Home / ಕವನ / ಕವಿತೆ / ಗರತಿ ಗಂಗವ್ವ

ಗರತಿ ಗಂಗವ್ವ

ಸೋಬಾನವ ||ಪ||

ಅಂಗೈಯಟ ಮುಗಲಾಗ ಲಿಂಗದಟ ಮಾಡಾಗಿ
ಜಂಗಿ ಮಳೆರಾಯ ಸುರದಾನ | ಸೋ | ಭೂತಾಯಿ
ತೊಯ್ದ ಹೊತ್ತಾಳ ಜಲಬಿಂದು || ಸೋ || ೧

ಮಲ್ಲಾಡಕ ಮಳೆಯಾಗಿ ಒಡ್ಲೊಡೆದು ಹಳ್ಹರಿದು
ನಮ್ಮೂರ ಮುಂದ ಹೊರಸೂಸಿ | ಸೋ | ಮಲಪಾರಿ
ಹೊರಚೆಲ್ಲಿ ಊರ ಹೊಕ್ಕಾಳ | ಸೋ || ೨

ಗಂಗ್ಯಳದ ಗರತಿಗೆ ಏಳು ಕೊಪ್ಪರಿಗ್ಹೊನ್ನ
ಆನಿ ಅಂಬಾರಿ ವಾಲಗ | ಸೋ | ದಾರೂತಿ
ಊರ ಓಣ್ಯಾಗ ಸಡಗರ || ಸೋ || ೩

ಊರ ಹಿರಿಯರ ಕೂಡ ಗೌಡ ಸಾರುತ ಬಂದ
ಗರತಿಯಿದ್ದಾಕಿ ಹೊರಬೀಳ | ಸೋ |ಹಡದವ್ವ
ಹೊಳೆಯಳೆದು ಊರ ಉಳಿಸೆಂದ || ಸೋ || ೪

ಓಣಿ ಓಣಿಯ ತಿರುಗಿ ಊರ ಅಗಸಿಗೆ ಬಂದ
ಅಗಸಿ ಮುಂದಾಡು ಬಾಲಯ್ಯ | ಸೋ | ತಾ ಕೇಳಿ
ಗರತಿ ನಮ್ಮವ್ವ ಮನೆಯಾಗೊ || ಸೋ || ೫

ಓಡುತೋಡುತ ಬಾಲ ನಡುಮನೆಗೆ ಬಂದಾನ
ಹಡದಪ್ಪ ಗರತಿ ಜನಬಂದ | ಸೋ | ಕರೆದಾರ
ಗರತಿ ಗಂಗವ್ವ ಹೊರಬೀಳ || ಸೋ || ೬

ನಮ್ಮೂರ ಹೊಳಿ ಬಂದು ಊರ ಹೊಕ್ಕಳ ತಾಯಿ
ಗರತಿ ಗಂಗವ್ವ ಹೊಳಿ ಅಳಿಯ | ಸೋ | ನಮ್ಮೂರ
ಮುತ್ತೋದಿ ಕಳಸ ಹೊರಬೀಳ || ಸೋ || ೭

ಅಡಗೀಯ ಮನಿಯಾಗ ಗರತಿ ಬಡವನ ಮಡದಿ
ಅರತೀಲಿ ಕೇಳ ಒಡನುಡಿಯ | ಸೋ | ಹಡದವ್ವ
ಬಾಗೀಣ ಹೊತ್ತು ಹೊರಟಾಳ || ಸೋ || ೮

ರಂಗ ಪಡಸಾಲ್ಯಾಗ ದಿಂಬದ್ಹಾಸಿಗಿಮ್ಯಾಲೆ
ಇಂಬಿಲೊರಗೀರು ಮಾವಯ್ಯ | ಸೋ | ನಿಮ್ಮ ಸೊಸಿ
ಗಂಗಿಯಳಿಯಾಕ ಹರಸಯ್ಯ || ಸೋ || ೯

ಪಗಡಿ ಪಡಸಾಲ್ಯಾಗ ದಗದ ಮಾಡಿಸುವತ್ತಿ
ಮಕ್ಕಳಿಬ್ಬಾರ ಬಲು ಜೋಕೆ | ಸೋ | ಹಡದವ್ವ
ಗಂಗಿಯಳಿಯಾಕ ಹರಸಯ್ಯ || ಸೋ || ೧೦

ನಡುಮನೆಯ ನಡುಗೀಲ ಒಳಗಿರುವ ನಾದುನಿಯೆ
ಕುಲವಂತಿ ಜೋಕೆ ಒಗತಾನ | ಸೋ | ಗೌರವ್ವ
ಗಂಗಿಯಳಿಯಾಕ ಹರಸವ್ವ || ಸೋ || ೧೧

