ಟ್ಯಾಂಕ್‌ಬಂಡಿನ ಕಳ್ಳರನ್ನು ಸೃಷ್ಟಿಸಿ ಕದಿಯಲು ಬಿಟ್ಟೆ ನಾನು,
ಅವರಿಗೆ ಪರ್ಸ್ ಉಡಾಯಿಸುವ ಕೈಚಳಕವನ್ನು ಕಲಿಸಿದೆ.
ತುಂಬಾ ಬುದ್ದಿವಂತರು. ಹೇಗಾದರೂ ತಪ್ಪಿಸಿಕೊಳ್ಳುತ್ತಿದ್ದರು.
ಅವರಲ್ಲಿ ಒಬ್ಬನಿಗೆ ಆಮೆಗಳೆಂದರೆ ಪ್ರೀತಿ. ಇನ್ನೊಬ್ಬ
ಬಹಳ ಹಿಂದೆ ಒಂದು ಹುಡುಗಿಯನ್ನು ಪ್ರೇಮಿಸಿದ್ದ.
ಇಬ್ಬರೂ ಕಂಠಪೂರ್ತಿ ಕುಡುಕರು. (ಎಷ್ಟಾದರೂ ಕಳ್ಳರು)
ಕದ್ದಾಗ ಸಿಕ್ಕಿದ ಒಂದು ಪ್ರೇಮ ಪತ್ರವನ್ನು ಓದಿ
ಇಬ್ಬರೂ ಒಮ್ಮೆ ಗದ್ಗದರಾದ್ದುಂಟು. ಅಷ್ಟರಲ್ಲಿ
ಎತ್ತಿ ಹೊರಕ್ಕೆ ಹಾಕಿಸಿದೆ ನಾನು. ಹೊರಗೆ
ಕಾರ್ಪರೇಶನ್ ಡಬ್ಬದ ಬಳಿ ಹೋಗಿ ಮುಗ್ಗರಿಸಿ
ಬಿದ್ದಿರಬೇಕು ಅವರು. ಆದರೆ ಈ ಮನುಷ್ಯರಿಗೆ
ಹೆಸರು ಕೊಡುವುದಕ್ಕೆ ಮರೆತಿದ್ದೆ. ನೀವು
ನಿಮ್ಮ ನಿಮ್ಮ ಹೆಸರುಗಳನ್ನು ಜೋಪಾನವಾಗಿಡಿ!
*****