ಏನಿದೇನಿದು ಬಾನಧುನಿಯಲಿ
ಘೋರಗರ್ಜನೆ ಗೆಯ್ವುದು
ಪೊನಲ ನೆಗಸವು ನೆಗೆದು ಬಂದಿರೆ
ಘೂರ್ಣಿಸುವ ಸೌಂರಂಭಮೊ
ವನಧಿ ಮೇರೆಯ ಘನರವಂಗಳ ಮಿಕ್ಕಿ ಮೀರುವ ಮೊಳಗಿದೊ
ಕಾಲಪುರುಷನ ಕಡಕಡಾಟದ
ಸಂಚರಿಪ ಸಂಚಾಲಮೊ
ಇಳೆಯನೆಲ್ಲವ ಬಳಸಿಯುಲಿಯುವ
ವಿಲಯ ಕಾಲದ ಕಹಳೆಯೊ
ಇಳೆಯ ಮರ್ತ್ಯರ ಮಸಣಗಾಣಿಪ ಮರಣ ಶಾಸನ ಶಕ್ತಿಯೊ
ಬೊಬ್ಬಿರಿವ ಬಿರುಗಾಳಿ ಗೃಹಗಳ
ಕೋಳ್ಗಳನು ಕೋಳ್ಗೊಳುತಿದೆ
ಮಂಡಲಾಕೃತಿಯಲ್ಲಿ ಮನೆಗಳ
ಚಂಡೆಸೆದು ಪುಟಿಸುತ್ತಿದೆ.
ಬಂಟುಗೆಡದಿಹ ಗಿಡಮರಂಗಳ ದಿಂಡಡಸಿ ಸೈಗೆಡಿಸಿದೆ
ಬಡವರೊಂದೆಡೆ ಗುಡಿಸಲೊಂದೆಡೆ
ಬೊಬ್ಬೆಯಬ್ಬರವೆದ್ದಿದೆ
ಫಡಫಡೆನ್ನುತ ಬಿಡದೆ ಪೊಡವಿಯ
ಪೊನಲು ಪೊಯ್ಯುತ ಪೊರಟಿದೆ
ಜಡರ ಧಾರ್ಷ್ಟ್ಯವ ಜಡಿದು ಜಂಕಿಸಿ ಸಿಡಿಲು ಪಲ್ಗಡಿಯುತ್ತಿದೆ.
ಇನಿದು ಗಾನದ ದನಿಯಿದೆಂಬೆನೆ
ತನುಗೆ ತಂಪನು ಸೂಸದು
ಮನವ ತಣಿಸುತ ರಮಿಸಿ ಕುಣಿಸುತ
ಪರಮ ಪುರುಷನ ತೋರದು
ಏನಿದೇನಿದು ಬಾನಧುನಿಯಲಿ ಘೋರ ಗರ್ಜನೆ ಗೆಯ್ದುದು
ಕೋಟೆ ಕೊತ್ತಳ ಕೂಟದಾಟದ
ನಟನೆ ನಡಿಸಿದೆ ನಿಟಿಲೆನೆ
ಆಟವಿಕ ಮಾಯಾ ಪ್ರಪಂಚದ
ಮಾಟನೋಟವ ನಟಿಸಿದೆ
ಲಟಕಟಿಪ ವೀರಾಧಿವೀರರ ಪಡೆಯ ಬೆಡಗನು ಪಡೆದಿದೆ
ಜೀವ ಕೋಟಿಯ ಘಟನೆಪಟಲವ
ವಿಷ್ಣು ಪದದಲಿ ಪದುಳಿಸಿ
ಸವನವಾಹನವಾಗಿಯೇರಿಸಿ
ವಸುಧೆ ದೆಸೆಗಳ ಮುಸುಗಿಸಿ
ಭುವನ ಮಾತ್ರವ ಬವರಯಾತ್ರೆಗೆ ಭರದೆ ಭೋರ್ಗರೆಯುತ್ತಿದೆ
ಸಿಡಿಲು ಗುಂಡಿನ ಮಿಂಚು ಗಿಡಿಗಳ
