ಬರುವುದೊಮ್ಮೆ ಬರುವುದು
ಬಾರದೆಂದು ಬಾರದು
ಬರುವ ಬಿಡುವ ಭೂತಕಾಗಿ
ಇಂದು ಭಯವದೇಕದು?
ಗೈವ ಗೈಮೆ ಸಾಗಲಿ
ಮೈ ಮನವ ತುಂಬಲಿ
ಸಾವು ಬದುಕು ನೋವು ನೂರು
ಹಾರಿ ಬರಲು ನಗುತಿರು!
ಕರಿದು ಮೋಡ ಹೊಳೆವುದು
ಬರಿದು ಕೈ ತೀವುದು
ಸಿರಿಯು ಕಣ್ಣ ಮುಚ್ಚಿ ತಾನೆ
ಎಲ್ಲೊ ಎತ್ತೊ ನಡೆವುದು
ಇಳೆಗೆ ಮೇರು ಬರಲಿದೆ
ಬೆಳೆಯ ತುಂಬ ತರಲಿದೆ
ಜಳಕವಾಗ ಗಂಗೆಯಲ್ಲಿ
ಜನರು ಜನರ ಸ್ವರ್ಗದಲ್ಲಿ
* * *
ನಲಿದು ಕುಣಿದು ದಣಿವರು
ಒಲಿದು ಉಲಿದು ತಣಿವರು
ಇದೇ ಬೇಕು ಇಂದಿಗೆ
ಎಲ್ಲ ದುಡಿವ ಮಂದಿಗೆ
*****
ಬೆಂಗಳೂರು : ೧೯೪೪








