ಬಗೆಗೆ ಕನ್ನಡಿ ಹಿಡಿದೊಲಿಂದಿಹುದಹಾ ಪ್ರಕೃತಿ!
ಹರಹಿದ ಕೆರೆಯ ಕರೆ ತೆರೆಯ ನಿರಿಯ ತಬ್ಬುತಿರೆ;
ರಂಗು ರಂಗು ನಭದೊಳು ಹುಚ್ಚಾಗಿ ಹಬ್ಬುತಿರೆ;
ಹೊತ್ತಿರಲು, ಎಲ್ಲೆಲ್ಲು ಹರಡುತಿಹ ಮಬ್ಬ, ಕ್ಷಿತಿ;
ಬೆಳ್ಳಿ ಯಂಚಿನ ಕರಿಯ ಮೋಡ ಸುತ್ತಿರೆ ನಡುವೆ
ತಿಳಿನೀಲದಾಗಸದ ಸರ ಪ್ರಿಯೆಯ ಕಣ್ಣುಗಳ
ಹೋಲೆ, ಹಬ್ಬಿರುವ ವಿಧವಿಧದ ಕೆಂಬಣ್ಣಗಳ
ಹಿಂಡು, ಕೆಂಗಣ್ಣಿನ ಸಮಾಜದಂತಿರಲಿದುವೆ
ಕೆರೆಯ ತೆರೆಯವಳು ಚಾಚುತ್ತಿಹ ಕರಗಳೊಲಿರೆ,
ಅದ ತಡೆವ ಸಂಪ್ರದಾಯದೊಲಿರಲು ಕೆರೆಯ ಕರೆ;
ಬೇಡಬೇಡೆಂದನಿತು ಬೆನ್ನಟ್ಟಿ ಬರುತಿರುವ
ಥಳಕ ಬೆಡೆಗಿಯರ ನೆನಹುಗಳಂತೆ, ಎದುರಿರುವ
ಕರೆಯ ದೀಪದ ನೆರಳು ಕೈಗಳನು ಚಾಚುತಿರೆ;
ಬಗೆಗೆ ಕನ್ನಡಿ ಹಿಡಿದೊಲಿಂದಿಹುದು ಸುತ್ತ ತಿರೆ!
*****

















