ಬಾರೋ ಗುಂಡ ಕೂಳಿಗೆ ದಂಡ
ಅನ್ನಿಸಿಕೊಂಡವನೇ
ಅಂಡಾಬಂಡ ಆಟ ಆಡಿ
ಎಲ್ಲರ ಗೆಲ್ಲೋನೇ.

ಕೋತಿ ಹಾಗೆ ಹಲ್ ಹಲ್ ಕಿರಿದು
ಪರಚಕ್ ಬರೋವ್ನೇ
ಬೊಗಸೆ ತುಂಬ ಮಣ್ ತುಂಬ್ಕೊಂಡು
ಎರಚಿ ಓಡೋವ್ನೇ.

ರಸ್ತೇಲ್ಹೋಗೋ ಎಮ್ಮೇ ಮೇಲೆ
ಸವಾರಿ ಮಾಡೋವ್ನೇ
ಕತ್ತೇ ಬಾಲ ಎಳೆಯೋಕ್ ಹೋಗಿ
ಒದೆತ ತಿನ್ನೋವ್ನೇ.

ಸ್ಕೂಲಿಗೆ ಅಂತ ಸುಳ್ಳೇ ಬಂದು
ಚಕ್ಕರ್‍ ಹಾಕೋವ್ನೇ
ಮರಗಳ ಹತ್ತಿ ಬೀದೀ ಸುತ್ತಿ
ಮನೇಗೆ ಹೋಗೋವ್ನೇ.

ಪರೀಕ್ಷೆ ದಿವಸ ಸಪ್ಪೇ ಮೋರೆ
ಹಾಕ್ಕೊಂಡ್ ಬರೋವ್ನೇ
ಅರ್ಧಗಂಟೆ ಹೊಡೀತೋ ಇಲ್ವೊ
ಹೊರಕ್ಕೆ ಜಿಗಿಯೋವ್ನೇ.

ರಿಸಲ್ಟ್ ದಿವಸ ಎಲ್ಲರಿಗೂನೂ
ಕಂಗ್ರಾಟ್ಸ್ ಹೇಳೋವ್ನೇ
ನಿನ್ ಮಾರ್ಕ್ಸ ಎಷ್ಟೋ ಗುಂಡ ಅಂದ್ರೆ
ಅಂಡ ಅನ್ನೋವ್ನೇ!

ಯಾಕೋ ಗುಂಡ ಪುಂಡ ಭಂಡ
ಅನ್ನಿಸ್ಕೋತೀಯಾ?
ಓದಿ ಬರ್‍ದು ಮಾಡ್ದೆ ಸುಮ್ನೆ
ಗೂಂಡಾ ಆಗ್ತೀಯಾ?
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)