ಜಂಭದ ಮುದುಕಿ

ಜಂಭದ ಮುದುಕಿ

ತನ್ನ ಕೋಳಿಯ ಕೂಗಿನಿಂದಲೇ ಸೂರ್ಯ ಹುಟ್ಟೋದು, ತನ್ನ ಬೆಂಕಿಯಿಂದಲೇ ಹಳ್ಳಿಯ ಜನರು ಆಡುಗೆ ಮಾಡೋದು ಎಂದು ನಂಬಿಕೊಂಡು ಜಂಭ ಮಾಡಿದ ಮುದುಕಿಯ ಗರ್ವಭಂಗವಾದ ಕಥೆ ನಮ್ಮ ಜನಪದರು ಕಟ್ಟಿದ ಅಪರೂಪದ ಕಥೆಗಳಲ್ಲಿ ಒಂದು. ಇವತ್ತಿಗೂ ಕೂಡ ಈ ಕಥೆ ಆಪ್ತವಾಗುವುದು ತನ್ನಲ್ಲಿನ ಕೇಳಿಸಿಕೊಳ್ಳುವ ಕಥನ ಗುಣ ಹಾಗೂ ಕಥಾವಸ್ತುವಿನ ಸಾರ್ವಕಾಲಿಕತೆಯಿಂದ.

ಕಥೆ ಹೀಗಿದೆ: ಒಂದಾನೊಂದು ಕಾಲ. ಒಂದಾನೊಂದು ಊರು. ಆ ಊರಲ್ಲೊಬ್ಬಳು ಮುದುಕಿಯಿದ್ದಳು. ಆಕೆಯ ಬಳಿಯೊಂದು ಕೋಳಿ ಇತ್ತು. ಸೂರ್ಯ ಹುಟ್ಟುವ ಹೊತ್ತಿಗೆ ಸರಿಯಾಗಿ ಆ ಕೋಳಿ ಕೂಗುತ್ತಿತ್ತು. ಕೋಳಿ ಕೂಗಿನ ಅಲಾರಾಂಗೆ ಹಳ್ಳಿಯ ಜನ ನಿದ್ದೆಯಿಂದ ಎಚ್ಚರಾಗುತ್ತಿದ್ದರು. ಮುದುಕಿಯ ಬಳಿ ಅಗ್ಗಿಷ್ಟಿಕೆಯೂ ಇತ್ತು. ಹಳ್ಳಿಯ ಜನರೆಲ್ಲಾ ಆ ಅಗ್ಗಿಷ್ಟಿಕೆಯಿಂದಲೇ ಬೆಂಕಿ ತೆಗೆದುಕೊಂಡು ಹೋಗಿ ತಮ್ಮ ಮನೆಯ ಒಲೆ ಹೊತ್ತಿಸಿ, ಅಡುಗೆ ಮಾಡುತ್ತಿದ್ದರು. ಕೋಳಿ ಹಾಗೂ ಅಗ್ಗಿಷ್ಟಿಕೆ ಮುದುಕಿಯ ಆಸ್ತಿಯಾಗಿತ್ತು.

ಹೀಗೇ ದಿನ ಕಳೆಯುತ್ತಿದ್ದವು. ಒಂದಿನ- ತನ್ನ ಕೋಳಿಯಿಂದಲೇ ಊರಿನಜನ ನಿದ್ದೆಯಿಂದ ಎಚ್ಚರಾಗುವುದು, ತನ್ನ ಅಗ್ಗಿಷ್ಟಿಕೆಯಿಂದಲೇ ಊರಜನ ಕೂಳು ಬೇಯಿಸಿ ತಿನ್ನುವುದು ಎನ್ನುವ ಯೋಚನೆ ಮುದುಕಿಗೆ ಬಂತು. ‘ತನ್ನ ಕೋಳಿಯಿಲ್ಲದಿದ್ದರೆ ಊರವರು ನಿದ್ದೆಯಿಂದ ಎಚ್ಚರಾಗುವುದೇ ಇಲ್ಲ ತನ್ನ ಅಗ್ಗಿಷ್ಟಿಕೆಯಿಲ್ಲದಿದ್ದರೆ ಊರ ಮನೆಗಳ ಒಲೆಗಳು ಬೆಂಕಿ ಕಾಣುವುದೇ ಇಲ್ಲ ಎಂದು ಮುದುಕಿ ಜಂಭ ಪಟ್ಟಳು.

