ಅಜ್ಜ ನೆಟ್ಟ ಬೇವಿನ ಮರ
ಥೇಟ್ ಅಮ್ಮ ಅಪ್ಪ
ರಂತೆ ಮೈ ತುಂಬಾ
ನವಿಲುಗರಿಯ ನವಿರು ಪ್ರೀತಿ
ಕಳೆದವಲ್ಲ ವರ್ಷ ಹಲವು
ಹರ್ಷ ಜಿಗಿತ ಹಾಗೆ ನಲಿವು
ಮಳೆಯ ಹನಿ ಇಳೆಗೆ
ಅಮ್ಮ ಕೊಟ್ಟ ಮುತ್ತು
ಜಾರುವುದು ಸೆರಗ ಅಂಚಿನಿಂದ
ಚಳಿಗಾಲದಿ ಚಳಿ ಸುಳಿಯದು
ಇರಲು ಅಪ್ಪನಂತೆ ಮರವು
ಹಸಿರು ಕಂಬಳಿಯ ಬಲವು
ಬಿಸಿಲು ಬಂದರೆ ರಣರಣ
ಊರತುಂಬಾ ಬೆಂಕಿ ಭಣಭಣ
ಉರಿವ ಸೂರ್ಯನಿಲ್ಲಿ ಚಂದಿರ
ಮರವು ಹೂವಿನ ಹಂದರ
ಕೊಂಬೆ ರೆಂಬೆಗಳ ತುಂಬಾ
ಕಾಗೆ ಗುಬ್ಬಿಗಳ ಗೂಡು
ವಂಸತಕ್ಕೊಮ್ಮೆ ಕೋಗಿಲೆಯ ಹಾಡು
ಮನೆ ಮಂದಿ ಹರಟಿದ್ದು
ಮಕ್ಕಳು ಮರಕೋತಿಯಾಡಿದ್ದು
ನಮ್ಮೊಂದಿಗೆ ಮರವೂ ನಕ್ಕದ್ದು
ಯಾವ ಬ್ಯಾಂಕಿನ ಲೆಕ್ಕದಲ್ಲಿ?
ಒಂದು ಸುಡು ಬಿಸಿಲ ಮಧ್ಯಾಹ್ನ
ಕೇಕೆ ಹಾಕಿತು ಕೊಡಲಿ
ರಕ್ಕೆ ಬಡಿಯಿತು ಹಕ್ಕಿ
ಮರವು ಚೀರಿತು ಉರುಳುತ…
ಈಗ
ಅಪ್ಪ ಒಂದು ನೆನಪು
ಅಮ್ಮ ಒಂದು ಬಿಕ್ಕಳಿಕೆ
ಅಂಗಳವೊಂದು ಸ್ಮಶಾನ!
*****