ಇವತ್ತಿನ ಜೀವನ ಬಹಳ ಸಂಕೀರ್‍ಣವಾಗಿದೆ. ಒಂಥರಾ ಬಿಡಿಸಲಾಗದ ಗಂಟುಗಳು ಬಿದ್ದ ಹಾಗೆ. ನಿರಾಳತೆ ಎನ್ನುವುದು ಇಲ್ಲವೇ ಇಲ್ಲ. ಒತ್ತಡ, ಒತ್ತಡ ಎಲ್ಲಾ ಕಡೆಯೂ ಒತ್ತಡ. ಮನೆಯಲ್ಲಿದ್ದರೆ ಒತ್ತಡ, ರಸ್ತೆಗಿಳಿದರೆ ಒತ್ತಡ. ಪ್ರೀತಿಯಲ್ಲಿ ಒತ್ತಡ, ಕೆಲಸದಲ್ಲಿ ಒತ್ತಡ. ದಿನದ ಕೊನೆಯಲ್ಲಿ ಎಲ್ಲಾ ಖಾಲಿಯಾದ ಅನುಭವ, ಯಾರಿಗೂ ಯಾವುದಕ್ಕೂ ಪುರುಸೊತ್ತೆಂಬುದೇ ಇಲ್ಲ. ಸಮಯದ್ದೂ ಅಭಾವ. ಈ ಪುರುಸೊತ್ತಿಲ್ಲದ ಜೀವನದಿಂದಲೇ ಮಾನಸಿಕ ಒತ್ತಡಗಳು ಜಾಸ್ತಿಯಾಗುತ್ತಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇವತ್ತಿನ ಒತ್ತಡಮಯ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಮಾನಸಿಕ ಅಸ್ಥಿರತೆಗೆ ಒಳಗಾಗುತ್ತಲೇ ಇರುವುದರಿಂದ ಮೂವತ್ತೈದು, ನಲ್ವತ್ತು ವರ್‍ಷಗಳಾಗಬೇಕಾದರೆ ಮನಸ್ಸಿನ ನೆಮ್ಮದಿ, ದೇಹದ ಆರೋಗ್ಯ ಎಲ್ಲವನ್ನೂ ಕಳಕೊಂಡು ಜೀವಿಸುವ ಆಸ್ಥೆಯನ್ನೂ ಕಳಕೊಂಡು ಬಿಡುತ್ತಾರೆ ಎನ್ನುವುದು ಆತಂಕದ ಸಂಗತಿ.
ಹೀಗೆ ಒತ್ತಡದಲ್ಲಿ ಕರಗಿ ಹೋಗುತ್ತಿರುವವರನ್ನು ನೋಡುವಾಗ ತಮ್ಮ ಇಳಿವಯಸ್ಸಿನಲ್ಲೂ ನಗುನಗುತ್ತಾ ಜೀವಿಸುತ್ತಿರುವ ಹಿರಿಯರು ನೆನಪಾಗುತ್ತಾರೆ. ಅವರಿಗೆ ಈಗಿನವರಷ್ಟು ಆರ್‍ಥಿಕ ಸಮೃದ್ಧಿ ಇರಲಿಲ್ಲ. ಸವಲತ್ತುಗಳಿರಲಿಲ್ಲ. ಅನುಕೂಲತೆಗಳಿರಲಿಲ್ಲ. ಸಂಸಾರದ ಹೊರೆಗಳು ಬಹಳಷ್ಟಿದ್ದುವು. ಆದರೆ ಇದ್ದುದರಲ್ಲಿಯೇ ತೃಪ್ತಿ ಪಡುವ, ಚಿಕ್ಕಚಿಕ್ಕ ಸಂಗತಿಗಳಲ್ಲೂ ಸಂತೋಷ ಹುಡುಕುವ ಮನೋಭಾವವಿತ್ತು. ಓದು, ಹಾಡು, ಹಸೆ, ರಂಗೋಲಿ, ಹೊಲಿಗೆ, ಅಡುಗೆ ಹೀಗೆ ಮನಸ್ಸಿಗೆ ಮುದನೀಡುವ ಹಲವಾರು ಹವ್ಯಾಸಗಳಿದ್ದುವು. ಮೊಮ್ಮಕ್ಕಳೊಡನೆ ಮಕ್ಕಳಾಗಿ ಬೆರೆಯುವ ಜೀವನ ಪ್ರೀತಿ ಇತ್ತು. ಮಕ್ಕಳಲ್ಲಿ ಮೊಮ್ಮಕ್ಕಳಲ್ಲಿ ಸಂತೋಷ ಕಾಣುವ ಮನಃಸ್ಥಿತಿ ಇತ್ತು.