ಗಡಣದಿಂದಲಿ ಗಗನದೆ
ಕಡಕಡಾಟದ ಕಸುವ ತೋರಿಸಿ
ಸಮರ ಭೂಮಿಯೊಳೆಸೆಯುತ
ಬಿರುಬು ಗಾಣದ ದೊರೆತನದ ಸಾಮ್ರಾಜ್ಯ ಸೀಮೆಯ ಸೇರಿದೆ
ಬೇಸಿಗೆಯ ಸಾಮ್ರಾಜ್ಯ ಶಿಖರವು
ವಸುಮತಿಯ ಸಂತಾನವ
ನಶಿಸಲೆಸಗುತ ಬಿಸಿಲು ಬೇಗೆಗೆ
ಸುಟ್ಟು ಸೂರೆಯ ಗೊಳುತಿರೆ
ಕಸಿದು ಸಾಮ್ರಾಜ್ಯವನು ಸ್ಥಾಪಿಸೆ ಅಶನಿಪಾತವನೆಸಗಿದೆ
೧೦
ಬೀಡುಗೊಂಡಿಹ ಬಿಸಿಯ ಬೇಸಿಗೆ
ಬೆದರಿ ಬೆಪ್ಪನೆ ಬಾಯ್ಬಿಡೆ
ಗುಡುಗ ಡಂಗುರ ಹೊಯ್ಸಿ ಬಿರುದಿನ
ಹೆದೆಯನೇರಿಸಿ ಸಾರುತ
ಗುಡಿಯ ಕಟ್ಟುತ ಪೊಡವಿಜಡರಿಗೆ ಅದಟದುಬ್ಬಟೆ ತೋರಿದೆ
೧೧
ಹೊಸದು ಹೊಗರಿನ ಹೊಗೆಯು ಗಗನದೆ
ದೆಸೆದೆಸೆಗೆ ಮುಸುಗುತ್ತಿದೆ
ದೆಸೆಯು ಬಳಸುತ ಕೆದರ್ಗಿಡಿಗಳು
ಮಸಗಿ ಮುಂಬರಿಯುತ್ತಿವೆ
ಬಿಸಿಲು ಕಾಲದ ದೊರೆಯ ಬಂಧಿಸಿ ಚಿತೆಯನೇರಿಸಿ ಸುಡುತಿದೆ
೧೨
ಸಿಡಿಲು ಮಡಲಲಿ ಬೆಳಗಿ ಎಲಬನು
ಇಳೆಯ ಜೀವಿಗೆ ತೋರಿದೆ
ಕಡೆಗೆ ಕನಿಕರ ಸೊದೆಯು ಸೂಸಿರೆ
ಮಂಗಳಾಂಗಿಯ ಗಂಗೆಯ
ತಿಳಿಯ ನೀರೊಳು ತೊಳೆದು ತೇಲಿಸಿ ಅಳಲಶ್ರಾದ್ಧವೊಡರ್ಚಿದೆ
೧೩
ನೋಡ ನೋಡದೊ ಒಂದು ನಿಟ್ಟಿಗೆ
ಕರಿಯ ಕಪ್ಪನೆ ಸಾರಿಸಿ
ದಿಶೆಯ ಮೇರೆಯ ವಸುಧೆ ಮೇರೆಯ
ಮುಗಿಲ ಮೇರೆಯ ಮುದುಗಿಸಿ
ತಿಮಿರ ಸಾಯಕದೂರ್ಮಿ ಮಾಲೆಯ ಹೊರಳಿಯೇರುತ ಬರುತಿದೆ
೧೪
ಪಗಲು ರಾತ್ರಿಯ ಯುಗಲ ನೋಡುವ
ಪಗಲ ಕಂಡೆನು ಜನ್ಮದೆ
ಪಗಲಿನಾಣ್ಮನು ಪಗೆಯ ಪರಿದನೊ
ಯುಗವು ಮುಗಿಯಿತೊ ಬೆಳಕಿನ
ಜೋಡಿಯಾಟದ ರೂಢಿ ಪಡೆದಿಹ ಪೊಡವಿಯಾಟವು ಚೋದ್ಯವೆ !
