Home / ಕವನ / ಕವಿತೆ / ಕುಚೇಲ!

ಕುಚೇಲ!

ಭಾಮಿನಿ

ಶ್ರೀರಮಾ ರಮಣೈಕ ಭಕ್ತನೆ!
ಚಾರು ಚರಿತ! ಕುಚೇಲ! ನಿನ್ನಯ-
ಸಾರ ಗುಣ ಗಣ ಯುಕ್ತ ಭಕ್ತಿಯ-
ನೆಂತು ಬಣ್ಣಿಪೆನು?

ವಾರಿಜೋದರ ದೇಹದಾ ನಿಜ
ಸಾರದಾಲಿಂಗನೆಯನಾ೦ತಿಹ
ಚಾರು ಸುಮನೋಹರ ಶರೀರವ-
ನೆಂತು ಚಿತ್ರಿಪೆನು? ೧

ಸಾದರದಿ ನೀನೆಲೆ ಸುದಾಮನೆ!
ಮಾಧವನ ಭವನಾಂತರುಲದಿ
ಹೋದ ಹೊತ್ತಿನ ಗಣನೆಯಿಲ್ಲದೆ,
ಹರಿಯ ಸರಿಸದಲಿ

ಮೋದದಲಿ ಮಾತಾಡುತಾಡುತ,
ಸೋದರರ ತೆರದಲ್ಲಿ ವಿಹರಿಸಿ,
ಸಾಧಿಸಿದ ಚಿತ್ರವದು ಮಾಸದು
ಹೃದಯ ಭಿತ್ತಿಯಲಿ. ೨

ಬಡತನದ ಕಡು ದುಗುಡದಿಂದಲಿ
ಸೆಡೆದು ಬಡವಾಗಿರುವ ಒಡಲದು
ಸಡಗರದಿ ಮಾಧವನು ಕೋಮಲ
ಮಸೃಣ ಕರತಳದಿ

ಕೊಡುವ ಅಂಗಸ್ಪರ್ಶ ಸುಖದಲಿ
ಪಡೆಯದೇ ರೋಮಾಂಚವನು ತಾ-
ನಡಿಗಡಿಗೆ ಪೇಳೀಗ ಭಕ್ತ ಸು-
ದಾಮ! ನನ್ನೊಡನೆ. ೩

ಕೆಲವು ಮನೆಯನು ತಿರಿದು ತಂದಿಹ,
ಅಳಿಲ ಸೇವೆಯ ಮಳಲಿನ೦ತಿಹ,
ಒಲುಮೆಯೊಲವಿನ ಕಾಣಿಕೆಯನವ-
ಲಕ್ಕಿಯನು ಮುದದಿ

ಲಲನೆಯಾ ‘ಕ್ಷುತ್‌ ಕ್ಷಾಮೆ’ ಯಿತ್ತಳು
ಸಲಿಗೆಯಲಿ ನಿನಗೆಂದು, ಕೃಷ್ಣನ
ಲಲಿತ ಸಂದರ್ಶನದಿ ಕಾಣಿಕೆ.
ಗೊಡಲು ಭಕ್ತಿಯಲಿ. ೪

ಅದನು ಹೆದರುತ ತ೦ದು, ಕೃಷ್ಣನ
ಪದತಲದೊಳರ್ಪಿಸದೆ, ಸುಮ್ಮನೆ
ಒದವಿದಾ ಸ೦ಕೋಚ ಭಾವದಿ
ಬಾಗಿ ನಿ೦ದಿರಲು,

ಸದಯ ಹೃದಯನು ಮಾಧವನು ನಿಜ
ಸದಮಲಾಂತಃಕರಣದಿಂದಲಿ
ಸೊದೆಯ ಸುರಿಸುವ ಸರಸ ವಚನವ-
ನಿಂತು ಪೇಳಿದನು:- ೫

“ಸಾಕು ಮನದನುತಾಪ, ಮಿತ್ರನೆ!
ಈ ಕಡೆಗೆ ನೀಡೆನಗೆ, ಮನದಲಿ
`ಕಾಕು ಬುದ್ಧಿಯ ಬಿಟ್ಟು, ಭಕ್ತಿಯ
ಕಾಣ್ಮೆಯನ್ನೀಗ.

ಏಕೆ ಸಂಶಯ? ಭಕ್ತ ಜನರು ವಿ-
ವೇಕದಿ೦ದಲಿ ಕೊಟ್ಟ ಪತ್ರವು,
ಆ ಕುಸುಮ, ಫಲ, ತೋಯ ತೃಪ್ತಿಯ-
ನೆಸಗುವುದು ನನಗೆ. ೬

“ಧನಿಕರರ್ಪಿಪ ವಿವಿಧ ವಸ್ತುಗ-
ಳನಿತರೊಳು ನನಗಿರದು ತೃಪ್ತಿಯು;
ಜನಕೆ ತೋರಿಪ ಹೊರಗಿನಾಡ೦-
ಬರೆದಿ ಫಲವೇನು?

ಮನವೊಲಿದು ಸಂಸ್ತುತಿಸಿ, ಸುರಿಯಿಪ
ಮನವ ಕರಗಿಪ ನಯನ ವಾರಿಯು
ನನಗೆ ಮನೆಯದು, ಭಕ್ತರಿಗೆ ನಾ-
ನೊಲಿವೆ; ಸತ್ಯವಿದು!” ೭

ಎಂದ ಮಾತನು ಕೇಳುತತ್ಯಾ-
ನಂದದಲಿ ನೀನಂದು ಶ್ರೀಗೋ-
ವಿಂದನಡಿದಾವರೆಗೆ ಪೊಡಮಡು-
ತಧಿಕ ಭಕ್ತಿಯಲಿ,

“ಇಂದಿರಾ ಮಂದಿರನೆ! ಭಕ್ತರ
ಬಂಧು ನೀಡುವೆ ನಿನಗೆ ನಾನಿಂ-
ದಂದದಲಿಯವಲಕ್ಕಿ ಬಡವನ
ಭಕ್ತಿ ಕಾಣಿಕೆಯ. ೮

“ಒ೦ದಿ ನೀನಿದರನ್ನು, ನನ್ನನು
ಮುಂದೆ ಕೃಪೆಯಲಿ ಸಲಹು. ಬೇಡುವೆ,”
ನೆಂದು ಕಂಠದೊಳುಣ್ಮೆ ಗದ್ಗದ
ದನಿಯು, ನಯನದಲಿ

ಸಂದಿರಲು ಸಂತಸದ ಕ೦ಬನಿ,
ನಿಂದಿರಲು ರೋಮಾಂಚ ದೇಹದಿ,
ಮುಂದೆಯವಲಕ್ಕಿಯನು ಬಿಚ್ಚಿದೆ.
ಧನ್ಯ ನೀನಿಂದು! ೯
*****
೧೯೩೩

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...