‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ
ಅಥವಾ ಲೈಽಟ್ ಆಗಿ ಓದಿಬಿಡಬೇಕಾ…
ಅಂತ
ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು
ಎದುರುಸಾಲಿನಲ್ಲಿ ಕುಳಿತ
ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ
ವಗೈರೆ ವಗೈರೆ ಕವಿಗಳಿಗೆ
ಚುಚ್ಚಿ ಚುಚ್ಚಿ ಎರಡೆರಡು ಸಲ ಕೇಳಿಯೇ ಬಿಟ್ಟ.

– ಬಂಡಾಯದವ ಬಂಡಾಯ ಎಬ್ಬಿಸು ಅಂದಿದ್ದ
– ನವ್ಯದವ ಸರಳ ಸೂಕ್ಷ್ಮವಾಗಿ ಹೇಳು ಅಂದಿದ್ದ
– ನವೋದಯದವ ಒಂದಿಷ್ಟು ಉಲ್ಟಾಪಲ್ಟಾ ಶಬ್ದಗಳನ್ನಿಡು ಅಂದಿದ್ದ
– ದಲಿತರವ ಹೇಳಿದ್ದ,
ಲೈಟ್ ಆಗಿಯೂ ಬೇಡ ಸಿರಿಯಸ್ಸಾಗಿಯೂ ಬೇಡ
ಒಬ್ಬೊಬ್ಬರನ್ನ ಅಟ್ಯಾಕ್ ಅಟ್ಯಾಕ್ ಮಾಡು ಅಂದಿದ್ದ
– ಸ್ತ್ರೀವಾದಿಯೊಬ್ಬಳು,
ಹೆಣ್ಣಿನ ಸೌಂದರ್ಯ ಅದೆಷ್ಟು ವರ್ಣಿಸಿದ್ದಿಯಪ್ಪಾ!
ಎಲ್ಲಾ ಸಮಸಮವಾಗಿಯೇ ಬರೆ, ಛೂ ಬಿಟ್ಟದ್ದಳು.

ಸುಂದರೇಶು ಸುಸ್ತಾಗಿದ್ದ
ಅವರವರ ಗುಣ ನಡತೆಗಳ
ಮುನ್ನುಡಿ ಹಿನ್ನುಡಿಗಳ ಸಲಹೆ ಓದಿ ಓದಿ.

ಆದರೂ ಕವಿಗೋಷ್ಠಿಯ ಅವಕಾಶ ಬಿಟ್ಟಾನೆಯೇ!
ಎಲ್ಲರ ಮನ ಗೆಲ್ಲಲೋ ಕೊಲ್ಲಲೋ
‘ಅವರವರ ಭಕುತಿಗೆ ಒಲೆಯುತಿಹನು
ಶಿವ’ ಎಂಬಂತೆ
ಅವರೆಲ್ಲ ಬಯಸಿದ ಮಾತು ಕತೆಗಳನು
ಝಾಲಾಡಿಸಿ ಬೇಸತ್ತು
ಕೊನೆಗೆ
ಎಲ್ಲರ ಸಲಹೆ ಸೂಚನೆ ಧಿಕ್ಕರಿಸಿ
ತಾನೂ ಒಬ್ಬ ವಿಶೇಷತೆ ಉಳಿಸಿಕೊಳ್ಳುವ
ಇಂಕದವನಾಗಿ (ಇಂ+ ಕ, ಇಂಗ್ಲಿಷ್‌+ಕನ್ನಡ)
ಇಂಕದ ಪದ್ಯ ಓದುತ್ತ
ಒಬೊಬ್ಬರನ್ನೇ ದುರುಗುಟ್ಟುತ್ತಿದ್ದ.
*****