೧೫
ಹಾಯಬಿಟ್ಟಿಹರೇನೊ ಹಡಗಿನ
ಪಡೆಯು ಬೇಗನೆ ಬರುತಿದೆ
ಬಿಳಿಯ ಬಾನಿನ ಕಡಲ ತಡಿಯಲಿ
ಮೊರೆದು ಹಾರುವ ತೆರೆಯನು
ಏರಿಯಿಳಿಯುತ ತೇಲಿತೊನೆಯುತ ಮಿಕ್ಕಿ ಮೀರುತ ಬರುತಿದೆ
೧೬
ಕಂಡೆನೊಂದೆಡೆ ಬೆಳ್ಳಿ ಬೆಟ್ಟಕೆ
ಬೆಳ್ಳಿಯೇರಿಸಿ ಬೆಳಗಿದೆ
ತುಂಗಶಿಖರದೆ ಗಂಗೆ ರೂಪದ
ಮಂಗಳಾಂಗಿಯ ಹರಿಸಿದೆ
ಬಿಸಿಲು ಬೆಳಕನು ಕಾಣೆ ಕೋಡೊಳು ಹೊಳೆಯು ಹರಿವುದು ಹೊಸದೆನೆ
೧೭
ನೀಲಿ ಬಣ್ಣದ ಮುಗಿಲ ಮೇಲ್ಪರೆ
ಹಾರಿ ಹೋಯಿತೆ ರಭಸದೆ
ತೇಲಿಯುಲಿಯುವ ಶಕುನಿ ನಿಕರವು
ತೋರದಿರುವದನಂತದೆ
ಚಲುವ ಬೀರಿಸಿ ನವಿಲ ಬಳಗವನೊಲಿಸಿಲಾಸ್ಯದ ಹೊಳೆಸಿದೆ
೧೮
ನೀಲಿಯಂಬರ ತೆರೆಯ ಪೊರೆಯಲಿ
ಬೇರೆ ಬೇರೆಯ ರೂಪವ
ಸಾಲುಗೊಳಿಸುತ ರೂಪಿಸಿರಿಸುತ
ಬಣ್ಣವೇರಿಸಿ ಕುಣಿಸುತ
ಇಳೆಯ ನಾಟಕ ಗೃಹವನೆಸಗುತ ಚಲನ ಚಿತ್ರವ ತೋರಿದೆ
೧೯
ನೋಡದೊಂದೆಡೆ ಸಾರನಾಥದ
ಬುದ್ಧದೇವನ ಸ್ತೂಪವ
ಎದ್ದು ಕಾಣಿಸಿ ಗಗನ ಮುಖದಲಿ
ಸದ್ದು ಮಾಡದೆ ಸಾಗಿಸಿ
ಬುದ್ಧ ದೇವನ ಮಹಿಮೆ ಸಾರಲು ಬದ್ಧ ಕಂಕಣವಾಗಿದೆ
೨೦
ಮಂಜು ಮಂಜಿನ ಗಡ್ಡೆಯೊಡ್ಡನು
ಗೆಂಟಿನೊಂದೆಡೆ ಮಂಡಿಸಿ
ಮುಂಗುಡಿಯ ಬೆಡಗಿಂದೆ ಕಂಗಳ
ಕಂಗೆಡಿಸಿ ಮುಂಬರಿಯುವ
ಮಂಗಳಾಂಗದ ತುಹಿನಗಿರಿಗಳ ಬಂಬಲದೊಳೆಂಬಿಡಿದಿದೆ
೨೧
ಬಯಲೊಳಲೆಯುತ ಭುವನ ದೇವಿಯ
ದಿವ್ಯದರ್ಶನಕೆಳಸುವೆ
ಶರಧಿ ತೀರದೆ ಹಾರಿ ಮೊರೆಯುವ
ತೆರೆಯ ಸಿರಿಯನು ಕಾಣುವೆ
ಬಯಲ ಭೂಮಿಗೆ ಜಲಧಿಯುಡುಪಿನ ಬಣ್ಣ ವಿತ್ತವನಾರೆಲೊ!
೨೨
ಜೋಗು ನೀನಿರೆ ಗೇರುಸೊಪ್ಪೆಯ
ಜೋಗವೇ ಜೋಗೆಂಬರೆ ?
ರಾಗವೇರಿದ ಭೋಗ ಭೂಮಿಯ
ಕೋಗಿಲೆಯ ಕೂಗೆಂಬರೆ ?
ಜಗದ ಜೋಗುಗಳೆಲ್ಲ ಬಾಗಿಸಿ ಬೀಗಿ ತೂಗುತ ತೋರಿರೆ
೨೩
ತಂದೆತಾಯ್ಗಳು ತನಯರೇಳ್ಗೆಯ
ಕಂಡು ಹರುಷದೆಯುಲಿವರು
ಕಡಲಿನಾರ್ಭಟೆ ಒಡೆದು ಕೇಳುವ
ಕೆಳೆಯ ಕಾರಣವೇನಿದೆ
ತಂದೆ ತಾಯ್ಗಳ ಬಂಧು ಭಾವವು ನಿನಗೆ ಸಾಗರಕಿರುವುದೆ ?
೨೪
ಸೂರ್ಯನಾರಾಯಣನ ತೇಜವ
ಸೂರೆಗೊಂಡಿಹೆ ನಭದಲಿ
ವೀರತೇಜೋಮಯನ ರುಚಿರವು
ಸೇರಿತೆತ್ತಲೊ ಕಾಣೆನು
ತಿರುವನೇರಿಸಿ ನೇಸರಿದಿರೊಳು ಬಿರುದು ಬಾವುಲಿ ತೋರುವೆ
೨೫
ಇಳೆಯ ವಲಯವ ಬಳಸಿ ಚಕ್ರದ
ವ್ಯೂಹ ರಚನೆಯ ಗೆಯ್ಯುವೆ
ಅಳವಿಗೊಡುತಿಹ ಪಗಲಿನಾಣ್ಮನ
ಇಳಿಕೆಗೆಯ್ದುರೆ ರಣದಲಿ
ಸೆಳೆದು ಬಂಧಿಸಿ ಸೆರೆಯೊಳಿರಿಸುತಲಿಳೆಗೆ ತೋರುವೆಯಿಣುಕಿಸಿ
೨೬
ತಿರೆಯ ಜೀವನದುಸಿರನುಸುರುವ
ಪರಮ ಮೂರುತಿಯಿನನನು
ಸೆರೆಯ ಸರಪಣಿ ಕುಣಿಕೆ ಮಣಿಯಲಿ
ಕುಣಿಸಿ ನೃತ್ಯವನಾಡುವ
ಪರಮ ಪೌರುಷ ದುರುಬತೋರುವ ಸಿರಿಯ ಜೀವನ ಯಾವುದೊ!
೨೭
ಆರು ನೀನೆಲೆ ಪೇಳು ನಿನ್ನಯ
ತಾಣವೆಲ್ಲವ ವಿವರದೆ
ಕೇಳಿ ತಿಳಿಯದ ಕಂಡು ಕಾಣದ
ವೀರ ತನಿರಸಸುಧೆಯಲಿ
ಮಲೆತು ನಿಂತಿಹೆ ಮೆರೆದು ನಿಂತಿಹೆ ಮೀರಿ ನಿಂತಿಹೆ ಜಗದಲಿ
೨೮
ಅರಿದೆನರಿದೆನು ನೋಡದೊಡೆಯನ
ಬರುವಳೆಯ ಭೀಕರಮಿದೊ!
ಧರೆಯ ಸಲಹುವ ಬಿರುದ ತಳೆದಿಹ
ಕರುಣಶಾಲಿಯ ಕೆರಳುವ
ಪರಿಯ ಪರಿಕಿಸೆ ಪರಮ ಪುಣ್ಯರ ಪರಮಧಾರ್ಮಿಕತನವಿದೊ!!
೨೯
ಇನನ ಕಿರಣದ ಕರುಣೆಯಿಂದಲಿ
ಅಮರಸರಣಿಯೊಳೇರುವೆ
ಕವನ ಸೃಷ್ಟಿಯ ದಿವಿಜ ಸೃಷ್ಟಿಯ
ವಿಮಲ ನಿಲಯದೆ ಮಲಗುವೆ
ವಿವಿಧ ಬಣ್ಣವ ಬಾನಿಗೇರಿಸಿ ಭುವನ ಮೋಹನವಾಗಿಹೆ
೩೦
ಜನಕನೆಂಬುದ ಗಣನೆಗೆಯ್ಯುತ
ಮಣಿದು ಕಾಣಿಕೆಯಿತ್ತೆಯ
ದಿನಪ ಕೆಡೆನುಡಿಗೆಯ್ಯೆ ತನಯನ
ತನಯತನವನು ನಿಂದಿಸಿ
ಕನಲಿ ಕೊಳುಗುಳದಲ್ಲಿ ತೋಳನು ತೋರಿ ಬಲ್ಸೆರೆಗೆಯ್ದೆಯ
೩೧
ತಂದೆ ತನಯರ ಬಿಂಕದಂಕದ
ಸಂದ ಶೌರ್ಯವ ಧರೆಯಲಿ
ನಿಂದು ನೋಡುವ ಸಂಧಿ ದೊರೆಯಲು
ಮಂದ ಮಾರುತ ಬರುತಲಿ
ಸಂಧಿ ಮಾಡಿಸಿ ಸೆರೆಯ ಬಿಡಿಸಿದ ಚಂದದಿಂಪನು ಕಂಡೆನು
೩೨
