ತುಂಟಾಟದ ಕವಿ ಎಚ್‌.ಎಸ್‌.ಬಿಳಿಗಿರಿ

ತುಂಟಾಟದ ಕವಿ ಎಚ್‌.ಎಸ್‌.ಬಿಳಿಗಿರಿ

ಅತಿಬುದ್ಧಿವಂತರು ಕವಿಯಾದರೆ ಏನಾಗಬಹುದು? ಅವರು ಎಚ್‌.ಎಸ್‌. ಬಿಳಿಗಿರಿಯಾಗಬಹುದು! ಇದು ಖಂಡಿತಾ ಸುಳ್ಳಲ್ಲ. ಬುದ್ಧಿವಂತಿಕೆಯ ತಾಕತ್ತು ಅವರನ್ನು ಮೇಲಕ್ಕೆತ್ತುವಂತೆ ತೋರದೆ ಅವರು ಸೈಡ್‌ಲೈನ್ ಕವಿಗಳಾಗಿ ಉಳಿದು ಬಿಡುವ ಸಂಭವವೇ ಹೆಚ್ಚೆಂದು ಕಾಣುತ್ತದೆ. ಎ.ಕೆ.ರಾಮಾನುಜನ್, ವೈನ್ಕೆ ಮುಂತಾದವರ ವಿಟ್ ಭರಿತ ಕಾವ್ಯ ಪರಿಚಯ ಇರುವವರಿಗೆ ಅವರಿಗಿಂತ ಸ್ವಲ್ಪ ಹಿಂದಿನವರಾದ ಬಿಳಿಗಿರಿ ಅಜ್ಞಾತರಂತೆ ಉಳಿದಿರುತ್ತಾರೆ. ಈ ತರಹದ ಕವಿಗಳು ಮೇಜರ್ ಕವಿಗಳೆಂದು ಹೆಸರಾಗುವುದಿಲ್ಲವಾದರೂ ಮೇಜರ್ ಕವಿಗಳ ಉಬ್ಬಿದ ವ್ಯಕ್ತಿತ್ವಕ್ಕೆ ಸೂಜಿಮೊನೆ ತಾಗಿಸುವಂತಹ ಸಾಲುಗಳನ್ನು ಬರೆಯುತ್ತಾರೆ. ಬಿಳಿಗಿರಿ ಯಾರ ಮೇಲೆಯೂ ನಂಜಿಲ್ಲದೆ ಬರೆದವರು. ಆದರೆ ಸಾಧ್ಯವಾದಾಗ ತಮ್ಮ ಸಮಕಾಲೀನ ಸಾಹಿತ್ಯ ಕ್ರಿಯೆಗಳನ್ನೂ ಅದರ ನಿರ್‍ಮಾತೃಗಳನ್ನೂ ಚುಚ್ಚದೆ ಬಿಡರು. ಹಾಗೆಂದು ಇವರು ವಿಡಂಬನೆಯ ಕವಿಯಲ್ಲ. ಲೋಕಪ್ರೀತಿ ಎನ್ನುವುದು ತುಂಬಿ ತುಳುಕುತ್ತಿದ್ದ, ವಯಸ್ಸು ಲೆಕ್ಕಿಸದೆ ಹೆಣ್ಣು ಎಂದರೆ ಮೋಹಿಸುವ ಜೀವನಪ್ರೀತಿಯುಳ್ಳವರು. ಬಿಳಿಗಿರಿ ತಮ್ಮನ್ನು ತಾವು ಬಣ್ಣಿಸಿಕೊಂಡಂತೆ; ‘ಬೀ ಐ ಎಲ್ ಐ ಜೀ ಐ ಆರೈ- ಶಿವನಿಗೆ ಮೂರೈ! ನನಗೋ ನಾಲ್ಕೈ!.. ..ನಾನು ಮಣ್ಣಿನ ಭಕ್ತ!/ ಆಧ್ಯಾತ್ಮಿಕ ಪರಿಭಾಷಾ ಮುಕ್ತ!’

ಎಚ್.ಎಸ್.ಬಿಳಿಗಿರಿ ಅಸಾಧ್ಯ ಬುದ್ಧಿವಂತರು. ಅಪರೂಪದ ಭಾಷಾತಜ್ಞರು. ಕನ್ನಡ ವ್ಯಾಕರಣದ ಮೂಲತತ್ವಗಳನ್ನು ಅರಿತವರು. ಶಬ್ದಮಣಿದರ್‍ಪಣಕ್ಕೆ ಇವರು ಬರೆದ ಟೀಕೆ ಇಂದಿಗೂ ಅಥೆಂಟಿಕ್. ಇಂಥಾ ಬಿಳಿಗಿರಿ ಪದ್ಯದಲ್ಲಿ ನಿರಾಡಂಬರ. ಶಾಸ್ತ್ರಗಳ ಸೋಗಿಲ್ಲದೆ, ಕವಿಯೆಂಬ ಸೋಗೆಗಳಿಲ್ಲದೆ ಬೆತ್ತಲಿಗರಾಗಿ ನಿಲ್ಲುವುದಕ್ಕೆ ಅವರೆಂದೂ ಹೇಸಲಿಲ್ಲ.

