ಆಗಲೇ ಇಟ್ಟ ನೂರಾರು
ಹೆಜ್ಜೆಗಳ ಮೇಲೆ
ನಾವೂ ಹೆಜ್ಜೆ ಇಟ್ಟು
ಸಂತೆಯೊಳಗಿಳಿದಿದ್ದೇವೆ
ಗೊಡ್ಡು ಸಂಪ್ರದಾಯಗಳ ಗಂಟು
ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು
ಅಜ್ಜನ ಕಂಬಳಿ ಎಳೆದು ತುಳಿದು
ಸಂತೆಯೊಳಗಿಳಿದಿದ್ದೇವೆ.
ಹೆಜ್ಜೆಯ ಮೇಲೆ ಹೆಜ್ಜೆ
ಇಡುತ್ತಲೇ ಬಂದಿರುವ ನೀವು
ಕ್ಷುಲ್ಲಕ ವಿಚಾರಗಳ
ಪ್ರಕ್ಷುಬ್ದ ವಾತಾವರಣದ
ಸಂತೆಯಲ್ಲಿ ಬೇಕು ಬೇಡದಕ್ಕೆಲ್ಲ
ಕಣ್ಣು ಹಾಯಿಸುತ್ತ ಸತ್ವವನ್ನೇ
ಮರೆತ ತೊಂಡರಗೊಳಿಗಳಾಗಿ ತಿರುಗಿ
ಬೇಕೆಂದಿದ್ದೆಲ್ಲಾ ಬಯಸಿದಾಗ,
ಸಂತೆಯಲ್ಲಿಟ್ಟು ವಸ್ತುವೇ ನಿನಗೆ
ಹಣ ಕೊಟ್ಟು ನಿನ್ನಲ್ಲಿ ಬಿಕರಿಯಾಗುತ್ತದೆ
ಹಣವೂ ಕೊಟ್ಟು ತನ್ನನ್ನೂ ಕೊಟ್ಟಿರುವ
ಜೀವಂತ ಸಂತೆಯು
ನೀವು ಅಟ್ಟಹಾಸಗೈದು
ಮನೆಗೊಯ್ದಾಗ….
ಸಂತೆಯ ಈ ಬೊಂಬೆ
ಗಿಳಿಯಾಗಿ, ಆಡಿಸಿದಂತೆ ಆಡುವ
ದೊಂಬರಾಟದ ಹುಡುಗಿಯಾಗಿ
ಮುದುಡಿಕೊಳ್ಳುವಾಗ,
ನಿಮ್ಮ ರಾತ್ರಿಗಳ ವಿಕೃತ
ಕಾಮನೆಗಳು ತಲೆ ಬುಡವಿಲ್ಲದೇ
ಬಿಚ್ಚಿಕೊಳ್ಳುತ್ತವೆ.
ಬಿಕರಿಯಾದವರ ರಾತ್ರಿಗಳು ತಮ್ಮ
ಆಶಾವಾದಿ, ಕ್ರಾಂತಿವಾದಿ ಆದರ್ಶಗಳನ್ನೆಲ್ಲ
ಮೂಟೆಕಟ್ಟಿ ಜಲಪಾತಕ್ಕೆ
ತಳ್ಳುತ್ತಲೇ ಇದ್ದಾರೆ.
ಆಕಾಶದೆತ್ತರಕ್ಕೇರಿ…. ಸಮುದ್ರದಾಳಕ್ಕಿಳಿದು
ಜಗದಗಲ ಪರಿಚಯಿಸಿಕೊಂಡ ನಾವು
ನಮ್ಮ ಸಮಾನತೆಗೆ
ನಮ್ಮ ಭಾವನೆಗಳಿಗೆ ಸ್ಪಂದಿಸುವ
ನಮ್ಮೆತ್ತರಕ್ಕೇರುವ ನಿಮ್ಮನ್ನು
ಆರಿಸಿಕೊಳ್ಳಲು ಇಂದು
ಪೇಟೆಗೆ ಬಂದಿದ್ದೇವೆ.
ನಿಮ್ಮ ಮೊದಲ ಹೆಜ್ಜೆಗಳೆಲ್ಲ
ಸವೆದು ಹೋಗುವಂತೆ ಮಾಡಿ
ಅವುಗಳ ಮೇಲೀಗ ಕಾಂಕ್ರೀಟು ಹಾಕಿ
ಮೊನಚು ಚಪ್ಪಲಿಗಳು ಹಾಕಿಕೊಂಡು
ಸಂತೆಯೊಳಗಿಳಿದಿದ್ದೇವೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)