ಭಾನು ಪಡುವಣ ಕಡಲ ತಡಿಯನು
ಸಾರಿ ಸೀಮೆಯ ಸೇರಲು
ಜನಕನಗಲಿಕೆಯಿಂದಯೊಗೆದಿಹ
ಅಳುವು ಸೀಮೆಯ ಮೀರುತೆ
ಮನವನೊಳಕೊಳ ಕೆಂಪಿನೊಪ್ಪಿನ ಮುಗಿಲ ಮೊತ್ತದೆ ತೋರುವೆ
೩೩
ಕಾಡನಾಡೊಳು ಬಿಸಿಯ ಬಿಸಿಲೊಳು
ಕಾಡ ಮಿಗಗಳು ನೀರನು
ಬೇಡಿ ಕಾಣದ ನಿಶಿಯ ಸಮಯದೆ
ಹಳ್ಳ ಕೊಳ್ಳವ ಸೇರುತ
ಕುಡಿಯೆ ನೀರನು ಕ್ರೂರ ಬೇಟಿಗೆ ಹೊಡೆದು ಮಲಗಿಸಲವುಗಳ
೩೪
ಕೊಲುವ ಬೇಟಿಗನಡಗಿ ನಿಂತಿರೆ
ಹಳ್ಳಕೊಳ್ಳದ ಬಳಿಯಲಿ
ಬಳಸಿ ಸುಳಿಯೆವು ತಿಳಿಯ ನೀರಿನ
ಬಳಗವೆಲ್ಲವನೊಲ್ಲೆವು
ಎಲವೊ ದೇವನೆ ತ್ರಾಹಿಯೆನುತಿರೆ ಮೇಘರೂಪದೆ ಬಂದೆಯ
೩೫
ಒಸೆದು ಆಗಸ ಸೀಮೆ ತಾಗುತ
ಬಿಳಿಯ ಬೆಳಕನು ಬೀರುತ
ಒಸಗೆವರೆಯನು ಮಸಗಿ ಸಾರುತ
ಬೆಳ್ಳ ಹಕ್ಕಿಯ ಬಳಗವು
ವಸುಧೆ ದಿಶೆದಿಶೆ ಬೆಸಸಿ ಬರುತಿದೆ ವಿಷಯ ಪೊಸತೆನೆ ಜಗದಲಿ
೩೬
ತಾರೆ ಬಹು ದೂರದಲಿ ಮಿಟುಕಿಸಿ
ಮಿನುಗಿ ಮೇದಿನಿ ಕಾಣ್ದಿರೆ
ಕೊರಗಿ ಕಾದಂಬಿನಿಯ ಮೊರೆಯಿಡೆ
ಕರುಣ ಶಾಲಿಯು ನಿಶೆಯೊಳು
ಧರಣಿಗಟ್ಟಿದ ಅರಿಲಕುಳಮೆನೆ ಮಿಂಚುಹುಳಗಳು ಮಿಂಚಿವೆ
೩೭
ಧರೆಯ ಪಾವನ ಪುರುಷ ಬರುತಿರೆ
ಪುರಜನರು ಮೆರೆದಾಡುತ
ಹಿರಿದು ಪೇಡೆಯನಿರದೆ ಕೊಡುವೊಲು
ಎಳೆಯ ಮಕ್ಕಳ ಬಳಗಕೆ
ಆಲಿವರಲಿನ ಸಾಲ ಸೂರೆಯ ತಿರೆಯ ತಳದಲ್ಲಿ ತೂರಿದೆ
೩೮
ನೀರನೆಲೆಯಾಗಿರುವ ಸಾಗರ
ಜಗದ ವಲಯವ ಬಳಸುತ
ಪಲವು ಕಾಲವು ಸಲಹಿ ನಿಂತಿರೆ
ಇಳೆಯ ಮಕ್ಕಳ ಕಾಣಲು
ನಭವನೇರುತ ನಲಿದು ನೋಳ್ಪುದೊ ಸೂಸಿ ಮುತ್ತಿನ ಸೇಸೆಯ
೩೯
ಗಾಳಿನೀರಿನ ಬಳಕೆ ಬಿಟ್ಟರೆ
ಜೀವಕೋಟಿಯು ಬಾಳ್ವುದೆ
ಬಾಳಿ ಬದುಕುವ ಬಲುಮೆಯಾಂತಿಹ
ಗಾಳಿ ನೀರನು ಬೆರೆತಿಹ
ಜೀವ ಕೋಟಿಯ ಜೀವವೆನಿಸುವ ಕಾಲಕಾಲನು ನೀನೆಲೊ!