ತನ್ನ ಕೋಳಿ ಹಾಗೂ ಅಗ್ಗಿಷ್ಟಿಕೆಯಿಂದಲೇ ಈ ಊರಿನ ಬದುಕು ನಿಂತಿದ್ದರೂ, ಜನ ತನಗೆ ಸಲ್ಲಬೇಕಾದ ಗೌರವ ನೀಡುತ್ತಿಲ್ಲ ಅನ್ನಿಸಿ ಮುದುಕಿಗೆ ಬೇಜಾರಾಯಿತು. ಈ ಹಳ್ಳಿಯ ಜನಕ್ಕೆ ಬುದ್ಧಿ ಕಲಿಸಬೇಕು ಎಂದು ಮುದುಕಿ ನಿರ್ಧರಿಸಿದಳು. ಒಂದು ದಿನ, ಸೂರ್ಯ ಹುಟ್ಟೋದಕ್ಕೆ ತುಂಬಾ ಮುಂಚೆಯೇ ತನ್ನ ಕೋಳಿ ಹಾಗೂ ಅಗ್ಗಿಷ್ಟಿಕೆಯನ್ನು ತಗೊಂಡು ಉರುಬಿಟ್ಟ ಮುದುಕಿ ದೂರದ ಕಾಡಿಗೆ ಹೋಗಿ ಬಚ್ಚಿಟ್ಟುಕೊಂಡಳು. ಸಾಯಂಕಾಲ ದೂರದ ಬೆಟ್ಟದ ಮರೆಯಲ್ಲಿ ಸೂರ್ಯ ಮುಳುಗುವರೆಗೂ ಮುದುಕಿ ಕಾದಳು. ಆಮೇಲೆ ಹಳ್ಳಿಗೆ ಬಂದಳು.

ಮುದುಕಿ ನೋಡುತ್ತಾಳೆ, ಹಳ್ಳಿಯಲ್ಲಿ ಏನು ಅಂದರೆ ಏನೇನೂ ಬದಲಾಗಿಲ್ಲ. ತನ್ನ ಕೋಳಿ, ಅಗ್ಗಿಷ್ಟಿಕೆ ಇಲ್ಲದಿದ್ದರೂ ಜನ ಮಾಮೂಲಿನಂತೆ ತಮ್ಮ ಕೆಲಸ ಬೊಗಸೆ ಅಂತ ಮಾಡ್ತಿದಾರೆ. ಅಡುಗೇನೂ ಮಾಡಿ ಉಂಡಿದಾರೆ. ಕೆಲವು ಮನೆಗಳ ಹೊಗೆಗೂಡಿನಿಂದ ಬರುತ್ತಿದ್ದ ಹೊಗೆ ನೋಡಿ ಮುದುಕಿಗೆ ಸಖತ್ತು ಆಶ್ಚರ್ಯವಾಯ್ತು. ಅಷ್ಟರಲ್ಲೇ ತಲೆ ಮೇಲೆ ಹುಲ್ಲಿನ ಹೊರೆ ಹೊತ್ತುಕೊಂಡ ಯುವಕನೊಬ್ಬ ಮುದುಕಿಗೆ ಎದುರಾದ. ಆ
ಯುವಕನನ್ನು ಮುದುಕಿ ಕೇಳಿದಳು:

‘ಇವತ್ತು ನಾನು, ನನ್ನ ಕೋಳಿ ಮತ್ತು ಅಗ್ಗಿಷ್ಟಿಕೆ ಊರಲ್ಲಿ ಇರಲಿಲ್ಲವಲ್ಲ ನೀವೆಲ್ಲ ಬೆಂಕಿಗೆ ಏನು ಮಾಡ್ಕೊಂಡ್ರಿ? ನಿದ್ದೆಯಿಂದ ಹೇಗೆ ಎಚ್ಚರಾದ್ರಿ?’

