ಉಸಿರಿನ ಹಡಗು

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರೆದಿವೆ ನಿಲ್ಲದ ದಾರಿ.-
ಎಲ್ಲಿಂದೆಲ್ಲಿಗೆ ಇದರ ಸವಾರಿ!

ಕಾಮನ ಕೋರುವ ಕಣ್ಣು ಇದಕ್ಕೆ,
ಬಯಕೆಯ ಬೀರುವ ಬಾವುಟ-ರೆಕ್ಕೆ,
ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ,
ಹಾಹಾಕಾರದ ಹೆಬ್ದುಲಿ-ರಟ್ಟೆ.

ಮುಡಿಯಲಿ ಗರ್ವದ ಹೊಗೆಯ ಕಿರೀಟ,
ಮುಖದಲಿ ತಂಗಿದೆ ಮಕ್ಕಳ ನೋಟ,
ಸುತ್ತಾ ಉತ್ತೆಸೆದಲೆಗಳ ಕಾಟ;
ಮರುಭೂಮಿಯಲಿದು ತೆಂಗಿನ ತೋಟ.

ಮಗುವಿದೆ ತಳ್ಳಿದ ಕಾಲಿಗೆ ಬಿದ್ದು;
ತಂದೆಯ ಉತ್ತರ: ಮತ್ತೂ ಗುದ್ದು.
ಈ ಗತಿಯೇ ಹೆತ್ತವಳೇ ಇದ್ದೂ?-
ಕರುಣೆಯ ಕರುಳಲಿ ಹುಟ್ಟಿದ ಸದ್ದು.

ಇನಿಯನ ಎದೆಯಲಿ ಕೆನ್ನೆಯನಿಟ್ಟು
ಕಣ್ತೆರೆವಿನಿಯಳ ಚೆಲುವನು ತೊಟ್ಟು
ತುಂಬುತ್ತಲೆಯಿರೆ ಹಡಗಿನ ರೂಪ,
ಕಡಲಿನ ಕಣ್ಣಿಗೆ ಏಕೋ ಕೋಪ!

ಉಸಿರಿನ ಹಡಗಿದು, ಏನಿದರರಕೆ?
ಉಸುರುವಂತಿಲ್ಲ.-(ಉಳಿಯುವ ಬಯಕೆ?)
ಬರಿ ಕನಸಿದು,-ನಗೆ ನೋವಿನ ಬೆರಕೆ;-
ಅದೊ! ನೀರಿನ ಬಿರುಗಾಳಿಯ ಗೊರಕೆ.

ಹಡಗಿನ ಪಾಡಿಗೆ ಕಡಲೇ ನಕ್ಕು
ನೀರಿನ ಕೆನ್ನೆಗೆ ಬಂದಿದೆ ಸುಕ್ಕು.
ತೇಲುವ ಬಾಳಿಗೆ ಯಾರೋ ದಿಕ್ಕು?
ಬೇಕು ಅದೃಷ್ಟವೆ ತೇಲುವುದಕ್ಕೂ!

ತೇಲುವುದೆಲ್ಲಾ ತೇಲುತ್ತಿರಲಿ!
ಮುಳುಗುವುದೋ? ಸರಿ, ಮುಳುಗುತ್ತಿರಲಿ!
ರವಿಯೂ ಮುಳುಗಲಿ! ಶಶಿಯೂ ಮುಳುಗಲಿ!
ಗ್ರಹತಾರೆಗಳೂ ಸುಮ್ಮನೆ ಮುಳುಗಲಿ!-

ದಿಗ್ದಿಕ್ತಟಗಳ ಒಳಗೂ ಹೊರಗೂ
ನೀಲ ನೀಳ ನಾಲಗೆಗಳನೆಸೆದು,
ಜೀವದಾಸೆಗಳನೆಲ್ಲಾ ತೊಡೆದು,
ಎಲ್ಲಾ ಮುಗಿದರೆ, ತಾನೇ ಉಳಿದು,

ತುಂಬಿ ತುಳುಕುತಿದೆ ಕಾಲ ಸಮುದ್ರ;
ಬದುಕಬಲ್ಲವನು ಒಬ್ಬನೆ, ರುದ್ರ.
ತೇಲಬಹುದು ಈ ತುಂಬಿದ ಹಡಗು.
ನಾಳೆ ಇವರ ಮನೆ ಆಳದ ಕೊರಗು.-

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರದಿದೆ ನಿಲ್ಲದ ದಾರಿ.
ಎಲ್ಲಿಂದೆಲ್ಲಿಗೆ ಇದರ ಸವಾರಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪೋಭೂಮಿ – ಭಾರತ ವರ್ಷ
Next post ಕೈ ಕೈ ಎಲ್ಹೋಯ್ತು?

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…