೪೦
ನಭದ ಮುಖದಲಿ ವಾಯುವುದಯಿಸೆ
ಅಗ್ನಿಯೊಗೆಯಿತು ಅನಿಲದ
ಅಗ್ನಿಯಿಂದಲಿ ಜಲವು ಜನಿಸಿತು
ಜಲದೆ ಪೃಥುವಿಯು ಬಂದುದು
ಇನಿತು ಮಾತನು ಜನಕೆ ಬಣ್ಣಿಸಿ ಕುಣಿವ ಜೀವನ ನೀನಲೆ!
೪೧
ಕೈಗಳಿಲ್ಲದೆ ಕೆಲಸಗೆಯ್ಯುವ
ಪಾದವಿಲ್ಲದೆ ಪೋಗುವ
ನಯನವಿಲ್ಲದೆ ನಾಡೆ ನೋಡುವ
ಕಿವಿಗಳಿಲ್ಲದೆ ಕೇಳುವ
ಹೃದಯವಿಲ್ಲದೆ ಜಗವನರಿಯುವ ಪರಮ ಪುರುಷನು ನೀನಲೆ!
೪೨
ವಿವಿಧ ದೇಸೆಯ ರೂಪ ತೋರಿಸಿ
ಇರದೆ ನಭದಲಿ ಮೆರಯಿಸಿ
ವಿವಿಧ ಜೀವಿಯ ಮೇಣು ರಚಯಿಸಿ
ನೀರನೊಂದನೆ ಕರೆಯಿಸಿ
ವಿವಿಧ ಸೃಷ್ಟಿಯೊಳಡಕಮೊಂದಿದೆ ಎಂಬ ತತ್ವವ ತಿಳುಪುವೆ
೪೩
ದಿವಿಜ ಸದನವ ಭೋಗಿ ಸದನವ
ಮನುಜ ಸದನವದೆನ್ನದೆ
ತವಕಗೊಳ್ಳುತ ಹೊಲಬುಗಾಣುತ
ವಿವಿಧ ಮಾರ್ಗದೆ ತಿರುಗುವೆ
ಸಾಮ್ಯ ಸೃಷ್ಟಿಯೊಳಿಳೆಯ ಸಲಹುತ ಕಾವ್ಯವಸ್ತುವ ಕೊಡುತಿಹೆ
೪೪
ಕರಿಯ ನೀಲಿಯ ಬಿಳಿಯ ಬೂದಿಯ
ಗಾಡಿವಡೆದಿಹ ಮೋಡವು
ಪಾರು ಪರಿಯೊಳು ಹಾರಿ ಹರಿಯುತ
ಒಡನೆಯೆಡೆಯೊಡನಾಡಿಗೆ
ಕರೆದು ಕೊಡುತಲಿ ಸರಿದು ಬಿಡುತಲಿ ಸಾಮ್ಯ ಸೃಷ್ಟಿಯ ತೋರ್ಪುದು
೪೫
ತರಳ ತನದಲಿ ತಣಿಸಿ ಕುಣಿಸಿದೆ
ಹರೆಯದಲ್ಲಿಯು ಹರಸಿದೆ
ಹರೆಯು ಹೋಗಲು ನರೆಯು ಹಾಯಲು
ಹುರುಪಿನಿಂದಲಿ ಹಾಡಿಸಿ
ಪರಮ ಪುರುಷನ ಕರುಣ ತೋರುವ ಸಿರಿಯ ಜೀವನ ನೀನಲೆ!
