Home / ಲೇಖನ / ಇತರೆ / ತಂಗಾಳಿ

ತಂಗಾಳಿ

ಹಳೆಯ ನಾಣ್ಣುಡಿಗಳೆಷ್ಟೋ ಈಗಿನ ಕಾಲದಲ್ಲಿ ಅನಾವಶ್ಯಕವಾಗಿವೆ.  ಈಗಿನ ಕಾಲಕ್ಕನುಸಾರವಾಗಿ ಅವುಗಳ ತಿದ್ದುಪಡೆಯ ಅವಶ್ಯವಿದೆ. ಉದಾ ಹರಣಾರ್ಥ, ಹಳ್ಳಿಗಳಲ್ಲಿಯ ವಯೋವೃದ್ದರು ಈಗಲೂ “ದೀಪದ ಕೆಳಗೆ ಬೆಳಕು ಇರುವದಿಲ್ಲ” ಎಂದು ಅನ್ನುತ್ತಾರೆ. ಆದರೆ ಈಗ ಇಲೆಕ್ಟ್ರಿಕ್ ದೀವಿಗೆ ಗಳ ಬೆಳಕು ದೀವಿಗೆಗಳ ಕೆಳಗೇ ಹೆಚ್ಚಾಗಿರುತ್ತದೆ!
***
ಕಾಲ ಬಂದಂತೆ ನಾವು ನಡೆಯಲೇಬೇಕು. “ಕಾಲ ಬಂದಂತೆ ನಡೆಯದಿದ್ದರೆ ಕಾಲು ಕೊಟ್ಟ ದೇವರು ಸಿಟ್ಟಾಗುವನು ” ಎಂದು ಶ್ರೀರಂಗರು ತಮ್ಮದೊಂದು ನಾಟಕದಲ್ಲಿ ಬರೆದಿದ್ದಾರೆ !
  * * *
“ಮಾತಿಗೆ ಮೊದಲು ಗಾದಿ, ಊಟಕ್ಕೆ ಮೊದಲು ಉಪ್ಪಿನಕಾಯಿ” ಎಂಬುದು ಬೇರೊಂದು ಹಳೆಯ ಗಾದಿಯ ಮಾತು. ಈಗಿನ ಕಾಲದಲ್ಲಿ ಇದರ ತಿದ್ದುಪಡೆಯ ಆವಶ್ಯಕತೆಯು ಹೆಚ್ಚಾಗಿ ಕಾಣುತ್ತದೆ.
“ಮಾತಿಗೆ ಮೊದಲು ಖುರ್ಚಿ, ವರ್ತಮಾನ ಪತ್ರದಲ್ಲಿ ಮೊದಲು ವಿನೋದ” ಎಂಬದು ಈಗಿನ ಕಾಲಕ್ಕೆ ಹೆಚ್ಚು ಉಚಿತವಾಗಿದೆ. ಇಲ್ಲವಾದರೆ,  ಇಂಗ್ರೇಜಿ ವರ್ತಮಾನಪತ್ರಗಳಲ್ಲಿ Current Topics, Tete-a-tete, Tipsy cake, En Passant, By the way ಮೊದಲಾದ ‘ಕಾಲಮು’  ಗಳೇಕೆ ತಲೆದೋರುತ್ತಿದ್ದವು? ಕನ್ನಡ ಪತ್ರಗಳಲ್ಲಿ “ಖಂಡತುಂಡ ಮಾತು”,  “ತುಣುಕು ಮಿಣಕು”, “ಹುರಕು ಬರಕು?”, “ಮಸಾಲೆಯ ದೋಸೆ”  ಮುಂತಾದ `ಕಾಲಮು’ಗಳೇಕೆ ಇರುತ್ತಿದ್ದವು?