ಯುವಕ ಕಿಸಕ್ಕನೆ ನಕ್ಕು- ‘ಜಂಭದ ಮುದುಕಿ ನೀನು. ನಿನ್ನ ಕೋಳಿ, ಬೆಂಕಿ ಇಲ್ಲಾಂದ್ರೆ ಲೋಕ ನಡೆಯೊಲ್ಲ ಅಂದ್ಕೊಂಡೆಯಾ? ನಿನ್ನ ಕೋಳಿ ಇಲ್ಲದಿದ್ದರೂ ಸೂರ್ಯ ಯಾವತ್ತಿನಂತೆ ಇವತ್ತೂ ಹುಟ್ಟಿದ, ನಾವೆಲ್ಲ ನಿದ್ದಯಿಂದ ಎಚ್ಚರವಾದ್ವಿ. ನಿನ್ನ ಅಗ್ಗಿಷ್ಟಿಕೆ ಇಲ್ಲದ್ದರಿಂದ ಪಕ್ಕದ ಊರಿಗೆ ಹೋಗಿ ಬೆಂಕಿ ತಂದ್ವಿ’ ಎಂದ.

ಮುದುಕಿಗೆ ಮುಂದೆ ಮಾತು ಹುಟ್ಟಲಿಲ್ಲ.

ಮುದುಕಿಯ ಗರ್ವಭಂಗದೊಂದಿಗೆ ಕಥೆ ಮುಗಿಯುತ್ತದೆ. ಮುದುಕಿಗೆ ಮುಂದಾದರೂ ಬುದ್ಧಿ ಬಂತಾ? ಜಂಭ ಮಾಡಿದ ಗ್ರಾಮದ ಜನ ಮುಂದೆ ಹೇಗೆ ನಡೆಸಿಕೊಂಡರು ? ಈ ಘಟನೆಯ ನಂತರವೂ ಮುದುಕಿ ಎಂದಿನಂತೆ ಹಳ್ಳಿಯಲ್ಲಿ ನೆಮ್ಮದಿಯಿಂದ ಬದುಕಿದಳಾ ಎನ್ನುವ ಪ್ರಶ್ನೆಗಳು ಉಳಿಯುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಕಥೆಯ ಉದ್ದೇಶವಲ್ಲ ಯಾರಿಗೆ ಯಾರೂ ಅಗತ್ಯವಲ್ಲ ಯಾರು ಇಲ್ಲದಿದ್ದರೂ ಲೋಕ ನಿಲ್ಲುವುದಿಲ್ಲ ಎನ್ನುವ ಸರಳ ಸತ್ಯವನ್ನು ಹೇಳುವುದಷ್ಟೇ ಈ ಕಥೆಯ ಬೀಜ.

ಅಗ್ಗಿಷ್ಟಿಕೆ ಹಾಗೂ ಕೋಳಿಯನ್ನು ಹೊಂದಿದ್ದ ಮುದುಕಿ ಇನ್ನೂ ಸತ್ತಿಲ್ಲದಿರುವುದೇ ಈ ಕಥೆ ಇವತ್ತಿಗೂ ತನ್ನ ಕೇಳಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳದಿರಲು ಕಾರಣ.

ಒಂದಲ್ಲಾ ಒಂದು ಬಾರಿ ಆ ಜಂಭದ ಮುದುಕಿ ನಮ್ಮೆಲ್ಲರಲ್ಲಿ ಅವತಾರ ತಾಳುತ್ತಳೇ ಇರುತ್ತಾಳೆ: ಆ ಮೂಲಕ ಜೀವಂತಳಾಗಿದ್ದಾಳೆ. ಅಗ್ಗಿಷ್ಟಿಕೆ ಹಾಗೂ ಕೋಳಿಗಳೂ ವಿವಿಧ ರೂಪಗಳಲ್ಲಿ ನಮ್ಮೊಂದಿಗೆ ಉಳಿದುಬಂದಿವೆ.