೪೬
ಕಾಲಕಾಲದೆ ನೋಡಿ ಬಂದೆನು
ರೂಪರೂಪಾಂತರವನು
ಜೀವರಾಶಿಯ ಕೋಶ ತೋರಲು
ಜೀವ ಕೋಟಿಯ ನಡೆಯಲಿ
ಕವಿಯ ಕಲ್ಪನೆ ಮೀರಿ ಕಾಲದ ಭೇದಕೊಳಪಡದಿರ
೪೭
ಮುಂಬರಿವ ಮೇಘಂಗಳೆಸಕದೆ
ಇಂಬಿಡದ ಮೇಲಾಟದೆ
ಬೆಂಬಿಡದೆ ಕೂರ್ಗಣೆಯ ಕೆಂಗಿಡಿ
ತನಿಗೆದರ ತೂರುತ್ತಿರೆ
ಸಂಗರದ ಸಾಹಸವು ಸಲ್ಲದು ಸಲಹೆ ಲೋಕವ ತಿಳಿದೆಯ
೪೮
ಗುಡುಗು ಸಿಡಿಲಿನ ತೂರು ಗಿಡಿಗಳ
ಬಿಡಯ ನೆಟ್ಟನೆ ಬಿಟ್ಟಿಹೆ
ಪಡಿಯ ನೀಡಲು ಜೀವಕೋಟಿಗೆ
ಗಾಡಿಯೊಳು ನೀನೋಡುವೆ
ನೀಡಿ ನೋಡಲು ಶಾಂತಿ ಸಾಮ್ರಾಜ್ಯವನು ವಸುಧೆಗೆ ಬಯಸುವೆ
೪೯
ಇರುವೆ ಎಂಬತು ಕೋಟಿ ಜೀವಿಗೆ
ಪಡಿಯನಳೆಯುವ ಭಾರವು
ಪೊಡವಿಯೊಡೆಯಗೆ ಕೂಡಿಕೊಂಡಿರೆ
ಬಿಡದೆ ಪಡಿಯನು ನೀಡುತ
ಪೊಡವಿ ಜೀವಿಗಳೊಡಲ ಪೊರೆಯುವ ದೇವ ದೂತನು ನೀನೆಲೊ!
೫೦
ಸಾಮ್ಯ ಸಾಮ್ರಾಜ್ಯಗಳ ಸುಖವದು
ಸಹಜ ಸಿಗದಿದೆ ಬಡವಗೆ
ಕಾಮ್ಯವಾಗಿಹ ವಸ್ತು ವಿಸ್ತರ
ಕವಿಯ ಕಲ್ಪನೆಯಾಗಿದೆ
ಸಮರ ಸುಳಿಯೊಳು ಸೌಮ್ಯ ಮಾರ್ಗವನರಸಿ ಕಾಣದೆ ಕೊರಗುವೆ
೫೧
ಕೊಟ್ಟ ಕಬಳವ ಕಸಿದುಕೊಳ್ಳುವ
ಬಿಟ್ಟಿಯೊಡೆಯರ ಬಳಗವು
ಮೆಟ್ಟಿ ಬಡವರ ರಕುತ ಹೀರುತ
ಸೃಷ್ಟಿಯೊಟ್ಟಜೆಗೆಡಿಸಲು
ಕಷ್ಟವೆಂಬುದು ಕ್ಷಮೆಗೆ ಸಹಜವು ಬಿಡಿಸ ಬೇಡವೆ ನೀನೆಲೊ?
೫೨
ಕವನ ಸೃಷ್ಟಿಯ ಕುಶಲ ಕಲೆಯನು
ಕಂಗಳಿಂಬೆನೆ ಮೀರಿಸಿ
ವಸುಧೆಯೆಲ್ಲವ ಹಸುರು ಮುರಿಯಿಸಿ
ಪಸವ ನೇರಿಸಿ ಮೆರಯಿಸಿ
ವಸುಮತಿಯ ಜೀವಾಳುತನವನು ನಶಿಸದಂದದೆ ಪೊರೆಯುವೆ
೫೩
ಅಡವಿ ಮಲ್ಲಿಗೆ ಗಿಡಗಳಿರದಲೆ
ಕುಡಿಗೊನರ ನಿಡುಮಡಲಲಿ
ಬಿಡದೆ ಹಿಗ್ಗುತ ವಿವಿಧ ಸುಗ್ಗಿಯ
ಕುಡಿಯ ಮೊಗ್ಗೆಯ ಬಿಡುತಲಿ
ಅಡವಿ ಸೀಮೆಯು ಕರವ ಸೇರಿಸಿ ಬಿರಿದ ಪುಷ್ಪದೆ ಪೊಗಳಿದೆ
೫೪