* * *
ಆದ್ದರಿಂದ “ತಂಗಾಳಿ” ವಿನೋದದ ‘ಕಾಲಮು’ ಇರಬೇಕೆಂದು  ಯೋಜಿಸಿ ಪ್ರಾರಂಭಿಸಿದ್ದೇವೆ. ಆದರೆ ಪ್ರಾರಂಭಿಸುವ ಮೊದಲು ಅನೇಕ  ಸಾರೆ ವಿಚಾರ ಮಾಡಬೇಕಾಯಿತು. ಪ್ರತಿವಾರ ತಪ್ಪದೆ ಒಂದು ವಿನೋದ  ತರಂಗದ ‘ಕಾಲಮ್’ನ್ನು ವಾಚಕವೃಂದಕ್ಕೆ ಪೂರೈಸುವುದು ಸಾಮಾನ್ಯ  ಮಾತಲ್ಲ. ಓದಿ ನಗುವದು ಸುಲಭ ! ಬರೆದು ನಗೆಸುವದು ಕಠಿಣ !!   ವಾಚಕರು ರಸಿಕರೆಂಬ ಭಾವನೆಯಿಂದಲೇ ನಾವು ಮುಂದೆ ಸಾಗುತ್ತೇವೆ. ಅಂದರೇನೆ ಈ ‘ಕಾಲಮಿ’ನಿಂದ ವಿಶೇಷ ವಿನೋದವು ದೊರೆಯುವದು, ಅನೇಕ ಸಾರೆ ಅನೇಕ ವಿಷಯಗಳ ಮೇಲೆ ಬರೆಯಬೇಕಾಗುತ್ತದೆ.  ಲೇಖಕರ ಉದ್ದೇಶವಿರದಿದ್ದರೂ, ಎಷ್ಟೋ ಸಾರೆ ಹಲಕೆಲವು ವಿಷಯಗಳು  ಹಲಕೆಲವರಿಗೆ ಅಸಮಾಧಾನವನ್ನು ಉಂಟುಮಾಡುವ ಸಂಭವವಿದೆ. ಆದರೆ  ಓದುಗರು ಸೇತುವಿನ ಕಡೆಗೆ ಲಕ್ಷ ಕೊಡಬೇಕೇ ಹೊರತು, ಅಕಸ್ಮಾತ್ತಾಗಿ  ಆ ವಿಡಂಬನೆಯಲ್ಲಿಯ ಕೊಂಕುತನವು ತಮ್ಮಲ್ಲಿಯ ವಿಶಿಷ್ಟ ಗುಣಕ್ಕೆ  ಹೊಂದಿಕೆಯಾಗುವದೆಂಬ ಕಾರಣದಿಂದ ಅರಸಿಕರಾಗಬಾರದು. ಉದಾ  ಹರಣಾರ್ಥ; ಜೀವನದ ವಿಷಯವಾಗಿ ಬರೆದೆವೆಂದು ಕಲ್ಪಿಸುವಾ. ಊರಿಗೆ  ಒಬ್ಬನೇಕೆ, ಅನೇಕ ಜನ ಜಿಪುಣರಿರುವದು ಸಾಮಾನ್ಯವಾದ ಮಾತು.  ಜೀನತನದ ವಿಷಯವನ್ನು ಓದಿದ ಕೂಡಲೆ ವಾರಪತ್ರಿಕೆಯ ಸಂಪಾದಕರಿಗೆ  “ನೀವು ನಿಮ್ಮ ಪತ್ರವನ್ನು ಇನ್ನು ಮೇಲೆ ಕಳಿಸಬೇಡಿರಿ?” ಎಂದು  ಮುಂತಾಗಿ ಪತ್ರ ಬರೆಯುವದು ಉಚಿತವಲ್ಲ! ಒಂದು ವೇಳೆ ಹೀಗೆ ಬರೆದರೆ  ಒಬ್ಬ ವರ್ಗಣಿದಾರನು ಕಡಿಮೆಯಾಗುವದರಿಂದ ಪತ್ರಿಕೆಗೆ ಬಡತನ ಬರುವ ದಿಲ್ಲ. “ಜೀನನು ಕಡೆಗೂ ಜೀನನೇ ! ವರ್ಗಣಿ ಹಣ ಉಳಿಸಲಿಕ್ಕೆ ಮಾರ್ಗ  ತೆಗೆದನು !!” ಎಂದು ಅಂದು, ನಕ್ಕು ಪತ್ರ ಕಳಿಸುವದನ್ನು ನಿಲ್ಲಿಸಬಹುದು;  ಈ ವಿಷಯ ಕೆಲವರ ಮುಂದೆ ಹೇಳಬಹುದು. ಬಹಳವಾದರೆ ಮರುವಾರ  ಇದೇ ಕಾಲಮಿನಲ್ಲಿ ಪ್ರಕಟಿಸಬಹುದು .