ಬದುಕು ಸ್ವಕೇಂದ್ರಿತವಾಗುತ್ತಾ ಹೋದಂತೆ ಜಂಭದ ಮುದುಕಿಗೆ ಹೆಚ್ಚು ಸಮೀಪವಾಗುತ್ತಿದ್ದಾನೆ. ಒಣ ಅಹಂ- ಸಿಟ್ಟು ಹಾಗೂ ಪ್ರತಿಯೊಂದೂ ತನ್ನ ನಿರೀಕ್ಷೆಯಂತೆಯೇ ಸಾಗಬೇಕೆನ್ನುವ ಮನೋಭಾವ ಕೋಳಿ. ಅಗ್ಗಿಷ್ಟಿಕೆಗಳಾಗಿ ನಮ್ಮನ್ನು ಸುಡುತ್ತವೆ.

ಸಮಾಜದ ಮೂಲ ಘಟಕವಾದ ಕುಟುಂಬಗಳನ್ನೇ ನೋಡಿ: ಅಪ್ಪ ಮಗನ ನಡುವೆ ಹೊಂದಾಣಿಕೆಯಿಲ್ಲ. ಗಂಡ ಹೆಂಡತಿಯ ನಡುವೆ ನಂಬಿಕೆಯಿಲ್ಲ. ಒಡಹುಟ್ಟಿದವರ ನಡುವೆ ಒಮ್ಮತವಿಲ್ಲ. ಗೆಳೆತನ ಅನ್ನುವುದು ಕೂಡ ಸ್ವಾರ್ಥದ ಕೂಪದಲ್ಲೇ ಕೊಳೆಯುತ್ತಿದೆ. ಸಂಬಂಧಗಳು ಇಷ್ಟೆಲ್ಲಾ ವಿಕರಾಳಗೊಳ್ಳಲು ನಮ್ಮೊಳಗಿನ ಈ ಜಂಭದ ಮುದುಕಿಯೇ ಕಾರಣ. ಯಾವತ್ತಾದರೂ ಅಮ್ಮನೊಂದಿಗೋ ಗೆಳತಿಯೊಂದಿಗೋ ತಮ್ಮನೊಂದಿಗೋ ಮುನಿಸಿಕೊಂಡಾಗ, ಅರೆಕ್ಷಣ ತಣ್ಣಗೆ ಯೋಚಿಸಿ. ಆಗ ಅರ್ಥವಾಗುತ್ತದೆ ನಮ್ಮ ಸಣ್ಣತನ. ಒಂದು ನಿಮಿಷದ ನಮ್ಮ ಮೌನ ಅಥವಾ ತಾಳ್ಮೆ ಈ ಅನಪೇಕ್ಷೆಣೀಯ ಸಂದರ್ಭವಮ್ನ ತಪ್ಪಿಸಬಲ್ಲದು. ಆದರೆ ಈ ಆರಿವಿನ ನಂತರವೂ ನಾವು ನಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು, ವಿಷಮವೃತ್ತದ ಪರಿಧಿಯಿಂದ ಹೊರಬರುವುದಿಲ್ಲ. ಅರ್ಥವಿಲ್ಲದ ಸ್ವಾಭಿಮಾನದ ಸಂಕೋಲೆಯಿಂದ ಹೊರಬೀಳುವುದು ಅಷ್ಟು ಸುಲಭವಲ್ಲ.

ಸಂಬಂಧಗಳ ನವೀಕರಣಕ್ಕೆ ಜಗಳ ಯಾವತ್ತೂ ಅಗತ್ಯವೇ. ಆದರೆ, ಸಂಬಂಧದ ನವೀಕರಣದ ಬದಲು ಸಂಬಂಧ ಕೊನೆಗೊಳ್ಳಲೂ ಜಗಳ ಕಾರಣವಾಗಬಹುದು. ನಿಜವಾದ ಸಮಸ್ಯೆ ಪ್ರಾರಂಭವಾಗುವುದು- ಮುನಿದವರ ಅಸ್ತಿತ್ವ ಹಾಗೂ ಅವರ ಅಗತ್ಯವನ್ನು ನಿರಾಕರಿಸಲು ಪ್ರಾರಂಭಿಸಿದಾಗ. ಈ ಮುದುಕಿಯ ಕಥೆ ಉಳಿಸಿದ ಪ್ರಶ್ನೆಗಳಿಗೆ ಸಂಬಂಧಿಸಿದ್ದು.

