Home / ಬಾಲ ಚಿಲುಮೆ / ಕಥೆ / ಜೇನು ಗೂಡಿಗೆ ನುಗ್ಗಿದ ಇಲಿಯ ಕಥೆ

ಜೇನು ಗೂಡಿಗೆ ನುಗ್ಗಿದ ಇಲಿಯ ಕಥೆ

ಒಂದಾನೊಂದು ಕೊಳದ ತೀರದಲ್ಲಿ ಒಂದು ಭಾರಿಯ ಸೀಗೆಯಮೆಳೆಯಿತ್ತು. ಅದರಲ್ಲಿ ಜೇನುಗಳು ಒ೦ದು ಗೂಡು ಕಟ್ಟಿ ಕೊಂಡು ಸುಖವಾಗಿದ್ದುವು. ಆಗಾಗ ಗೂಡಿನಿಂದ ಜೇನುತುಪ್ಪವು ಸೋರುವುದು. ಒಂದು ಇಲಿಯು ಬಂದು ಅದನ್ನು ನೆಕ್ಕಿಕೊಂಡು
ಹೋಗುವುದು.
ಇಲಿಗೆ ಜೇನುತುಪ್ಪದ ಸವಿ ಹಲ್ಲಿಗಿಳಿಯಿತು. ಅದು ವಾಸನೆಯನ್ನು ಹಿಡಿದುಕೊಂಡು ಮೆಳೆಯ ಮಧ್ಯವಿದ್ದಗೂಡಿಗೆ ಹೋಯಿತು. ಅಲ್ಲಿ ಅಷ್ಟುಹೊತ್ತು ನಿಂತುಕೊಂಡು ನೋಡಿತು. ಸಣ್ಣ ಸಣ್ಣ ನೊಣಗಳು ಬಂದು ಬಂದು ಹೋಗುತ್ತಿರುವುದನ್ನು ಕಂಡು, “ಓ, ಸರಿ, ಇಲ್ಲಿರುವುದೆಲ್ಲಾ ಈ ನೊಣಗಳು. ಇವಕ್ಕೆ ನಾನು ಹೆದರಬೇಕೆ?” ಎಂದು ಗೂಡಿನೊಳಕ್ಕೆ ನುಗ್ಗಿಯೇ ಬಿಟ್ಟಿತು.
ಜೇನು ನೊಣಗಳೆಲ್ಲವು ಶತ್ರುವು ಬಂದನೆಂದು ಭರ್ರನೆ ಮೇಲಕ್ಕೆ ಎದ್ದುವು. ಇಲಿಯು ತನಗೆ ಹೆದರಿಕೊಂಡು ಓಡಿಹೋದುವು ಎಂದು ಆನಂದದಿಂದ ಜೇನಿನ ಹೆಕ್ಕೆಗೆ ಬಾಯಿ ಹಾಕಿತು. ಅದು ಒಂದು ಸಲ ಕಚ್ಚಿತ್ತೋ ಇಲ್ಲವೋ? ಅಷ್ಟರೊಳಗಾಗಿಯೇ ಮತ್ತೆ ನೊಣಗಳೆಲ್ಲ ಹಿಂತಿರುಗಿ ಬಂದು ಅದನ್ನು ಚುಚ್ಚಿದುವು. ಮೂತಿಯಿಂದ ಹಿಡಿದು ಬಾಲದವರೆಗೆ ಕಣ್ಣು ಮೂಗೂ ಕೂಡ ಬಿಡದೆ ತಮ್ಮ ಮುಳ್ಳುನಿಂದ ಚುಚ್ಚಿ ಚುಚ್ಚಿ ಚುಚ್ಚಿದುವು. ಆ ನೋವು ತಡೆಯಲಾರದೆ ಇಲಿಯು ಒದ್ದಾಡಿ ಅಲ್ಲಿಂದ ಕೆಳಗೆ ಬಿತ್ತು. ಮೇಲಿನಿಂದ ಬೀಳುವಾಗ ಸೀಗೆಯ ಮುಳ್ಳುಗಳೂ ಗೋರಿದುವು. ಕೆಳಗೆ ಬೀಳುವುದಲ್ಲಿಯೇ ಇಲಿಯು ಸತ್ತು ಹೋಗಿತ್ತು. ಅದರಿಂದ ಸ್ಥಾನದಲ್ಲಿರುವವನನ್ನು ಶತ್ರುಗಳು ಏನೂ ಮಾಡಲಾರರು.”
ಮೇಘವರ್ಣನು ಚಿರಂಜೀವಿಯನ್ನು ಕರೆದು ಕೇಳಿದನು. ಚಿರಂಜೀನಿಯು ಹೇಳಿದನು :—ದೇವಾ, ನನಗೆ ಸಂಶ್ರಯವು ಸಮ್ಮತವು. (ಸಂಶ್ರಯವೆಂದರೆ ಸ್ನೇಹಿತರನ್ನು ಕಟ್ಟಿಕೊಳ್ಳುವುದು)
ಕೇಳಿಲ್ಲವೇ ?
ಶಕ್ತನಾದರು ಶೂರನಾದರು ಒಂಟಿಯಾದರೆ ಸಾಲದು |
ಗಾಳಿಯಿಲ್ಲದೆ ಉರಿವ ಬೆಂಕಿಯು ಉರಿದುರಿದಾರಿ ಹೋಗುವುದು ॥೫॥
ಜೊತೆಯು ಬೇಕೈ ಎಲ್ಲ ಕಾರ್ಯಕು ಸಂಗವಿಲ್ಲದೆ ಗೆಲ್ಲದು॥
ಹೊಟ್ಟು ಬಿಟ್ಟರೆ ಕೆಟ್ಟುಹೋಯಿತು. ಭತ್ತ ಬೆಳೆಯದು ನೋಡಿಕೋ ॥೬॥
ಅದರಿಂದ ಮಹಾಪಾದವು ಇಲ್ಲಿಯೇ ಇರಬೇಕು. ಬಲವಾದ ಮಿತ್ರನನ್ನು ಸಂಪಾದಿಸಬೇಕು. ಅವನಿಂದ ಅರಿಮರ್ದನನಿಗೆ ತಕ್ಕ ಬುದ್ಧಿ ಕಲಿಸಬೇಕು. ಹಾಗಿಲ್ಲದೆ ಸ್ವಾಮಿಯು ಈ ದುರ್ಗವನು
ಬಿಟ್ಟು ಇನ್ನೆಲ್ಲಿಗಾದರೂ ಹೋದರೆ ಯಾರೂ ಬಾಯಿಮಾತಿನಿಂದಲೂ ಸಹಾಯ ಮಾಡುವುದಿಲ್ಲ. ಕೇಳಿಲ್ಲವೆ?
ಗಾಳಿಯು ಗೆಳೆಯನು ಬೆಂಕಿಗೆ ವನಗಳ ಸುಡುವಾಗ |
ಗಾಳಿಯೆ ಸೊಡರನೆ ಕೆಡಿಪನು ದೀಪವು ಉರಿವಾಗ ॥ ೭ ॥
ಅದರಿಂದ, ಕೈಲಾಗದವನಲ್ಲಿ ಯಾರಿಗೂ ವಿಶ್ವಾಸವಿರುವುದಿಲ್ಲ. ಟೊಳ್ಳು ಬಿದಿರೇ ಆಗಲಿ, ಒಟ್ಟಿಗೆ ಮೆಳೆಯಾಗಿದ್ದರೆ ಕಡಿಯುವುದು ಕಷ್ಟವಾಗುವುದು. ತಾವರೆಯಲೆಯ ಮೇಲೆ ನಿಂತ ನೀರು ಮುತ್ತಿನ ಹಾಗೆ ಕಾಣುವಂತೆ, ಜೊತೆಗೂಡಿದ್ದವನು ದುರ್ಬಲನಾದರೂ ಶತ್ರುಗಳಿಗೆ ಭಯಂಕರನಾಗುವನು. ಅದರಿಂದ ಸಂಶ್ರಯವೇ ಸರಿ.”
ಅನಂತರ ಮೇಘವರ್ಣನು ಮುದುಕನೂ ತನ್ನ ತಂದೆಗೂ ಮಂತ್ರಿಯಾಗಿದ್ದವನೂ, ಸಕಲ ನೀತಿಶಾಸ್ತ್ರಗಳನ್ನೂ ಬಲ್ಲವನೂ ಆದ ಸ್ಥಿರಜೇವಿಯನ್ನು ನಮಸ್ಕರಿಸಿ ಕೇಳಿದನು:- “ತಾತ,ನೀನು ಇದ್ದರೂ ನಿನ್ನನ್ನು ಬಿಟ್ಟು ಇವರನ್ನೆಲ್ಲ ಕೇಳಿದ್ದು ಪರೀಕ್ಷಾರ್ಥವಾಗಿ. ಇವರು ಹೇಳಿರುವುದನ್ನೆಲ್ಲ ಕೇಳಿದೆ. ಇನು ಏನು ಮಾಡಬೇಕು ಎಂಬುದನ್ನು ಹೇಳು. ನಮಗೆ ಉಪದೇಶ ಮಾಡು” ಎಂದನು. ಸ್ಥಿರಜೀವಿಯು ಹೇಳಿದನು:- ವತ್ಸ, ಈ ನಿನ್ನ ಸಚಿವರೆಲ್ಲರೂ ನೀತಿಶಾಸ್ತ್ರವನ್ನು ಹಿಡಿದೇ ಮಾತನಾಡಿದ್ದಾರೆ. ಅವರು ಹೇಳುವುದೂ ಆಯಾಕಾಲಕ್ಕೆ ತಕ್ಕಂತಿದೆ. ಆದರೂ ಈಗ ಮಾಡ ಬೇಕಾದುದು ದ್ವೈದೀಭಾವವು. (ಮೋಸವು) ಸಂಧಿ ವಿಗ್ರಹಗಳೆರಡನ್ನೂ ನೆಚ್ಚಬಾರದು. ಶತ್ರುವು ಬಲವಾಗಿರುವಾಗ ಮೋಸ ಮಾಡಿಯೇ ಗೆಲ್ಲಬೇಕು. ಶತ್ರುವಿಗೆ ನಂಬಿಕೆ ಹುಟ್ಟಿಸಬೇಕು. ನಾವು ನಂಬದಿರಬೇಕು. ಅವರಿಗೆ ಲೋಭನನ್ನು ಹುಟ್ಟಿಸಬೇಕು. ಹೀಗಾದರೆ ಶತ್ರುವನ್ನು ಹಾದಿಹಿಡಿಸಬಹುದು. ವೈದ್ಯರು ಬೆಲ್ಲವನು ತಿನ್ನಿಸಿ ಶ್ಲೇಷ್ಮವನ್ನು ಬೆಳೆಸಿ ಅನಂತರ ಅದನ್ನು ಕತ್ತರಿಸುವಂತೆ ಕಿತ್ತೆಸೆಯಬಹುದಾದ ಶತ್ರುವನ್ನೂ ಬಲ್ಲವರು ಕೆಲವು ಕಾಲ ಬೆಳೆಸುವರು. ಏಕಭಾವವು ಆತ್ಮಜ್ಞಾನ ಸಂಪನ್ನರಾದ ಯತಿಗಳಿಗೆ ಮಾತ್ರವೇ ಹೊರತು ಮಿಕ್ಕವರಿಗೆಲ್ಲ ಅದರಲಿಯೂ ಅರಸುಗಳಿಗೆ ಅನೇಕ ಭಾವವೇ ಹೊರತು ಏಕಭಾವವು ಕೂಡದು. ಈ ದ್ವೈಧೀ  ಭಾವವನ್ನು ಆಶ್ರಯಿಸಿ, ನೀನು ಸ್ವಸ್ಥಾನದಲ್ಲಿಯೇ ಇರಬೇಕು. ಲೋಭವನ್ನು ಹುಟ್ಟಿಸಿ ಅವನ ಮರ್ಮವನ್ನು ತಿಳಿದು ಸಾಧಿಸಲು ಶಕ್ತನಾಗುವೆ.”
ಮೇಫವರ್ಣನು “ತಾತ, ಆ ಶತ್ರುವು ಎಲ್ಲಿರುವನೆಂಬುದೇ ತಿಳಿಯದಲ್ಲ. ಹಾಗಿರಲು-ಅವನ ಮರ್ಮವನ್ನೆಂತು ತಿಳಿಯುವುದು?” ಎಂದು ಕೇಳಿದನು. ಸ್ಥಿರಜೀವಿಯು ಹೇಳಿದನು:- “ವತ್ಸ, ಅವನೆಲ್ಲಿರುವನು, ಅವನ ಮರ್ಮವೇನು ಎನ್ನುವುದನ್ನು ಗೂಢಚಾರರು ತಿಳಿದು ಬರುವರು. ಕೇಳಿಲ್ಲವೆ?-
ಗೋವು ತಿಳಿವುದುಗಂಧದಿಂ| ಪಾರ್ವ ತಿಳಿವನು ಶಾಸ್ತ್ರದಿಂ॥
ಅರಸು ತಿಳಿವನು ದೂತರಿಂ| ನರರು ತಿಳಿವರು ಕಣ್ಗಳಿಂ ॥೮॥
ತನ್ನವರಲ್ಲಿಯೂ ಶತ್ರುಗಳಲ್ಲಿಯೂ ಇರುವ ಮರ್ಮಗಳನ್ನು ಚಾರರನ್ನು ಬಿಟ್ಟು ಅರಿಯುತ್ತಿರುವ ಅರಸನು ಎಂದಿಗೂ ದುರ್ಗತಿಯನ್ನು ಹೊಂದುವುದಿಲ್ಲ. ವೈದ್ಯ, ಜೋಯಿಸ, ವಿದ್ವಾಂಸರು ನಮ್ಮಲ್ಲಿರುವವರ ಮರ್ಮಗಳನ್ನು ಭೇದಿಸುವರು. ಹಾವಾಡಿಗ, ಹುಚ್ಚರು ಶತ್ರುಗಳ ಮರ್ಮವನ್ನು ಭೇದಿಸುವರು.” ಆಗ ಮೇಘ ವರ್ಣನು ಸ್ಥಿರಜೀವಿಯನ್ನು ಕುರಿತು, “ತಾತ ನಮಗೂ ಈ ಗೂಗೆಗಳಿಗೂ ಇಷ್ಟು ಬಲವಾದ ವೈರವು ಹುಟ್ಟುವುದಕ್ಕೆ ಕಾರಣವೇನು?”ಎಂದು ಕೇಳಿದನು. ಅದಕ್ಕೆ ಮಂತ್ರಿಯು ಹೇಳಿದನು:-
*****
ವೈರವು ಬಂದ ಕಥೆ ಓದಿ
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...