ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ
ಎಲ್ಲಿರುವೆ ಹೇಳು ನೀ ನಿಜವೆ ನೆರಳೇ?
ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ
ಎಸೆದ ಕೋಗಿಲೆಯ ದನಿಹರಳಿನಂತೆ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?
ಬೆಳಗ ತೆರೆಯುವ ಇರುಳ ಅಂಗಳದೊಳೋ
ತಂಪು ಹಾಸುವ ಬಿಳಿಯ ತಿಂಗಳಿನೊಳೋ
ಲೋಕಾಂತರದ ಮೂಲ ಸ್ಮರಣೆ ಮರೆಸಲು ಮಾಯೆ
ಹಾಡಿ ಕುಣಿಸುವ ಮೋಹರಿಂಗಣದೊಳೋ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?
ನಿನಗೆಂದೆ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ
ಓಡಿಬಂದೆನು ಇಗೋ ಪರಿವೆಯಿರದೆ
ಓಡಿ ಬರುವಂತೆ ನದಿ ಕಡಲ ಕರೆಗೆ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕವಿ ಹೇಳಿಕೊಂಡ ಕಥೆ - March 4, 2021
- ಇಬ್ಬಂದಿ - February 25, 2021
- ಸ್ವಧರ್ಮ - February 18, 2021