ಮಾಯೆ, ಛಾಯೆ, ಮೆರೆಸಿಬಂದೆಯಾ!
ಚಂದ್ರಮುಖಿ, ಸೌಮ್ಯ ಸಖಿ
ವಸಂತದೆಡೆಗೆ, ಸುಮದಕಡೆಗೆ
ಸೇರಿಬಂದೆಯಾ! ಮಾಯೆ! ಛಾಯೆ!
ಮೆರೆಸಿಬಂದೆಯಾ! ಸಖನಕೂಡಿ
ಹರುಷ ತಂದೆಯಾ!
ಚಲುವ ಅರಸಿ ನೀನು, ಮಾಯೆ!
ಧರೆಯ ಬೆಳಗಿ ಸುಳಿದೆ, ತಾಯೆ!
ಮಾಯವತಿ, ಛಾಯೆಸತಿ
ಮೆರೆಸಿಬಂದೆಯಾ! ರಾಗಿಣೀ ನೀನು,
ಮಾಯೆ, ಛಾಯೆ! ಸಖನಕೂಡಿ
ಹರುಷ ತಂದೆಯಾ!
ತುಂಬಬಯಲು, ಕೆಂಪುನೆಳಲು
ನಿನ್ನರಂಗಮಾಯೆ! ಮೈ ಬಣ್ಣ ಹೊಳೆಸಿ
ಮಿಂಚು ಕಣ್ಣ ಸೆಳೆಸಿ, ಸುಳಿದೆ ವನಿತೆ
ತೋರಿ ಘನತೆ, ಮಾಯೆ, ಛಾಯೆ!
ಮರೆಸಿಬಂದೆಯಾ! ಸಖನಕೂಡಿ
ಹರುಷತಂದೆಯಾ!
ತಳಿರಕೊನೆಯು, ಉಲಿವಗಿಳಿಯ
ನೆಲೆಯು ನಿನ್ನದು, ಸ್ವರ್ಣತೆರದಿ
ಮೆರಗಿ ಕೆಳದಿ, ಹೊಳೆದೆ ಚಲುವೆ
ನೀನು ಭುವನೆ, ಮಾಯೆ, ಛಾಯೆ!
ಮರೆಸಿಬಂದೆಯಾ! ಸಖನಕೂಡಿ
ಹರುಷ ತಂದೆಯಾ!
ರಾಗಧಾಟಿಯಲ್ಲಿ, ಪ್ರೀತಿ ಮೇಳದಲ್ಲಿ
ನಿನ್ನ ಕೂಡಿದೆ, ನಾದಮಯ
ತಾಳಲಯ, ನಿನ್ನ ಸೇರಿದೆ
ನೀನು, ವಾಹಿನಿ! ಮಾಯೆ, ಛಾಯೆ!
ಮೆರೆಸಿಬಂದೆಯಾ! ಸಖನಕೂಡಿ
ಹರುಷ ತಂದೆಯಾ!
*****