ದುಂಡು ಮಲ್ಲಿಗೆ ಚಂಡು ಮಲ್ಲಿಗೆ
ಜಾಜಿ ಮಲ್ಲಿಗೆ ಹೂಗಳ
ಕೊಂಡು ಕೈಯೊಳು ದಂಡೆಗಟ್ಟುವ
ಹೊಲದ ಬಾಲೆಯ ಬಯಲಲಿ
ಬಂಡ ನೀಂಟಿದ ಭ್ರಮರದಂದದೆ ಹೊಂದಿಹೊಗಿಸಿಹೆ ಹೂವೊಳು
೫೫
ಎಲ್ಲಿ ನೋಡಿದಡಲ್ಲಿ ಹೊಳೆಗಳ
ಸಲ್ಲಲಿತ ಜಲ ರಾಶಿಯ
ಎಲ್ಲಿ ನೋಡಿದರಲ್ಲಿ ಹೊಳಪಿನ
ಹಸುರು ಹೊಲಗಳ ಪ್ರಸರವ
ಎಲ್ಲಿ ನೋಡಿದರಲ್ಲಿ ತಾವರೆ ತಳಿಯ ಬೆಳಯಿಸಿ ಮೆರಸಿಹೆ
೫೬
ಪೊನಲ ಪೂರವ ನೇರಿಹಾರುತ
ಹಾರಿ ಬೆರೆಯುತ ನೀರೊಳು
ಸೆಳೆಯ ಮಿಂಚಿನ ಚಳಕ ಕಾಣಿಸಿ
ಹೊಳಪ ತೋರಿಸಿ ಮೆರೆಯುತ
ಹರಿವ ಹಳ್ಳದ ಸೆಳವ ಸೆಳೆಯುವ ಶಫರಿ ಸಂಚಯ ಮೆರಸಿಹೆ
೫೭
ಬಾರೊ ಬಾರೆಲೊ ಬೇಗ ಮೋಡವೆ
ಮಳೆಯ ತಾರೆಲೊ ಎನ್ನುತೆ
ಬಾಲಕಾಳಿಯು ಕೇಳಿ ಕಣದಲಿ
ನಲಿದು ನೆಗೆನೆಗೆದುಲಿಯುತ
ಬಲದ ಕಣಗಳು ನಿಂತ ನೆಲೆಯಲಿ ನಗುತ ಮೈಯನ್ನು ತೊಳೆವುದು
೫೮
ಮುದದಿ ಹನಿಗಳ ನೀನು ನೀಡಲು
ನಿನ್ನನಿಟ್ಟಿಸಿ ನೆಗೆವರು
ಸದನ ಸೇರುತಲಿಣುಕಿ ನೋಡುತ
ಮೂದಲಿಸಿ ತಾ ಕರೆವರು
ಬದಿಗೆ ಸೇರಿದ ನಿನ್ನ ಕಾಣುತಲಿರದೆ ನೀರೊಳು ನಲಿವರು
೫೯
ಪ್ರಕೃತಿ ದೇವಿಯ ಮಕ್ಕಳೆಲ್ಲರು
ಪ್ರಕೃತಿ ಭಾವದೊಳೆಸದಿರೆ
ಸುಕೃತ ಪೂರ್ವಕ ಪಡೆದ ಜನನಿಯು
ಇನಿದು ದನಿಯೊಳು ಬೆದರಿಸೆ
ವಿಕೃತಿ ಹೊಂದಿದ ಬಾಲಮುಖವನು ಮುದ್ದಿ ತಣಿಪುದ ತೋರುವ
೬೦
ಸೇವ್ಯ ಸೇವಕ ಭಾವನಳಿಸಿದ
ದಿವ್ಯ ಮೂರುತಿ ನಿನ್ನಯ
ಕಾವ್ಯಮಯ ಸಂಸಾರ ಸಾಗರ
ದೃಶ್ಯ ನಾಟಕ ದೆಡೆಯಲಿ
ದಿವ್ಯ ದರ್ಶನ ದೃಶ್ಯ ತೋರಿದೆ ಕಾವ್ಯಮಯ ಸೀಮಾಂತದೆ
೬೧
ಸಾಗರಂಗಳ ವೇಗ ಬಾಗಿಸಿ
ಸಾಗಿ ತನುವನು ನೀಗಿಸಿ
ಜಗದ ಜೀವನದಾಗುಹೋಗನು
ತಿರೆಗೆ ತ್ಯಾಗದೆ ತೋರಿಸಿ
ಸಾಗಿ ಹೋಗುವ ಬಗೆಯ ಕಲಿಸಿದೆ ತಿರೆಯ ತಿರುಳನು ತಿಳಿಸಿದೆ!
*****