ಭೂಮದ ಹಾಡು

ಹಂದವೂರದಾಗ ಛಂದಽ ಛಂದದೊಲಿ ಹೂಡಿ|
ಗಂದದ ಚಿಕ್ಕಿ ಪುಟೊ ಮಾಡಿ | ಸೋ ||
ನಂದೀ ಮನಾರಿ ಸೋ ||೧||

ಗಂಧುವದ ಚೆಕ್ಕಿ ಪುಡಿಮಾಡಿ ಮದುಮಗನ|
ಅಕ್ಕ ಮಾಡ್ಯಾಳೊಂದಡಽಗೀಯ | ಸೋ ||
ನಂದೀ ಮನಾರಿ ಸೋ ||೨||

ಹಂದವೂರದಾಗೆ ಛಂದಽ ಛಂದದೊಲಿ ಹೊಡಿ|
ಕಪ್ಪುರದ ಚೆಕ್ಕಿ ಪುಟಮಾಡಿ | ಸೋ ||
ನಂದೀ ಮನಾರಿ ಸೋ ||೩||

ಕಪ್ಪುವುರದ ಚೆಕ್ಕಿ ಪುಟಮಾಡಿ ಮದುಮಗನ|
ತಾಯಿ ಮಾಡ್ಯಾಳೊಂದಡಽಗೀಯ | ಸೋ ||
ನದೀ ಮನಾರಿ ಸೋ ||೪||

ಹಸನುಳ್ಳ ಕಣಕೀಗಿ ಬಿಸಿನೀರ ಛಳಿಕೊಟ್ಟು|
ಎಸಳ ಯಾಲಕ್ಕೀ ಪುಡೀ ಬೆಲ್ಲಽ | ಸೋ ||
ನಂದೀ ಮನಾರಿ ಸೋ ||೫||

ಎಸಳ ಯಾಲಕ್ಕಿ ಪುಡಿ ಬೆಲ್ಲ ಛೆಜ್ಜಕದ|
ಬಿಸಿ ಹೋಳ್ಗಿ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೬||

ಸಣ್ಣುಳ್ಳ ಕಣಕೀಗಿ ಧಣ್ಣೀರಾ ಛಳಿಕೊಟ್ಟು|
ಸಣ್ಣ ಯಾಲಕ್ಕೀ ಪುಡೀ ಬೆಲ್ಲಽ | ಸೋ ||
ನಂದೀ ಮನಾರಿ ಸೋ ||೭||

ಸಣ್ಣ ಯಾಲಕ್ಕಿ ಪುಡಿ ಬೆಲ್ಲಽ ಹುರಣದ
ಎಣ್ಹ್ಯೋಳ್ಗಿ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೮||

ಹೊತ್ತಽಕ ಕರಕಽಕ ಕೆಚ್ಚೆಗ್ಗಳಾದಾಽವ|
ಹತ್ತು ಮಾನಽದ ಪರಽಡೀಯ | ಸೋ ||
ನಂದೀ ಮನಾರಿ ಸೋ ||೯||

ಹತ್ತು ಮಾನಽದ ಪರಡೀಯ ಪಾಯಸಾ|
ಮತ್ತೊಬ್ಳ ಜಾಣಿ ಎಡೀ ಮಾಡಽ | ಸೋ ||
ನಂದೀ ಮನಾರಿ ಸೋ ||೧೦||

ಮತ್ತೊಬ್ಳ ಜಾಣಿ ಎಡಿ ಮಾಡಽ ತಂಗೆವ್ವಾ |
ಮುತ್ತಿನ ಕಂಕಽಣ ತಿರಽವೂತ | ಸೋ ||
ನಂದೀ ಮನಾರಿ ಸೋ ||೧೧||

