ಬಂದಿರುವನೆ ಶ್ಯಾಮ ಸಖೀ
ಇಂದು ರಾಧೆ ಮನೆಗೆ
ಬಂದಿರುವನು ಚಂದ್ರಮನೇ
ಬಾನ ತೊರೆದು ಇಳೆಗೆ.

ಹುದುಗಿಸಿಹಳು ರಾಧೆ ನಾಚಿ
ಹರಿಯೆದೆಯಲಿ ಮುಖವ
ಮಲ್ಲಿಗೆ ಹೂದಂಡೆ ಮೂಸಿ
ಹರಿ ಮೆಲ್ಲಗೆ ನಗುವ!

ಸುರಿಯಲಿ ಮಳೆ ಎಷ್ಟಾದರು
ಬೀಳಲಿ ನಭ ನೆಲಕೆ
ತೋಳೊಳಗೆ ಇರುವ ಹರಿ
ಇನ್ನು ಯಾವ ಅರಕೆ?

ರಾಧೆಗೆಲ್ಲಿ ನಿದ್ದೆಯಿತ್ತು
ಹರಿ ಇರದಿರುವಾಗ?
ರಾಧೆಗಿನ್ನು ನಿದ್ದೆಯೆಲ್ಲಿ
ಹರಿ ಜೊತೆಗಿರುವಾಗ?
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)