ಈಗಿನವರಿಗೆ ಆರ್‍ಥಿಕ ಸಮೃದ್ಧಿಯಿದೆ. ಬೇಕಾದ ಎಲ್ಲಾ ಸವಲತ್ತುಗಳಿವೆ. ಆದರೂ ಅವರು ಅಸುಖಿಗಳು. ಸಂಸಾರದಲ್ಲೂ ಆಸಕ್ತಿಯಿಲ್ಲ. ಸುತ್ತಮುತ್ತಲ ಸಮಾಜದಲ್ಲೂ ಆಸಕ್ತಿಯಿಲ್ಲ. ಒಟ್ಟಿನಲ್ಲಿ ಒಂಟಿತನ. ಪ್ರತಿ ನಿಮಿಷವೂ ಒತ್ತಡದಲ್ಲೇ ಜೀವಿಸುತ್ತಿರುವುದು ಇದಕ್ಕೆ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಇಂತಹ ಒತ್ತಡಗಳಿಂದ ಹೊರಬರಬೇಕಾದರೆ ನಮ್ಮ ಒಳಗಿನ ಭಾವನೆಗಳನ್ನು ಹೊರಗೆಡಹುವ ಒಂದು ಔಟ್‌ಲೆಟ್ ಬೇಕು. ಈ ಹೊರಹರಿವು ಯಾವುದಾದರೂ ಒಂದು ಸೃಜನಶೀಲ ಅಭಿವ್ಯಕ್ತಿ ಮಾಧ್ಯಮದಲ್ಲಿ ತೊಡಗಿಸಿಕೊಂಡಾಗ ದೊರೆಯುತ್ತದೆ. ಅದಕ್ಕೇ ಹೇಳುವುದು ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿಗಳನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರಿಗೂ ಒಂದಾದರೂ ಸೃಜನಶೀಲ ಹವ್ಯಾಸ ಇರಲೇ ಬೇಕು ಎಂದು. ಜೀವನದ ಎಲ್ಲ ಜಂಜಾಟಗಳನ್ನು ಮರೆಸುವ ಶಕ್ತಿ ಇಂತಹ ಹವ್ಯಾಸಗಳಿಗೆ ಇರುತ್ತದೆ. ಓದುವ ಹವ್ಯಾಸದಿಂದ ಹಿಡಿದು ಆಡುವ, ಹಾಡುವ, ಹಾಡು ಕೇಳುವ, ತಿರುಗಾಡುವ, ಬರೆಯುವ, ಚಿತ್ರ ಬಿಡಿಸುವ, ಕುಣಿಯುವ, ಯಾವುದಾದರೂ ಸರಿ ಒಂದು ಹವ್ಯಾಸವನ್ನು ಬೆಳೆಸಿ ಕೊಂಡರೆ ನೆಮ್ಮದಿ ಸಿಗುವುದರ ಜೊತೆಗೆ ಬೇರೆಲ್ಲಾ ಒತ್ತಡಗಳಿಂದಲೂ ಹೊರಬರುವುದು ಸಾಧ್ಯ. ಹಣ ಮಾಡುವ ಕೆಲಸದ ಜೊತೆಗೆ ಉತ್ತಮ ಯೋಚನೆಗಳನ್ನು ಹುಟ್ಟುಹಾಕುವ ಹವ್ಯಾಸಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಮ್ಮ ಮನಸ್ಸಿಗೊಪ್ಪುವ ಒಂದೋ ಎರಡೋ ಹವ್ಯಾಸಗಳನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳುವುದು ಒಳ್ಳೆಯದು.