ಕುಟುಂಬದಾಚೆಗಿನ ಕಾರ್ಯಕ್ಷೇತ್ರಗಳಲ್ಲೂ ನಾವು ಮುದುಕಿಯ ಸಂತಾನವೇ ಆಗಿದ್ದೇವೆ. ನನ್ನಿಂದಲೇ ಈ ಕಚೇರಿ- ಈ ಕಾರ್ಖಾನೆ ಎನ್ನುವ ಜಂಭ ಯಾರಿಗಿರುವುದಿಲ್ಲ. ನಮ್ಮ ಶ್ರಮದಿಂದಲೇ ಸಂಸ್ಥೆ ನಿಂತಿರುವುದು ನಿಜವಾದರೂ, ಸಂಸ್ಥೆಗೆ ನಾವು ಅನಿವಾರ್ಯವಲ್ಲ ಅನ್ನುವುದನ್ನು ಮರೆಯಬಾರದು. ನಾವಿಲ್ಲದಿದ್ದಲ್ಲಿ ನಮ್ಮ ಸ್ಥಾನಕ್ಕೆ ಬರುವವವರು ಕೂಡ ಸಂಸ್ಥೆಯ ಅಗತ್ಯಗಳನ್ನು ಪೂರೈಸುತ್ತಾರೆ. ಇದರ ಅರ್ಥ ಸರಳವಾದುದು: ಸಂಸ್ಥೆಗೆ ವ್ಯಕ್ತಿ ಮುಖ್ಯವಲ್ಲ- ವ್ಯಕ್ತಿ ಯಾರೇ ಆದರೂ ಸಂಸ್ಥೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳುತ್ತದೆ.

ಜಗಳ ಆಡುವುದು, ಜಂಭ ಪಡುವುದು ಮನುಷ್ಯ ಸಹಜ ಗುಣ. ಈ ಮನುಷ್ಯ ಸಹಜ ಗುಣದಿಂದಲೇ ಆ ಒಂದಾನೊಂದು ಕಾಲದ ಮುದುಕಿಗೂ ಕ್ಷಣಕಾಲ ತಲೆ ತಿರುಗಿತು. ಈ ತಲೆ ತಿರುಗಿದ ಸಂದರ್ಭದಲ್ಲಿ ಆಗುವ ಅನಾಹುತಗಳು ಒಂದೆರಡಲ್ಲ. “ಆಹಂಕಾರಕ್ಕೆ ಉದಾಸೀನವೇ ಮದ್ದು” ಎನ್ನುವ ನಾಣ್ಣುಡಿ ಪಾಲಿಸುವಲ್ಲಿ ಎಲ್ಲರೂ ನಿಸ್ಸೀಮರಾಗಿದ್ದಾರೆ. ಕಚೇರಿಯಾಗಲಿ ಮನೆಯಾಗಲಿ- ನಮಗೆ ತಲೆ ತಿರುಗಿದ ಸಂದರ್ಭದಲ್ಲಿ ಬಹುತೇಕರು ನಮ್ಮನ್ನು ನಿರ್ಲಕ್ಷಿಸತೊಡಗುತ್ತಾರೆ. ಕೆಲವರು ತುಳಿಯಲು ಪ್ರಯತ್ನಿಸುತ್ತಾರೆ. ಒಂದು ಹಂತದ ನಂತರ ಪ್ರೀತಿಪಾತ್ರರೇ ನಿರ್ಲಕ್ಷಿಸಲು ತೊಡಗುತ್ತಾರೆ.

