ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ
ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ
ತುದಿಮೊದಲು ತಿಳಿಯದೀ ನೀಲಿಯಲಿ?

ಒಂದೊಂದು ಹೂವಿಗೂ ಒಂದೊಂದು ಬಣ್ಣ
ಒಂದೊಂದು ಜೀವಕೂ ಒಂದೊಂದು ಕಣ್ಣ
ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ
ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ

ನೂರಾರು ನದಿ ಕುಡಿದೂ ಮೀರದಾ ಕಡಲು
ಭೋರೆಂದು ಸುರಿಸುರಿದೂ ಆರದಾ ಮುಗಿಲು
ಸೇರಿಯೂ ಕೋಟಿತಾರೆ ತುಂಬದಾ ಬಯಲು
ಯಾರದೀ ಮಾಯೆ, ಯಾವ ಬಿಂಬದಾ ನೆರಳು?

ಹೊರಗಿರುವ ಪರಿಯೆಲ್ಲ ಅಡಗಿಹುದೆ ಒಳಗೆ
ಹುಡುಕಿದರೆ ಕೀಲಿಕೈ ಸಿಗದೆ ಎದೆಯೊಳಗೆ?
ತಿಳಿಯದೆಲ್ಲದರಲ್ಲಿ ಕುಳಿತಿರುವೆ ನೀನೆ
ಎನ್ನುವರು, ನನಗೀಗ ಸೋಜಿಗವು ನಾನೆ!
*****