ಎಡಮನೆಯ ಬಾಗಿಲದ ಒಡತಿ ನೀ ನೇಗೆಣ್ಣಿ
ಬಡಿವಾರ ಬ್ಯಾಡ ಮನೆ ಜೋಕೆ | ಸೋ | ಹಡದವ್ವ
ಗಂಗಿಯಳಿಯಾಕ ಹರಸವ್ವ || ಸೋ || ೧೨

ಭಾವ ಮೈದುನರಯ್ಯ ನಡು ಹೊಲದ ರೈತಾರ
ಬಿಡುದಿನ ಬ್ಯಾಡ ದರುಮಕ | ಸೋ | ಮನಿಸೊಸಿಗೆ
ಗಂಗಿಯಳಿಯಾಕ ಹರಸರಿ || ಸೋ || ೧೩

ಕಡಗೋಲ ಕಂಬದ ನಡುಮನಿಯ ಪಡಿಯಾಗ
ಪಡಿಹೊನ್ನು ಉಂಟು ಎನ್ನರಸ | ಸೋ | ನಾ ಮರಳಿ
ಬರದಿರಕ ನಿಮಗ ಬಾಸಿಂಗ || ಸೋ || ೧೪

ಚಂದ್ರ ಪಡಸಾಲ್ಯಾಗ ಚಂದ್ರ ಮಂಚದ ಮ್ಯಾಲೆ
ಚಂದ್ರ ನನ ದೊರೆಯೆ ನನ ಮಾತ | ಸೋ | ನಡೆಸರಿ
ಗಂಗಿಯಳಿಯಾಕ ಹರಸರಿ || ಸೋ || ೧೫

ಅತ್ತಿ ಮಾವಗ ಶರಣು ಭಾವ ಮೈದುನ ಶರಣು
ಸುತ್ತಿರುವ ಬಳಗ ನನ ತರಣ | ಸೋ | ನಮ್ಮೂರ
ಗಂಗಿಯಳಿಯಾಕ ಹರಸರಿ || ಸೋ || ೧೬

ಲಿಂಗವಂತರ ಗೆಳತಿ ಶಿವಶರಣಿ ನಾಗಮ್ಮ
ಲಿಂಗದ ಬೆಳಕ ನೀನೀಡ | ಸೋ | ಹಡದವ್ವ
ಗಂಗಿಯಳಿಯಾಕ ಹರಸವ್ವ || ಸೋ || ೧೭

ಹಾದೀಯ ಗೆಳತೇರ ಬೀದೀಯ ಕೆಳದೇರ
ಜಾದಮಲ್ಲೀಗೆ ಮುಡಿಯೂವ | ಸೋ | ಐದೇರ
ಗಂಗಿಯಳಿಯಾಕ ಹರಸರಿ || ಸೋ || ೧೮

ಭೂತನಾಥಗ ಶರಣು ಪಂಚಲಿಂಗಗ ಶರಣು
ದೈವ ದೇವರಿಗೆ ನನ ಶರಣು | ಸೋ | ನಮ್ಮೂರ
ಗಂಗಿಯಳಿಯಾಕ ಹರಸರಿ || ಸೋ || ೧೯

ಊರ ದೈವದ ಕೂಡ ಊರ ಗೌಡನ ಕೂಡ
ಗರತಿ ಗಂಗವ್ವ ನಡೆದಾಳ | ಸೋ | ಹೊಳೆದಂಡೆ
ಮಲಪಾರಿ ಚೆಲ್ಲಿ ಹರಿಯೂಳ || ಸೋ || ೨೦

ಹೊಳೆ ತಾಯಿ ಗಂಗವ್ವ ಕಿರಿಯಾಗಿ ಹರಿಯವ್ವ
ಮುತ್ತೋದಿ ಬಾಗೀಣ ನಿನಗೀವೆ | ಸೋ | ಮಲಪಾರಿ
ನನ್ನೂರ ಸಲುಹ ಸಿರಿಯಾಳ || ಸೋ || ೨೧

ಅಂಗದ ಮೇಲಿರುವ ಲಿಂಗಯ್ಯನ ನೆನೆದು
ಗಂಗಿಯಳೆಯೂವೆ ಐಮೋರ | ಸೋ | ಹೊಳೆಗಂಗಾ
ಸಂಗ ಬಗೆಸೀನೆ ಕಡೆತನಕ ||ಸೋ|| ೨೨

ಊರ್ಹೊಕ್ಕ ಹೊಳೆಗಂಗಾ ಗರತೀಯ ಕೊಚಗೊಂಡು
ಒಡ್ಡಲನಬಿದ್ದು ಹರಿದಾಳ | ಸೋ | ದೇಶಕ
ಗರತಿ ಗಂಗವ್ನ ಹೆಸರಾತ || ಸೋ || ೨೩
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...