ಇಲ್ಲೊಂದು ಅಪಾಯವಿದೆ. ಅಹಂಗೆ ದಿವ್ಯೌಷಧ ಉದಾಸಿನ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ನಿರ್ಲಕ್ಷ ಒಂದು ಹಂತದವರೆಗಷ್ಟೇ ಪರಿಣಾಮಕಾರಿ. ಮಿತಿ ಮೀರಿದರೆ ಮದ್ದು ವಿಷವಾಗುವಂತೆ ನಿರ್ಲಕ್ಷ, ನಿರಾಕರಣ- ತಿರಸ್ಕಾರ- ದ್ವೇಷವಾಗಿ ಬದಲಾಗುವ ಸಾಧ್ಯತೆಗಳು ಹೆಚ್ಚು. ಇದರಿಂದಾಗಿ ಅಹಂ ಸುಂಟರಗಾಳಿಗೆ ಸಿಕ್ಕ ವ್ಯಕ್ತಿ ಒಂಟಿಯಾಗುತ್ತಾನೆ. ತನ್ನ ತಪ್ಪಿನ ಸುಳಿಯಿಂದ ಹೊರಬರುವುದು ಸಾಧ್ಯವಾಗದೆ, ಆತ ಪ್ರೀತಿಪಾತ್ರರ ವಿಶ್ವಾಸ ಹಾಗೂ ಸಂಬಂಧವನ್ನು ಕಳೆದುಕೊಳ್ಳುವ ದುರಂತವೂ ಇದೆ. ಈ ನಷ್ಟ ಇಬ್ಬರದೂ ಆದರೂ, ಅಹಂ ಸುಳಿಗೆ ಸಿಕ್ಕ ವ್ಯಕ್ತಿ ನಿರಾಕರಣದ ನಿರಾಶೆಗೂ ಒಳಗಾಗುತ್ತಾನೆ.

ಆ ಕಾರಣದಿಂದಲೇ ಗರ್ವಭಂಗಕ್ಕೊಳಗಾದ ಮುದುಕಿಯ ಮುಂದಿನ ಪರಿಸ್ಥಿತಿ ಆತಂಕ ಹುಟ್ಟಿಸುತ್ತದೆ. ಮುಂದಿನ ದಿನಗಳಲ್ಲಿ ಕೂಡ ಮುದುಕಿಯ ಕೋಳಿ ಹಾಗೂ ಅಗ್ಗಿಷ್ಟಿಕೆಯ ಪ್ರಯೋಜನವನ್ನು ಊರು ಪಡೆದರೂ- ಆಕೆ ಊರವರ ವಿಶ್ವಾಸದಿಂದ ವಂಚಿತಳಾಗಿಯೇ ಉಳಿಯುತ್ತಾಳೇನೋ? ಅಲ್ಲದೆ, ಈ ಮುದುಕಿ ಕೊನೆಯವರೆಗೂ ಊರವರ ದೃಷ್ಟಿಯಲ್ಲಿ ಸೊಕ್ಕಿನ ಮುದುಕಿಯಾಗಿಯೇ ಉಳಿಯುತ್ತಾಳೆ. ಮುದುಕಿ ಏನೆಲ್ಲ ಬದಲಾದರೂ ಊರು ಆಕೆಯನ್ನು ಸಂದೇಹದಿಂದಲೇ ನೋಡುತ್ತದೆ. ಕಳಕೊಂಡ ಪ್ರೀತಿ, ಸ್ನೇಹ, ನಂಬುಗೆ, ವಿಶ್ವಾಸ ಮರಳಿ ಪಡೆಯಬಹುದು: ಆದರೆ ಅದರ ಸ್ವರೂಪ ಬದಲಾಗಿರುತ್ತದೆ.

ಅಂದರೆ, ನಾವು ಮಾಡಬೇಕಾದುದಾದರೂ ಏನು? ಜಂಭಪಟ್ಟವರಿಗೆ ತಗ್ಗಿ ಬಾಳಬೇಕಾ? ಅಹಂಕಾರಿಗಳಿಗೆ ಅಡಿಯಾಳಾಗಿರಬೇಕಾ?