ಆರಾಕ ತೂರಾಕ ನೀರೆಗ್ಗಳಾದಾವಽ|
ಆರ ಮಾನದಽ ಪರಡೀಯ | ಸೋ ||
ನಂದೀ ಮನಾರಿ ಸೋ ||೧೨||

ಆರ ಮಾನದಽ ಪರಡೀಯ ಪಾಯಸ|
ಮ್ಯಾಲೊಬ್ಳ ಜಾಣಿ ಎಡೀ ಮಾಡಽ | ಸೋ ||
ನಂದೀ ಮನಾರಿ ಸೋ ||೧೩||

ಮ್ಯಾಲೊಬ್ಳ ಜಾಣೀ ಎಡಿ ಮಾಡಽ ತಂಗೆವ್ವಾ|
ಹವಳದ ಕಂಕಣಾ ತಿರವೂತ ಸೋ||
ನಂದೀ ಮನಾರಿ ಸೋ ||೧೪||

ಮದುಮಗನ ಭೂಮಾಕಽ ಮತ್ತ್ಯಾನು ಬರಬೇಕ|
ಇಪ್ಪತ್ತೊಂದಡಕೀ ಬಿಳೀ ಎಲಿಯ | ಸೋ ||
ನಂದೀ ಮನಾರಿ ಸೋ ||೧೫||

ಇಪ್ಪಂತ್ಕೊಂಡಕೀ ಬಿಳಿಯೆಲಿ ಕುಬಸಿನ ಗಳಿಗಿ|
ಬಾಲನ ಭೂಮಾಕ ಬರಽಬೇಕಽ | ಸೋ ||
ನಂದೀ ಮನಾರಿ ಸೋ ||೧೬||

ಬನದಾಗ ಬಿತ್ತೂದು ಬನದಾಗ ಬೆಳೆಯೂದು|
ಬನದಾಗ ಚಾಲೀ ಎರಽಗೂದುಽ | ಸೋ ||
ನಂದೀ ಮನಾರಿ ಸೋ ||೧೭||

ಬನದಾಗ ಚಾಲಿ ಎರಗೂವ ಬಿದುರೀನ|
ಬುಟ್ಟಿ ಭೂಮಾಕಽ ಬರಽಬೇಕಽ | ಸೋ ||
ನಂದೀ ಮನಾರಿ ಸೋ ||೧೮||

ಹಾಳಾಗ ಬಿತ್ತೂದು ಹಾಳಾಗ ಬೆಳವೂದು|
ಹಾಳಾಗಿಂಬಾಗಿ ಇರಽವೂದ | ಸೋ ||
ನಂದೀ ಮನಾರಿ ಸೋ ||೧೯||

ಹಾಳಾಗಿಂಬಾಗಿ ಇರವೂದ ನಿಂಬೀಯ|
ಹೋಳ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೨೦||

ಮಡ್ಡ್ಯಾಗ ಬಿತ್ತೂದು ಮಡ್ಡ್ಯಾಗ ಬೆಳವೂದು|
ತಂದಽರ ಮನಿಗಿ ಬರಽವೂದ | ಸೋ ||
ನಂದೀ ಮನಾರಿ ಸೋ ||೨೧||

ತಂದೂವರ ಮನಿಗಿ ಬರುವ ಮುಕಣೀಯ|
ಹಪ್ಪಳ ಭೂಮಾಕ ಬರಽಬೇಕ | ಸೋ ||
ನಂದೀ ಮುನಾರಿ ಸೋ ||೨೨||

ಎರಿಯಾಗ ಬಿತ್ತೂದು ಎರಿಯಾಗ ಬೆಳವೂದು|
ತಂದರ ಮನಿಗೀ ಬರಽವೂದ | ಸೋ ||
ನಂದೀ ಮನಾರಿ ಸೋ ||೨೩||

ತಂದೂವರ ಮನಿಗಿ ಬರವೂವ ಕಡಲೀಯ|
ಶಂಡಿಗಿ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೨೪||

ಮೆಂತಿಖಡ್ಡೀ ಹುಕಿ ಅತ್ತೀ ತುಪ್ಪವ ಕಾಸ|
ಇಪ್ಪಪತ್ತೊಂದೋಣೀ ಎಸೆದಾಽವ | ಸೋ ||
ನಂದೀ ಮನಾರಿ ಸೋ ||೨೫||

ಇಪ್ಪಪತ್ತೊಂದೋಣಿ ಎಸೆದಾವಽ ಈ ತುಪ್ಪಾ|
ಬಾಲನ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೨೬||

ಶಾಂವೀಗಿ ಸೈದಾನ ಮಾವಿನುಪ್ಪಿನಕಾಯಿ|
ಮ್ಯಾಲ ಕುರಡೀಯಽ ಇಡವೂಽದ | ಸೋ ||
ನಂದೀ ಮನಾರಿ ಸೋ ||೨೭||

ಮದುಮಗನ ಭೂಮಾಕ ಮತ್ತ್ಯಾರು ಬರಬೇಕ|
ಅಪ್ಪಾದಾಗಪ್ಪಾ ಹಿರಿಯಪ್ಪಾ | ಸೋ ||
ನಂದೀ ಮನಾರಿ ಸೋ ||೨೮||

ಅಪ್ಪಾದಾಗಪ್ಪಾ ಹಿರಿಯಪ್ಪಾ ತಾ ಬಂದು|
ಮುಚ್ಚಿಟ್ಟ ಭೂಮಾ ತೆರಽಸ್ಯಾನ | ಸೋ ||
ನಂದೀ ಮನಾರಿ ಸೋ ||೨೯||

ಮದುಮಗನ ಭೂಮಾಕ ಮತ್ತ್ಯಾರು ಬರಬೇಕ।
ಅಣ್ಣಾದಾಗಣ್ಣಾ ಹಿರೀಯಣ್ಣಾ | ಸೋ ||
ನಂದೀ ಮನಾರಿ ಸೋ ||೩೦||

ಆಣ್ಣಾದಾಗಣ್ಣಾ ಹಿರಿಯಣ್ಣ ತಾ ಬಂದು|
ಹೊನ್ನಿಟ್ಟ ಭೂಮಾ ತೆರಽಸ್ಯಾನ | ಸೋ ||
ನಂದೀ ಮನಾರಿ ಸೋ ||೩೧||

ಮದುಮಗನ ಭೂಮಾಕ ಮತ್ತ್ಯಾರು ಬರಬೇಕ।
ಆವ್ವಾದಾಗವ್ವ ಹಿರೀಯವ್ವಾ | ಸೋ ||
ನಂದೀ ಮನಾರಿ ಸೋ ||೩೨||

ಅವ್ವಾದಾಗ ಅವ್ವಾ ಹಿರಿಯವ್ವಾ ತಾ ಬಂದು|
ಉಂಗ್ರಿಟ್ಟು ಭೂಮಾ ತೆರಸ್ಯಾಳ | ಸೋ ||
ನಂದೀ ಮನಾರಿ ಸೋ ||೩೩||

ಯಾವಣ್ಣ ಸೋತಾನ ಯಾವಣ್ಣ ಗೆದ್ದಾನ|
ಯಾವಣ್ಣ ನೀರಾ ಮುಗಽದಾನ | ಸೋ ||
ನಂದೀ ಮನಾರಿ ಸೋ ||೩೪||

ಭೀಮಣ್ಣ ಸೋತಾನ ಕಾಮಣ್ಣ ಗೆದ್ದಾನ|
ನಮ್ಮಣ್ಣ ನೀರ ಮುಗಽದಾನ | ಸೋ ||
ನಂದೀ ಮನಾರಿ ಸೋ ||೩೫||
*****

“ಭೂಮ”ವೆಂಬ ಶಬ್ದಕ್ಕೆ ಸಂಸ್ಕೃತದಲ್ಲಿ “ಸರ್ವವನ್ನೊಳಗೊಂಡದ್ದು” ಎಂಬರ್ಥವಿದೆ. “ಭೂಮ” ಎಂದರೆ ಖಂಡರಹಿತವಾದದ್ದು. “ಖಂಡದಲ್ಲಿ ಸುಖವಿಲ್ಲ, ಆಖಂಡದಲ್ಲಿ ಸುಖವಿದೆ”ಎಂಬರ್ಥದ ಉಪನಿಷದ್ವಾಕ್ಯವೊಂದು ಸರ್ವಶ್ರುತವೇ ಇದೆ. “ಬಿಡಿಯಲ್ಲಿ ಸುಖವಿಲ್ಲ, ಇಡಿಯಲ್ಲಿ ಸುಖವಿದೆ” ಎಂದು ಅದರ ಅರ್ಥ.

ಅಕ್ಷತೆ ಬಿದ್ದಮೇಲೆ, ಮತ್ತು ಮೆರವಣಿಗೆ ಮುಗಿದ ಮೇಲೆ, ಹೀಗೆ ಎರಡು ಸಾರಿ ಈ “ಭೂಮದ” ವಿಧಾನವು ಜರುಗಿಸಲ್ಪಡುತ್ತದೆ. “ಭೂಮ”ವೆಂದರೆ ಒಂದು ರೀತಿಯಿಂದ ಲಗ್ನಶಾಂತಿಯ ಮಹಾನೈವೇದ್ಯ (ಬಡಿವಾಣ)ವೆಂದು ಹೇಳಬಹುದು. ಸರ್ವವಿಧದ ಪಕ್ವಾನ್ನಗಳನ್ನು ಮದುಮಕ್ಕಳ ಮುಂದೆ ಹೊಸದುರುಡಿ(ಬಿದುರಿನ ಬುಟ್ಟಿ)ಯ ಕೆಳಗೆ ಮುಚ್ಚಿ ಇಟ್ಟು ಮುತ್ತೈದೆಯರು ಮತ್ತು ವಿವಾಹಿತ ಪುರುಷರು ಅದನ್ನು ತೆರೆದು ಉಣ್ಣುವರು. ಮೊದಲನೆಯ ಭೂಮ ಹೆಣ್ಣುಮಕ್ಕಳದು. ಎರಡನೆಯದು ಗಂಡಸರದು.

ಇದರಲ್ಲಿ ಸರ್ವಭೋಜನಪದಾರ್ಥಗಳ ಸಮಾವೇಶವಿರುವುದರ ಅರ್ಥವು ದಂಪತಿಗಳ ಸಾಂಸಾರಿಕ ಜೀವನದಲ್ಲಿ ಬರತಕ್ಕ ಸರ್ವವಿಧದ ಸಂಗತಿಗಳನ್ನು ಸೂಚಿಸುವುದು. ಜೀವನದ ಸರ್ವಾಂಗೀನ ಸ್ವರೂಪವನ್ನು ಮಹಾನೈವೇದ್ಯದಂತೆ (ಈಶಪ್ರಸಾದವೆಂದು) ಸ್ವೀಕರಿಸುವುದಕ್ಕೆ ದಂಪತಿಗಳು ದೀಕ್ಷೆ ಹೊಂದಿದಂತೆಯೇ ಸರಿ.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಹಂದವೂರದಾಗ=ಹಂದರದಲ್ಲಿ. ಪುಟು ಮಾಡು=ಹೊತ್ತಿಸು. ಮಾನಾರಿ=ಮಹಾನಾರಿ, ಮಾನಾರಿಗೆ ನಂದಿಯ ಸಂಬಂಧವೇನೋ ನಮಗೆ ತಿಳಿಯದು. ಛಳಿಕೊಟ್ಟು=ಸಿಂಪಡಿಸಿ. ಛೆಜ್ಜಕ=ಸಜ್ಜಿಗೆ. ಮಾನ=ಒಂದು ಅಳತೆ. ಚಾಲಿ=ಮೆಳೆ? ಹಾಳಾಗ=ಹಾಳುನೆಲದಲ್ಲಿ, ಮಡ್ಡಿ=ಮೊರಡಿ ಭೂಮಿ. ಎರಿ=ಕರಿನೆಲ. ಎಸೆ=ವಾಸನೆ ಹಬ್ಬು. ಶಾಂವಿಗಿ ಕುರುಡಿ=ಊಟದ ಪದಾರ್ಥಗಳು. ಕೊನೆಯ ನುಡಿಗಳಲ್ಲಿ ಬರುವ ಸೋಲು ಗೆಲವುಗಳು ಊಟಕ್ಕೆ ಸಂಬಂಧಿಸಿವೆ. ನೀರಮುಗಿ=ಕೈ ತೊಳೆದುಕೋ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!
Next post ಮಹಾತ್ಮರು

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys