Home / ಕವನ / ಕವಿತೆ / ಬಾಳ ದೇಗುಲದಲ್ಲಿ ಅಡಿಯಿಡುವ ಎಳೆಯನಿಗೆ

ಬಾಳ ದೇಗುಲದಲ್ಲಿ ಅಡಿಯಿಡುವ ಎಳೆಯನಿಗೆ

ರತ್ನಾ ಕರಾಧೀಶ್ವರನು ಬೆರಳಿನಲ್ಲಿಟ್ಟ
ಬಾಳ ಹರಳಿನ ಚಲುವ ತಿಳಿದೆಯೇನು?
ಇಣಿಕಿ ನೋಡಲು ಕುಣಿವ ಬಗೆಬಗೆಯ ಬಣ್ಣಗಳ
ಇಂದ್ರಜಾಲವನೆಲ್ಲ ಅಳೆದೆಯೇನು?
ಅದರನಂತತೆಯ ಚಿಂತನದಲಿಹ ಮಣಿಗಾರ,
ಉಪಲದೀಕ್ಷಿತ, ರತ್ನರಸಿಕನಾಗಿ
ನೀ ಬಾಳುವದು, ಕಂದ! ಜ್ಯೋತಿ-ಜೋತಿಷಿಯಾಗಿ,
ಎಣೆಯಿರದ ಮಾಣಿಕ್ಯಮೂರ‍್ತಿಯಾಗಿ!

ತೇರೇರಿ ಬಂದಿರಲು ಮುಂಗಾರು, ಬಾಳಿನಾ
ಮುನ್ನೀರಿನಾಳದಲಿ ಸುಪ್ಪಾಣಿ-ಮುತ್ತು
ಇರುವವೆನಿತೆನಿತೊ ತಳತಳಿಸಿ! ಮುಂಗಾಣದಲೆ
ಹಳಹಳಿಸುತಿರಲು ನಿನಗೇನು ಗೊತ್ತು?
ಆಗಿನ್ನು! ಅಣಿಯಾಗು! ಕುಂಗರುತ್ತಂಕನಿರು!
ನೀರ ನೆಲೆಗಾಣ್ವ ಹಂಬಲಿಕೆಯಿರಲಿ!
ತೋರ‍್ಮುತ್ತುಗಳ ಮನನ, ನೀರ‍್ಮುತ್ತುಗಳನುದಿನ
ಪವಣಿಸುವ ಹವಣಿಕೆಯು, ಹುಟ್ಟಿ ಬರಲಿ!

ಒಂದೆಂದರೊಂದಲ್ಲ, ನೂರೊಂದು : ಎಂಬುದನು
ಯಾವ ಗಣಿತಿಯು ತಿಳಿದನವನೆ, ಗಣಿತಿ!
ಒಂದಪರಿಮಿತವೆಂಬುದನು ಕಂಡವನೆ ಕಂಡ!
ಢಾಳೈಸುವದು ಅವನ ಪ್ರಾಣ-ಪ್ರಣತಿ!
ಚಿಕ್ಕಗಳನೆಣಿಸೇಳು! ಒಂದೆ ಆಕಾಶದಲಿ
ಇರುವ ನಕ್ಷತ್ರದಕ್ಷೋಹಿಣಿಯ ಗುಣಿಸು!

ಒಂದೆ ಧಾರುಣಿಯಲಿಹ ಕಾಣೆಗಳ ಸಂಗ್ರಹಿಸು!
ಇದರ ತಾಳಕೆ ನಿನ್ನ ಎದೆ-ಮನವ ಕುಣಿಸು!
ಎಲ್ಲ ಅವತಾರಗಳ ಸೊಲ್ಲ ನುಂಗಿತು ಮುಗಿಲು;
ಮೆಯ್ಯ-ನೆಲ ; ಮಾತುಗಳ,-ನಮ್ಮ ಮನವು.
ತಣಿದಿಲ್ಲ ನೆಲ-ಮುಗಿಲು-ಮನ, ಶರಣರೊಡನಿದ್ದ
ಜೀವಗಳು ಮಾತ್ರ ತಣಿದವು. ಇದರ ನೆನಹು
ಎಚ್ಚರಿಸಿರಲಿ ನಿನ್ನ. ಇನ್ನಿರಲಿ ಮನುಕುಲದ
ಆ ದಿವ್ಯ ಅನುಭವವೆ ನಿನ್ನ ಸ್ಫೂರ‍್ತಿ!
ಅವನಲ್ಲಿ ಅವನ ಜಾತಿಯೆ ಹೂತು ಮಾಗಿರಲು,-
ಮಾನವನ ಜೀವಮಾನಕೆ ಬಂತು ಪೂರ‍್ತಿ!

ನಂಬದಿರು ಒಂದೆ ಧರ‍್ಮವ, ಒಂದೆ ಮಾರ‍್ಗವನು!
ಇಂಬುಗೊಡದಿರು ಯಾವುದೊಂದೆ ಶ್ರುತಿಗೆ!
ಕಂಬನಿಯ ಮಿಡಿಯದಿರು ನನ್ನದೇನಿಲ್ಲೆಂದು :
ಇಂಥ ಹಮ್ಮಳೆಯುವದು ನಿನ್ನ ಚ್ಯುತಿಗೆ.
ತಕ್ಕೆಬೀಳಾಗಸಕೆ! ಎಲ್ಲ ದರ‍್ಶನಗಳಿಗೆ
ನೆಲವೆ ಒರೆಗಲ್ಲೆಂಬ ಶ್ರದ್ಧೆ ಬರಲಿ!
ಬಯಲಾಗು! ಮೂಲೆಗುಂಪಾಗದಿರು! ಬಾನ್ನೆಲದ
ಹರಕೆಗಳು ಅಡಿ-ಮುಡಿಯ ಕಾಯುತಿರಲಿ!
*****

Tagged:

Leave a Reply

Your email address will not be published. Required fields are marked *

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...