ಯಾವುದೇ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಒಂದು ಯೋಗಾಭ್ಯಾಸದಂತೆ. ಸತತ ಅಭ್ಯಾಸ, ನಿಷ್ಠಾವಂತ ಪ್ರಯತ್ನ, ಸಮಯಪ್ರಜ್ಞೆ ಆತ್ಮವಿಶ್ವಾಸ ಇಲ್ಲೂ ಬೇಕಾಗುತ್ತದೆ. ಪ್ರತಿಯೊಂದು ಸೃಜನಶೀಲ ಅಭಿವ್ಯಕ್ತಿಯ ಹಿಂದೆ ಮನಸ್ಸಿಗೆ ಮುದ ನೀಡುವ ಕಲಾವಂತಿಕೆ ಇದೆ. ಎಲ್ಲವನ್ನೂ ಮರೆಸುವ ಶಕ್ತಿ ಇದೆ. ಅಭಿವ್ಯಕ್ತಿಯಲ್ಲಿರುವ ಭಾವಶುದ್ಧತೆ, ತನ್ಮಯತೆ ಆ ಕಲಾವಂತಿಕೆಯನ್ನು ಶ್ರೀಮಂತಗೊಳಿಸುತ್ತದೆ. ಯಾವುದೇ ಕಲಾಮಾಧ್ಯಮ ಮನುಷ್ಯನ ಒಳ್ಳೆಯತನವನ್ನು ಸಂಸ್ಕಾರವನ್ನು ಅಗೆದು ತೆಗೆಯುತ್ತದೆ. ನೋವನ್ನು ಹೊರಗೆ ದಬ್ಬುತ್ತದೆ. ಆಗ ಎಲ್ಲಾ ನಕಾರತ್ಮಕ ಭಾವಗಳು ಇಲ್ಲವಾಗಿ ಒತ್ತಡಗಳು ಕಡಿಮೆಯಾಗುತ್ತವೆ. ಎಷ್ಟೇ ಪುರುಸೊತ್ತಿಲ್ಲ ಎಂದು ಅನಿಸಿದರೂ ಸ್ವಲ್ಪ ಪುರುಸೊತ್ತು ಮಾಡಿಕೊಂಡು ಒತ್ತಡವೆನಿಸಿದ ಸಂದರ್‍ಭಗಳಲ್ಲಿ ಇಂತಹ ಯಾವುದಾದರೂ ಹವ್ಯಾಸದಲ್ಲಿ ತೊಡಗಿಸಿ ಕೊಂಡರೆ ಜೀವನದಲ್ಲಿ ಆಸಕ್ತಿ ಹುಟ್ಟುವುದು ಸಾಧ್ಯ. ಹುರುಪಿನಿಂದ ಮುಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಸುಲಭ. ಇದಕ್ಕೆ ಯಾವ ಕೌನ್ಸಿಲಿಂಗ್ ಬೇಡ ಯಾವ ಡಾಕ್ಟರೂ ಬೇಡ. ಹವ್ಯಾಸವನ್ನು ಬೆಳೆಸಿಕೊಳ್ಳುವ ಮನಸ್ಸು ಮತ್ತು ವ್ಯವಧಾನವಿದ್ದರೆ ಸಾಕು.
ನಮ್ಮ ಜೀವನದಲ್ಲಿ ತುಂಬಿರುವ ಒತ್ತಡಗಳ ಭಾರವನ್ನು ಜರುಗಿಸಿ ನಾವೇ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಲ್ಲದೆ ಬೇರಾರೂ ಜವಾಬ್ದಾರಿ ಹೊರುವುದಿಲ್ಲ. ಯಾವುದಾದರೂ ಹವ್ಯಾಸವನ್ನು ಬೆಳೆಸಿಕೊಂಡು ಜೀವನದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಕ್ಷೇಮವಲ್ಲವೇ?
*****
(ಮಂತಣಿ)