ಎದೆಯೊಳು ಮೊರೆದಿದೆ ಒಂದೇ ಸಮನೆ
ಅತಲ ಜಲದ ಗಾನ
ಮನವಿದು ಯಾಕೋ ನಿಲ್ಲದು ಮನೆಯಲಿ
ತುಯ್ಯುತಲಿದೆ ಪ್ರಾಣ

ತೂರಿಬಿಡಲೆ ಈ ಬಾಳನ್ನೇ
ದುಡುಕುವ ನೆರೆಯಲ್ಲಿ
ಬಾಳಿನ ಹಾಹಾಕಾರವನು
ನುಂಗುವ ಮೋದದಲಿ?

ನದಿಯೊಳು ಅಲೆ ಸಾಲೇಳಂತಿದೆ,
ನನ್ನೀ ಎದೆಯೊಳಗೂ;
ಏನೋ ವ್ಯಾಕುಲ ಮುಗಿಲಲ್ಲಿ,
ಕೂಗುವ ಗಾಳಿಯೊಳೂ

ಪ್ರಮದೆ ಅಪ್ಸರೆಯ ಸ್ಪರ್ಶಕ್ಕೆ
ಮನ ಝಲ್ಲೆನುವಂತೆ
ದೂರದಿ ಯಾರದೊ ಗೆಜ್ಜೆ ದನಿ
ಸಂಭ್ರಮಿಸುತ ನಿಂತೆ.

***

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)