ಅಹಂಕಾರವನ್ನು ಪ್ರೋತ್ಸಾಹಿಸುವುದು ಬೇಡ. ಆದರೆ ಅಹಂಕಾರಿಗಳ ಕುರಿತ ನಿರ್ಲಕ್ಷ್ಯದ ಕುರಿತು ನಮಗೆ ಎಚ್ಚರವಿರಬೇಕು. ತಪ್ಪನ್ನು ತೋರಿಸಿಕೊಡುವುದು, ತಿದ್ದುವುದು, ಸಹನೆ-ಸರಳತೆಯಿಂದ ಅವರ ಮನಸ್ಸನ್ನು ತಿಳಿಗೊಳಿಸುವ ಕರ್ತವ್ಯ ನಮ್ಮದಾಗಬೇಕು. ನಿರ್ಲಕ್ಷಿಸಿ ಸಂಬಂಧ ಕಳಕೊಳ್ಳುವ ಬದಲು ಗುದ್ದಾಡಿ ಸಂಬಂಧ ಉಳಿಸಿಕೊಳ್ಳುವುದು, ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದು. ಕಳೆದುಕೊಳ್ಳುವವರು ನಾವೂ ಆದುದರಿಂದ ಈ ಜವಾಬ್ದಾರಿಯನ್ನು ನಿಭಾಯಿಸದೆ ವಿಧಿಯಿಲ್ಲ. ಎಲ್ಲಕ್ಕೂ ಮುಖ್ಯವಾಗಿ- ಜಂಭ ಪಡುವುದರಿಂದ ಮುದುಕಿಗೆ ಖುಷಿಯಾಗುವುದಾದರೆ ಆ ಖುಷಿಗೆ ನಾವು ಅಡ್ಡಿಬರುವುದಾದರೂ ಏಕೆ?

ಜಂಭದ ಮುದುಕಿಯ ಕಥೆಯ ಮುಕ್ತಾಯ ಹೀಗೂ ಇರಬಹುದಿತ್ತಲ್ಲವೇ-

ಅಜ್ಜಿ ಕೇಳಿದಳು: ‘ಇವತ್ತು ನಾನು. ನನ್ನ ಕೋಳಿ ಮತ್ತೆ ಅಗ್ಗಿಷ್ಟಿಕೆ ಊರಲ್ಲಿ ಇರಲಿಲ್ಲವಲ್ವ ನೀವೆಲ್ಲ ಬೆಂಕಿಗೆ ಏನು ಮಾಡಿಕೊಂಡ್ರಿ? ನಿದ್ದೆಯಿಂದ ಹೇಗೆ ಎಚ್ಚರಾದ್ರಿ?’

ಯುವಕ ಬೇಜಾರಿಂದ ಕೇಳಿದ: ‘ನೀನು ಎಲ್ಲಿ ಹೋಗಿದ್ದೆ ಅಜ್ಜಿ ನಿನ್ನ ಕೋಳಿ ಕೂಗದೆ ಹೋದುದರಿಂದ ನಮಗೆ ಎಚ್ಚರಾಗೊ ಹೊತ್ತಿಗೆ ಸೂರ್ಯ ನೆತ್ತಿ ಮೇಲೆ ಬಂದಿದ್ದ ಬೆಂಕಿ ತರಲಿಕ್ಕೆ ನಾವೆಲ್ಲ ಪಕ್ಕದ ಊರಿಗೆ ಹೋಗಬೇಕಾಯ್ತು. ನಮಗೆಲ್ಲ ಎಷ್ಟು ಕಷ್ಟ ಆಯ್ತು ಗೊತ್ತಾ? ನೀನು ಹೀಗೆ ಮಾಡಿದ್ದು ಸರೀನಾ?’.

ಮುದೂಕಿಗೆ ಮಾತು ಹುಟ್ಟಲಿಲ್ಲ! ಆಕೆ ಮತ್ತೆಂದೂ ಊರು ಬಿಟ್ಟು ಹೋಗಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ನಿನ್ನ ಪಾದ ಧೂಳಿ
Next post ಏಕಚಿತ್ತ ರೂಪ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys