ಮೃದು ಪವನ ಪರಿಮಳದ ಅರಿಕೆಗೆಚ್ಚರಗೊಳಲಿ
ಸುಮವೀಣೆ! ಆ ವೀಣೆಯಿಂಚರದ ಕನಸಿನಲಿ
ತೆರೆತೆರೆ ತೆರೆಯಲೊಂದು ರೂಪಕ ಸರೋವರಂ!
ಅಲ್ಲುಲಿವ ರಾಜಹಂಸಗಳ ಪಲ್ಲವಿ ‘ಪಂಪಂ’!

ಪಂಪ, ನಿನ್ನಿಂಪಿನಚ್ಚರಿಯ ನುಡಿವೆಳಗಿನಿಂ-
ದರಳ್ವ ಮಲ್ಲಿಗೆ ಮಾವು ಕರ್ಬು ಗಿಳಿ ತುಂಬಿಗಳ
ಜಲ್ಲೆನುವ ಜಲವ ಕಾಡಿನ ಸೊರ್ಕಿದಾನೆಗಳ
ಬನವಾಸಿಬಳಗದೊಲ್ಮೆಯ ನಿನ್ನ ಸ್ಮಾರಕಂ!

ಕಾದದೆ ಇಳೆಯ ಕುಡದ ಕೌರವೇಂದ್ರನ ಚಲಂ,
ಚಲಂ ಕುಲಂ ಎಂಬ ವೀರಕರ್ಣಾಮೃತಂ,
ಚಕ್ರಮಂ ಪಿಡಿಯೆನೆಂಬಾ ಚಕ್ರಿ ಚಕ್ರಮಂ
ತುಡುಕುನಂತಾಗಿಸಿದ ಗಾಂಗೇಯಪೌರುಷಂ,-

ಲೋಕೋತ್ತರಂ ನಿನ್ನ ಲೌಕಿಕಂ. ಅಮೇಯಂ
ಚಿರಂ ಸ್ಥಿರಂ ನಿನ್ನ ವಿಕ್ರಮಂ, ವಿಜಯಂ!
*****

Latest posts by ನರಸಿಂಹಸ್ವಾಮಿ ಕೆ ಎಸ್ (see all)