ಟ್ರನ್ನು ನೆನಪಿಸಿಕೊಳ್ಳುತ್ತಿರುವ ಈ ಹೊತ್ತು ಕೂಡ ನನ್ನ ಕಣ್ಣುಮನಸ್ಸಿನ ತುಂಬ ಆವರ ನಗುಮುಖವೊಂದನ್ನು ಬಿಟ್ಟರೆ ಬೇರೇನೂ ಸಲೀಸಾಗಿ ಮೂಡುತ್ತಿಲ್ಲ.

ಇತ್ತೀಚೆಗೆ ಜಿ.ಪಿ. ರಾಜರತ್ನಂ ಅವರ ಸಂಸ್ಕರಣ ಗ್ರಂಥ ‘ರಾಜಮಾರ್ಗ’ ಕೈಗೆ ಸಿಕ್ಕಾಗ ತಕ್ಷಣ ಅನ್ನಿಸಿದ್ದು ಈ ಕೃತಿಯಲ್ಲಿ ರಾಜರತ್ನಂ ಬಗ್ಗೆ ಚಿ.ಶ್ರೀ. ಏನಾದರೂ ಬರೆದಿರಬಹುದಾ ಎನ್ನುವುದು? ಕೃತಿಯ ಪರಿವಿಡಿ ನಿರಾಶೆಗೊಳಿಸಲಿಲ್ಲ ಸೆಂಟ್ರಲ್ ಕಾಲೇಜಿನಲ್ಲಿ ತಮ್ಮ ಇಷ್ಟಗುರುವಿನ ಸಾಧನೆಯ ಬಗ್ಗೆ ಆವರು ಲೇಖನವೊಂದನ್ನು ಬರೆದಿದ್ದರು. ಆ ಲೇಖನವನ್ನು ಓದಿದ ನಂತರ, ಇದು ರಾಜರತ್ನಂ ಮಾತ್ರವಲ್ಲ ರಾಜು ಅವರ ಕುರಿತ ಬರಹ ಕೂಡ ಅನ್ನಿಸಿತು. ಲೇಖನದಲ್ಲಿನ ಹೆಸರು ಹಾಗೂ ಇಸವಿಗಳನ್ನು ಬದಲಿಸಿಬಿಟ್ಟರೆ ಅದು ಶ್ರೀನಿವಾಸರಾಜು ಬದುಕಿನ ಸ್ಮರಣೆಯೇ ಆಗಿಬಿಡುತ್ತದೆ. ಆ ಬರಹದ ಕೆಲ ಸಾಲುಗಳು ಹೀಗಿವೆ:

“ರಾಜರತ್ನಂ ೧೯೫೩ ರಿಂದ ೧೯೬೨ ರವರೆಗೆ ಹದಿನಾಲ್ಕು ‘ಕಾಲೇಜು ಬರವಣಿಗೆ’ ಪುಸ್ತಕಗಳನ್ನು ಪ್ರಕಟಿಸಿದರು. ಈ ಬರವಣಿಗೆಯಲ್ಲಿ ಎಲ್ಲ ರೀತಿಯ ‘ಗರಡಿಯ ಫಲ’ವನ್ನು ಕಾಣಬಹುದು. ಅಂದು ‘ಕಾಲೇಜ್ ಬರವಣಿಗೆ’ಯಲ್ಲಿ ಕಾಣಿಸಿಕೊಂಡವರಲ್ಲಿ ಕೆಲವರು ಇಂದು ಸತ್ವಪೂರ್ಣ ಸಾಹಿತ್ಯಸೃಷ್ಟಿಯಿಂದ ಹೆಸರಾಗಿದ್ದಾರೆ. ಲಂಕೇಶ್, ನಿಸಾರ್ ಅಹಮದ್, ಸುಮತೀಂದ್ರ ನಾಡಿಗ್- ಹೀಗೆ ಪಟ್ಟಿ ಬೆಳೆಯುತ್ತದೆ.

ರಾಜರತ್ನಂ ವಿದ್ಯಾರ್ಥಿ ಸಾಹಿತ್ಯ ಲಾಲನೆಯನ್ನು ಕಾರ್ಯಸಾಧನೆಯನ್ನು ಹೀಗೆ ಗುರ್ತಿಸಬಹುದು: ವಿದ್ಯಾರ್ಥಿ ಪ್ರತಿಭೆಯನ್ನು ಗುರುತಿಸಿ ಆತ್ಮವಿಶ್ವಾಸ ಹುಟ್ಟಿಸಿದ
ಕ್ಷೇಮಕಾರಿ. ವಿದ್ಯಾರ್ಥಿಗಳ ಅರಿವನ್ನು ಬೆಳಗಿಸಿಕೊಳ್ಳಲು ಸಹಾಯಕ ಸಾಮಗ್ರಿಗಳನ್ನು ನೀಡಿದ ದೀಪಧಾರಿ. ವಿದ್ಯಾರ್ಥಿ ಬರವಣಿಗೆಯ ಲೋಪದೋಷಗಳನ್ನು ತಿದ್ದಿಸರಿಪಡಿಸಿದ ದಂಡಧಾರಿ. ಈ ಬಗ್ಗೆ ಲಂಕೇಶ್ –

….ಇವರು (ರಾಜರತ್ನಂ) ಸಂಘದ ಮೂಲಕ ನನ್ನಂಥವರನ್ನು ಪ್ರೋತ್ಸಾಹಿಸಿ, ಹಿಂಸಿಸಿ, ಹೊಗಳಿ, ನಾವು ಬರೆದದ್ದನ್ನು ಆರಿಸಿ ಪ್ರಕಟಿಸದಿದ್ದರೆ ನಮಗೆ ಶೈಲಿಯಾಗಲಿ, ಭಾಷಾ ಶುದ್ಧಿಯಾಗಲಿ ಇರುತ್ತಿರಲಿಲ್ಲ. ಸಂಗ್ರಹವಾಗಿ, ಸ್ಪಷ್ಟವಾಗಿ, ಸದಭಿರುಚಿಯಿಂದ ಬರೆಯುವುದನ್ನು ಹೇಳಿಕೊಡುತ್ತಿದ್ದರು. ಇವರು ಯಾರನ್ನೂ ಏನನ್ನೂ ಕೇಳದಿದ್ದುದು, ಯಾರೆದುರೂ ತಲೆಬಾಗದಿದ್ದುದು, ವಿಚಿತ್ರ ರೀತಿಯ ಸಂಕೋಚ ಮತ್ತು ಮಾಡುವ ಕೆಲಸದಲ್ಲಿ ತೃಪ್ತಿ. ಇವರು ಯಾವುದೇ ಮಿನಿಷ್ಟರನ್ನು ಕಂಡು ಹಲ್ಲುಗಿಂಜುವ ಸ್ಥಿತಿಯನ್ನು ನೆನಸಿಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ. ಇದು ರಾಜರತ್ನಂ ಕಲಿಸಿದ ನಾನ್ ವರ್ಬಲ್ ಆದ ಪಾಠ.

೧೯೫೫ರ ಫೆಬ್ರವರಿ. ಸೆಂಟ್ರಲ್ ಕಾಲೇಜಿನಲ್ಲಿ ರಾಜರತ್ನಂ ಅವರಿಂದ ‘ಸಂಸ’ ಕೃತಿಗಳ ಪ್ರದರ್ಶನ. ಯಾವುದೋ ಕೆಲಸಕ್ಕೆ ಬಂದಿದ್ದ ಫ್ರೆಂಚ್ ಪ್ರೊಫೆಸರ್ ಒಬ್ಬರು ಪ್ರದರ್ಶನಕ್ಕೆ ಬಂದರು. ಆ ಪ್ರದರ್ಶನ ಅವರಿಗೆ ಇಷ್ಟವಾಯಿಕು. ಹೊರಡುವ ಸಂದರ್ಭದಲ್ಲಿ ‘ಪ್ರೊ.ರಾಜರತ್ನಂಗೆ ನನ್ನ ಅಭಿನಂದನೆ ತಿಳಿಸಿ’ ಎಂದರು, ‘ಅವರು ಪ್ರೊಫೆಸರ್ ಅಲ್ಲ ಲೆಕ್ಚರರ್’ ಎಂದೆ. ‘ನನ್ನ ದೇಶದಲ್ಲಿ ಇಂತಹ ಒಂದು ಕೆಲಸವನ್ನು ಮಾಡಿದ್ದರೆ ಡಾಕ್ಟರೇಟ್ ಸಿಕ್ಕುತ್ತಿತ್ತು’ ಎಂದು ಹೇಳಿಹೋದರು.

ನಾನು ರಾಜರತ್ನಂ ಅಧ್ಯಾಪಕ ಜೀವನದ ಕೂನೆಯ ಬ್ಯಾಚ್ ವಿದ್ಯಾರ್ಥಿ. ಉದ್ಯೋಗ ಸಿಕ್ಕಿತು. ರಾಜರತ್ನಂ ಬಳಿ ಹೋಗಿ ವಿಷಯ ತಿಳಿಸಿದೆ. ಅವರು ಆಗ ಮೂರು ಅಂಶಗಳನ್ನು ಸದಾ ನೆನಪಿಡುವಂತೆ ಹೇಳಿದರು-
೧. ಒಂದು ಗಂಟೆ ಪಾಠ ಮಾಡಬೇಕಾದರೆ. ಎರಡು ಗಂಟೆ ಪಾಠಕ್ಕೆ ಸಿದ್ದವಾಗಿರು. ‘ಹಂಡೆ‘ (ತಲೆತೋರಿಸಿ) ಬೇಗ ಖಾಲಿಯಾಗಬಾರದು.
೨. ನೀನು ಮಾಡುವ ಪಾಠಗಳಿಗೆ ಟಿಪ್ಪಣಿ ತಯಾರಿಸು. ಪಾಠ ಮುಗಿದ ಮೇಲೆ ಹರಿದುಹಾಕು. ಅದನ್ನೇ ಇಟ್ಟುಕೊಂಡರೆ ಮತ್ತೆ ಪುಸ್ತಕ ಓದುವುದಿಲ್ಲ ಹೊಸ ವಿಷಯಗಳ ಕಡೆ ಗಮನ ಹರಿಯುವುದಿಲ್ಲ.
೩. ನೀನು ಮೇಷ್ಟು ಆಗುವವನು. ನಿಯತ್ತಾಗಿ ಪಾಠ ಮಾಡು. ಪಡೆದ ಸಂಬಳ ಜೀರ್ಣವಾಗಬೇಕು. ವಿದ್ಯಾರ್ಥಿಗಳ ಉತ್ಸಾಹವನ್ನು ಎಂದೂ ಕುಗ್ಗಿಸಬೇಡ. ತರಗತಿ ಮುಗಿದ ಮೇಲೆ ಬೋರ್ಡ್ ಮೇಲೆ ಬರೆದದ್ದನ್ನು ಚೆನ್ನಾಗಿ ಅಳಿಸಿ ಬಾ.

ವಿದ್ಯಾರ್ಥಿಯೊಬ್ಬ ತನ್ನ ಗುರುವನ್ನು ನೆನಪಿಸಿಕೊಳ್ಳುವುದು ಹೀಗಲ್ಲವೇ?

ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ನಡಿಗೆಯನ್ನು ‘ಕೃಷ್ಣಮಾರ್ಗ’, ‘ರತ್ನಮಾರ್ಗ’ ಎಂದು ಶ್ರೀನಿವಾಸರಾಜು ಗುರ್ತಿಸುತ್ತಾರೆ. ಈ ಪರಂಪರೆಗೆ ಮತ್ತೊಂದು ಮಾರ್ಗವನ್ನು ಸೇರಿಸಬಹುದು- ‘ರಾಜುಮಾರ್ಗ’. ಎಳೆಯ ಬರಹಗಾರರ ಪಾಲಿಗೆ ಅದು ರಾಜಮಾರ್ಗವೂ ಹೌದು. ಸಂಘದ ಕೆಲಸಕ್ಕಾಗಿ ತಮಗೆ ಬಂದಿದ್ದ ಬಂಗಾರದ ಪದಕವನ್ನು ರಾಜರತ್ನಂ ಅಡವಿಟ್ಟರೆ, ರಾಜು ಮೇಸ್ಟ್ರು ಪತ್ನಿಯ ಚಿನ್ನದ ಬಳೆಗಳನ್ನು ಪುಸ್ತಕ ಪ್ರಕಾಶನಕ್ಕೆ ಬಳಸಿಕೊಂಡರು. ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಮೂಲಕ ರಾಜರತ್ನಂ ಯುವಲೇಖಕರ ಒಂದು ಪಡೆ ರೂಪಿಸಿದಂತೆ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಮೂಲಕ ಚಿ.ಶ್ರೀ. ಗರಡಿಯಲ್ಲಿ ಯುವ ಬರಹಗಾರರ ಗುಂಪೊಂದು ರೂಪುಗೊಂಡಿತು. ಕನ್ನಡ ಕೆಲಸ, ಸಜ್ಜನಿಕೆ, ಶಿಷ್ಯ ವಾತ್ಸಲ್ಯ ಹೀಗೆ ರಾಜರತ್ನಂ-ರಾಜು ನಡುವಣ ಸಾಮ್ಯತೆ ಬೆಳೆಯುತ್ತದೆ. ವೈದೃಶ್ಯವಿರುವುದು ಬರವಣಿಗೆಯಲ್ಲಿ ತಮ್ಮೆಲ್ಲ ಕೆಲಸಗಳ ನಡುವೆಯೂ ರಾಜರತ್ನಂ ದೊಡ್ಡರೀತಿಯ ಬರವಣಿಗೆ ಸಾಧಿಸಿದರು. ಚಿ.ಶ್ರೀ. ಬರೆದದ್ದು ಕಡಿಮೆ ಆದರೆ, ಅವರು ಬರೆದ ‘ಮೂಕ ನಾಟಕಗಳು’ ಕನ್ನಡ ನಾಟಕ ಪ್ರಕಾರದಲ್ಲಿ ಹೊಸ ಪ್ರಯೋಗಗಳು ಎನ್ನುವುದನ್ನು ಗಮನಿಸಬೇಕು.

ಕಾಲೇಜು ಕನ್ನಡ ಸಂಘಗಳ ಮೂಲಕ ಸಂಸ್ಕೃತಿ ಕಟ್ಟುವ ಸಾಧನೆಯನ್ನು ಗುರ್ತಿಸುವ ಸಂದರ್ಭದಲ್ಲಿ ಸೂಕ್ಷ್ಮವೊಂದನ್ನು ಗಮನಿಸಬೇಕು. ಅದು ಎ.ಆರ್.ಕೃಷ್ಣಶಾಸ್ತ್ರಿ ಹಾಗೂ ಜಿ.ಪಿ.ರಾಜರತ್ನಂ ಅವರಿಗೆ ಚಿ.ಶ್ರೀ. ಅವರಿಗಿಲ್ಲದ ಅನುಕೂಲವೊಂದು ಇತ್ತೆನ್ನುವುದು. ಅದು ಕಾಲಧರ್ಮಕ್ಕೆ ಸಂಬಂಧಿಸಿದ ಅನುಕೂಲ. ‘ಗುರು ದೇವೋಭವ’ ಎನ್ನುವಂಥ ಮಾತಿಗೆ ಹೆಚ್ಚು ತೂಕವಿದ್ದ ಕಾಲದಲ್ಲಿ ಬದುಕಿದ್ದವರು ಎ.ಆರ್.ಕೃ. ಹಾಗೂ ರಾಜರತ್ನಂ. ಗುರುಭಕ್ತಿ, ಶಿಷ್ಯ ವಾತ್ಸಲ್ಯದ ಮಾತುಗಳು ಕ್ಲೀಷೆ ಎನ್ನಿಸದ ದಿನಗಳವು. ಜಾಗತೀಕರಣದ ಫಲಗಳಾದ ಆಮಿಷಗಳಾಗಲೀ, ವ್ಯಾವಹಾರಿಕ ಮನೋಭಾವವಾಗಲೀ ಇಂದಿನ ಮಟ್ಟಿಗೆ ಚಾಲ್ತಿಯಲ್ಲಿಲ್ಲದ ದಿನಗಳವು. ಅಂಥ ದಿನಗಳಲ್ಲಿ ಕೃಷ್ಣಶಾಸ್ತ್ರಿ ಅಥವಾ ರಾಜರತ್ನಂ ಅವರು ಮಾರ್ಗದರ್ಶಕರಂತೆ ದುಡಿದರು. ಈ ದುಡಿಮೆಗೆ, ಸಾಧನೆಯ ಸಿದ್ಧಿಗೆ ಕಾಲವೂ ಅನುಕೂಲವಿತ್ತು. ಈ ಅನುಕೂಲ ಚಿ.ಶ್ರೀ. ಅವರಿಗಿರಲಿಲ್ಲ. ಅಲ್ಲದೆ ಕಾಲೇಜಿನಂಥ ಕಾರ್ಪೊರೇಟ್ ಸಂಸ್ಕೃತಿಯ ಪರಿಸರದಲ್ಲಿ ರಾಜು ಕನ್ನಡ ಕಟ್ಟುವ ಕೆಲಸ ಮಾಡಿದ್ದು ಗಮನಾರ್ಹ. ಅಂದರೆ, ಕೃಷ್ಣಶಾಸ್ತ್ರಿ ಆಥವಾ ರಾಜರತ್ನಂ ಸಾಧನೆಗಿಂತ ಚಿ.ಶ್ರೀ. ಸಾಧನೆ ಮಿಗಿಲು ಎಂದರ್ಥವಲ್ಲ. ರಾಜು ಅವರು ನಡೆದುದು ಮೇಲಿನ ಇಬ್ಬರು ಹಿರಿಯರು ನಡೆದ ಹೆದ್ದಾರಿಯಲ್ಲೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಾಲದ ಪ್ರತಿಕೂಲದ ನಡುವೆಯೂ ಅವರು ತಮ್ಮಹಿರಿಯರ ಮಾರ್ಗದಿಂದ ವಿಮುಖರಾಗಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಿಕ್ಕಷ್ಟೇ ಈ ಹೋಲಿಕೆ.

ರಾಜುಮೇಷ್ಟ್ರು ಬಗ್ಗೆ ಮಾತನಾಡುವಾಗಲೆಲ್ಲ ನೆನಪಾಗುವ ಮತ್ತೊಂದು ಚಿತ್ರ ಹಳ್ಳಿಯ ಅಜ್ಜನದು. ಜೋಬಿನಲ್ಲೋ, ಎಲೆಯಡಿಕೆಯ ಚೀಲದಲ್ಲೋ ಪೆಪ್ಪರಮಿಂಟುಗಳನ್ನು ಇರಿಸಿಕೊಂಡು ತನಗೆದುರಾದ ಮಕ್ಕಳಿಗೆಲ್ಲ ಸಿಹಿ ಹಂಚುವ ಅಜ್ಜನಂತೆ ರಾಜುಮೇಷ್ಟ್ರು ತಮಗೆ ಸಿಕ್ಕ ಹುಡುಗರಿಗೆಲ್ಲ ಪುಸ್ತಕ ನೀಡುತ್ತಾ ಹೋದರು. ಎಳೆಯರ ಕವಿತೆಗಳನ್ನು ಪ್ರೀತಿಯಿಂದ ಪ್ರಕಟಸಿದರು ಪುಸ್ತಕಗಳ ಗಂಟುಕಟ್ಟಿ ಮಾರಿದರು. ಬೇಂದ್ರೆ ಸ್ಮೃತಿ ಕವನ ಸ್ಪರ್ಧೆಯ ಮೂಲಕ ಬೇಂದ್ರೆ ಜಯುಂತಿಯ ದಿನಾಂಕವನ್ನು ಕಾವ್ಯದ ಬಗ್ಗೆ ಪ್ರೀತಿಯುಳ್ಳ ಯುವ ಮನಸ್ಸುಗಳಲ್ಲಿ ಅಚ್ಚುಹಾಕಿದರು; ಯುವ ಕವಿಗಳ ನಡುವೆ ಸ್ನೇಹದ ಬೀಜ ಬಿತ್ತಿದರು; ಬಹುಶಃ, ಇವತ್ತು ಗಮನಾರ್ಹ ಎನ್ನಬಹುದಾದ ಯಾವುದೇ ಲೇಖಕನನ್ನು ಮಾತನಾಡಿಸಿ; ಒಂದಲ್ಲಾ ಒಂದು ರೀತಿಯಲ್ಲಿ ಆತ ಚಿ.ಶ್ರೀ. ಸಂಪರ್ಕಕ್ಕೆ ಬಂದೇ ಇರುತ್ತಾನೆ. ಅದು ಕನ್ನಡದ ಮೇಷ್ಟ್ರೊಬ್ಬರು ಮಾಡಬಹುದಾದ ದೊಡ್ಡ ಕೆಲಸ. ಪಾಠ ಹೇಳದೆಯೇ ನೂರಾರು ಮಂದಿಯ ಪಾಲಿಗೆ ಆವರು ‘ರಾಜುಮೇಷ್ಟ್ರು’. ಇದು ಶಾಲೆ ಕಾಲೇಜುಗಳ ಚೌಕಟ್ಟು ಮೀರಿ ಮೇಷ್ಟ್ರೊಬ್ಬರು ಸಾಧಿಸಬಹುದಾದ ಮಾನಸಿಕ ಸಾಮೀಪ್ಯ.

ಮೂಕ ನಾಟಕಗಳನ್ನು ಬರೆದ ಚಿ.ಶ್ರೀ. ಮಾತು ಬೆಳ್ಳಿ, ಮೌನ ಬಂಗಾರ ಎಂದು ನಂಬಿದ್ದರೆನ್ನಿಸುತ್ತದೆ. ಕಿರಿಯರೇ ಇರಲಿ, ದೊಡ್ಡವರೇ ಇರಲಿ, ಎದುರಿಗೆ ಕೂತವರ್‍ಅ ಮಾತನ್ನು ಸಾವಧಾನದಿಂದ ಕೇಳಿಸಿಕೊಳ್ಳುವ ಗುಣ ಅವರಲ್ಲಿತ್ತು. ಅವರೊಂದಿಗಿನ ಎಷ್ಟೋ ಭೇಟಿಗಳು ಒಂದೆರಡು ಮಾತುಗಳಲ್ಲೇ ಮುಗಿದಿದ್ದಿದೆ. ಆದರೆ ಆ ಎಲ್ಲ ಭೇಟಿಗಳು ವಿಚಿತ್ರ ಸಂತೋಷವನ್ನು ಮನಸ್ಸಿಗೆ ಪ್ರಸನ್ನತೆಯನ್ನು ತಂದುಕೊಡುತ್ತಿದ್ದವು. ಅವರು ಕೈಕುಲುಕಿದರೆ ಕೈ ಬೆಚ್ಚಗಾಗುತ್ತಿತ್ತು. ಬೆನ್ನ ಮೇಲೆ ಕೈಯಾಡಿಸಿದರೆ ಮೈತುಂಬಾ ವಿಚಿತ್ರ ಪುಳಕ. ಅವರ ಸಜ್ಜನಿಕೆ, ಕಿರಿಯರ ಬಗೆಗಿನ ಆಸ್ಥೆ ಮಾನವೀಯ ಗುಣಗಳು ಸೇರಿಕೊಂಡು ಚಿ.ಶ್ರೀ. ಸ್ಪರ್ಶಕ್ಕೆ ವಿಚಿತ್ರ ಶಕ್ತಿ ಒದಗಿಸುತ್ತಿತ್ತು ಅನ್ನಿಸುತ್ತದೆ.

ರಾಜುಮೇಷ್ಟ್ರು ನಿಧನದಾದ ಬೆಳಗ್ಗೆ ಗೆಳೆಯ ‘ಸಂಚಯ’ದ ಪ್ರಹ್ಲಾದ್’ ಅವರಿಗೆ ಫೋನ್ ಮಾಡಿದರೆ ಅವರು ದೊಡ್ಡದನಿಯಲ್ಲಿ ಅಳುತ್ತಿದ್ದರು. ಸ್ವಲ್ಪಹೊತ್ತಿಗೆ ವಿಷಯ ತಿಳಿಸಲಿಕ್ಕಾಗಿ ಫೋನ್ ಮಾಡಿದ ಕವಯತ್ರಿ ಛಾಯಾ ಭಗವತಿ ಬಿಕ್ಕುತ್ತಿದ್ದರು. ದೂರದ ಊರಿನ ಚಿದಾನಂದ ಸಾಲಿ ದನಿ ಸಣ್ಣದಾಗಿತ್ತು. ಪಾಠ ಹೇಳಿಸಿಕೊಳ್ಳದ ನೂರಾರು ಶಿಷ್ಯರು ತಮ್ಮ ಮೇಷ್ಟ್ರಿಗಾಗಿ ಹನಿಗಣ್ಣಾಗಿದ್ದರು. ಅದು ಸುಲಭಕ್ಕೆ ಆರದ ತೇವ; ತುಂಬಲಾಗದ ಖಾಲಿತನ. ಏಕೆಂದರೆ, ಚಿ.ಶ್ರೀ. ನಮ್ಮ ಶಿಕ್ಷಣ ಕ್ರಮ ರೂಪಿಸಿದ ಮೇಷ್ಟ್ರಾಗಿರಲಿಲ್ಲ; ಅವರು ಕನ್ನಡ ಸಂಸ್ಕೃತಿ ರೂಪಿಸಿದ ಮೇಷ್ಟ್ರಾಗಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗನಾಣೆ
Next post ಖಾಲಿ ಶೀಷೆ

ಸಣ್ಣ ಕತೆ

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ದೊಡ್ಡ ಬೋರೇಗೌಡರು

  ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…