ಕಂಬಳಿಹುಳಕ್ಕೆ ಯಾವಾಗಲೂ ಛಳಿಯಾದ್ದರಿಂದ ಅದು
ಯಾವಾಗಲೂ ಕಂಬಳಿ ಹೊದ್ದುಕೊಂಡೇ ಇರುವುದು.
ಕಪ್ಪು ಟೋಪಿಯ ಕೆಳಗೆ ಕಪ್ಪು-ಬೂದು-ಹೊಂಬಣ್ಣದ
ಗೆರೆಗೆರೆಯ ಕಂಬಳಿ ಛಳಿಗಾಲದ ಮುಂಜಾನೆಗಳಲ್ಲಂತೂ
ಇಬ್ಬನಿಯನ್ನು ದಾಟಿ ಬರುವ ಬಿಸಿಲಿಗೆ
ಅಲ್ಲಲ್ಲಿ ಹೊಳೆಯುವುದು.  ಕಾಣುವುದಕ್ಕೆ ಮಾತ್ರ.
ಮುಟ್ಟಿದರೆ ತುರಿಸುವುದು.  ಇಂಥ
ಕಂಬಳಿಗಳೆ ಹಾಗೆ.  ಇದನ್ನು ದಿನಾ
ಹೊದ್ದುಕೊಂಡೇ ಇರುವ ಕಂಬಳಿಹುಳಕ್ಕೆ
ಎಷ್ಟು ತುರಿಕೆಯೋ ಪಾಪ!
ಯಾರನ್ನು ದೂರಬೇಕು ಅದು, ಸಿಟ್ಟಿನಿಂದ
ಯಾರನ್ನು ಚಚ್ಚಬೇಕು?
*****

Latest posts by ತಿರುಮಲೇಶ್ ಕೆ ವಿ (see all)