  * * *
ಜೀನತನದ ವಿಷಯವಾಗಿ ಬರೆಯುವಷ್ಟರಲ್ಲಿ ಒಂದು ಚಿಕ್ಕ ಕಥೆಯು ನೆನಪಾಯಿತು:
ಒಂದು ಊರಲ್ಲಿ ಒಬ್ಬ ಮಹಾ ಜೀನನಿದ್ದನು. ಆತ ವಯಸ್ಸಿಗೆ ಬಂದ ತನ್ನ ಮಗನ ಸಲುವಾಗಿ ಕನ್ನೆಯನ್ನು ಹುಡುಕಲು ಹೊರಟನು. ಹೋದ ಹೋದಲ್ಲೆಲ್ಲ ತನ್ನಂಥ ಜೀನರ ಮನೆತನವನ್ನೇ ಹುಡುಕುತಲಿದ್ದ. ಕಡೆಗೆ ಒಂದು ಊರಲ್ಲಿ ಒಬ್ಬ “ಪ್ರಖ್ಯಾತ” ಜೀನನ ಮನೆ ಸಿಕ್ಕಿತು. ಮಾತುಕತೆ  ಸುರುವಾದೊಡನೆ “ನೀವು ಎಷ್ಟು ಜೀನರಿರುವಿರಾ?” ಎಂದು ಆತ ನೇರವಾಗಿ ಕೇಳಿಬಿಟ್ಟ ! ಕೂಡಲೆ ೨ನೇ ಜೀನನು ಅಭಿಮಾನದಿಂದ ಉತ್ತರಕೊಟ್ಟ.  “ನಮ್ಮ ಜೀನತನದ ಕಲ್ಪನೆಯಾಗಬೇಕೇ ನಿಮಗೆ ? ನಮ್ಮ ಅಜ್ಜಿ ಮುತ್ತಜ್ಞರ ಕಾಲದಿಂದ ನಮ್ಮ ಮನೆಯಲ್ಲಿ ಒಂದು ರೊಟ್ಟಿ ಇದೆ. ಊಟದ ವೇಳೆಯಾದ ಕೂಡಲೆ, ನಾವು ಒಂದು ಡಬರಿಯ ತುಂಬ ನೀರು ತುಂಬಿ ಅದರಲ್ಲಿ ರೊಟ್ಟಿಯನ್ನು ಎದ್ದಿ, ಅದನ್ನು ಹಾಗೇ ತೆಗೆದಿಡುತ್ತೇವೆ; ಆ ನೀರನ್ನೇ  ಕುಡಿದು ಸುಖದಿಂದ ಜೀವಿಸುತ್ತೇವೆ!” ಆಗ ಮೊದಲನೇ ಜೀನನಿಗೆ ಅಸಮಾ ಧಾನವಾಯಿತು. ಆತನೆಂದ: “ಛೇ! ನೀವು ಸಾಕಷ್ಟು ಜೀನರಿಲ್ಲ. ನಿಮ್ಮ  ಮಗಳು ನನ್ನ ಸೊಸೆಯಾಗಿ ಬಂದರೆ ನನ್ನ ಮನೆ ಹಾಳು ಮಾಡಿಯಾಳು,  ನಮ್ಮನ್ನು ದಿವಾಳಿ ತೆಗೆಸಿಯಾಳು. ನಮ್ಮ ಮನೆಯಲ್ಲಿಯೂ ಒಂದು ರೊಟ್ಟಿ ಇದೆ. ಊಟದ ವೇಳೆಗೆ ಒಂದು ಡಬರಿಯಲ್ಲಿ ನೀರು ತಂದು ಅದರ ಮೇಲೆ ರೊಟ್ಟಿಯ ನೆರಳು ಬೀಳುವಂತೆ ದೂರದಲ್ಲಿ ರೊಟ್ಟಿಯನ್ನು ಹಿಡಿಯುತ್ತೇವೆ.  ಆ ಮೇಲೆ ರೊಟ್ಟಿಯನ್ನು ತೆಗೆದಿಟ್ಟು ಆ ನೀರನ್ನು ಕುಡಿಯುತ್ತೇವೆ!”
*****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...