ಬಿಳಿಗಿರಿ ಪದ್ಯಗಳು ಲಯಬದ್ಧ, ಛಂದಸ್ಸಿನ ಪ್ರವೀಣರಾದ ಅವರು ತಾವು ಗದ್ಯದಲ್ಲಿ ಹೇಳಬಹುದಾದ ಅನೇಕ ವಿಚಾರಗಳನ್ನು ಭಾವಗಳನ್ನು ಪದ್ಯದ ಲಯದಲ್ಲಿಯೇ ಹೇಳುತ್ತಾರೆ. ಇದು ಅವರಿಗೆ ಒಲಿದು ಬಂದಿದ್ದು. ಆದರೆ ಅವರ ಕುಚೇಷ್ಟೆ ಬುದ್ಧಿಯನ್ನು ಕಾಪಾಡಲು ಅವರು ಬಳಸುತ್ತಿದ್ದ ಛಂದಸ್ಸು ಮತ್ತು ಲಯಗಳು ನೆರವಿಗೆ ಬರುತ್ತಿದ್ದವು. ಅವರು ಬರೆದ ‘ಸುಭಗಾನೀವೀ’ ಎನ್ನುವ ಪರಮ ಪೋಲಿ ಪದ್ಯವು ಹಳಗನ್ನಡದ ಮುಸುಕನ್ನು ಹಾಕಿಕೊಳ್ಳದಿದ್ದರೆ ಅವರನ್ನು ಪೋರ್‍ನೊ ಎಂದು ಕರೆದು ಖಂಡಿಸುವುದಕ್ಕೆ ಯಾವ ಅಡ್ಡಿಯೂ ಇರುತ್ತಿರಲಿಲ್ಲ. ಇಂಗ್ಲಿಷಿನ ಮಾದರಿಯಲ್ಲಿ ಬರೆದ ಲಿಮೆರಿಕ್ಕುಗಳಲ್ಲಿಯೂ ಅವರ ತುಂಟತನದ ಸವಿ ಲಯವನ್ನು ಬಿಡುವುದಿಲ್ಲ. ಹೆಣ್ಣಿನ ಮೇಲಿನ ಮೋಹವನ್ನು ತಳೆದ ಮುದುಕರ ಚಪಲವನ್ನು ಎಗ್ಗಿಲ್ಲದೆ ಅವರು ಬಣ್ಣಿಸಬಲ್ಲರು. ಅದೂ ಓದುಗರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ! ಅವರ ಬಹುತೇಕ ಪದ್ಯಗಳಲ್ಲಿ ಓದುಗರನ್ನು ಕುರಿತು ಮಾತನಾಡುವ ಧಾಟಿ ಇದೆ. ಕಿಳ್ಳತನದಲ್ಲಿ ಕೆಣಕುವಂತೆ ಬರೆಯುವ ಧಾಟಿ ಅವರ ಪದ್ಯಗಳನ್ನು ಚೇತೋಹಾರಿಯನ್ನಾಗಿಸಿತು. ಹಸಿಹಸಿಯೆನಿಸುವ ಕಾಮದ ಪದ್ಯಗಳು ನವ್ಯರ ಕಾಲದಲ್ಲಿ ಸಾಕಷ್ಟು ಬಂದವು. ನವೋದಯ ಯುಗದಲ್ಲಿ ಹುಟ್ಟಿದ(೧೯೨೫) ಈ ಬಿಳಿಗಿರಿಯವರು ಮಾತ್ರ ನವ್ಯರನ್ನು ಮೀರಿಸುವ ‘ನಡುಗನ್ನಡ’ವನ್ನು ಬಳಸಿ ಪದ್ಯ ಬರೆದರು. ಹೆಂಗಸು ಗಂಡಸಿನ ದೇಹವನ್ನು ಪ್ರೀತಿಸಲು, ಕಾಮಿಸಲು ಅವರ ಪದಗಳು ನಾಚಿಕೆ ಪಡಲಿಲ್ಲ. ಅಷ್ಟಕ್ಕೂ ಪೋಲಿಮಾತುಗಳೆಂದರೆ ಏನೆಂದು ಅವರ ಮಾತಲ್ಲೇ ಕೇಳಬೇಕು:

ಭೋರ್‍ಗರೆವ ಕಾಮ ಮಹಾಪೂರಕೆ
ಸಮಾಜ ಕಟ್ಟು ಕಟ್ಟಳೆಗಳ
ಈ ಕಡೆ ಜಿನುಗುವ ತೂತುಗಳು-
ಪೋಲೀಮಾತುಗಳು!

ಹಾಗೆಂದು ಬಿಳಿಗಿರಿ ಬರೀ ಪೋಲೀಪದ್ಯಗಳನ್ನು ಬರೆಯಲಿಲ್ಲ. ಅವರ ಕವಿತೆಗಳು ಪ್ರಕೃತಿಯ ಮೇಲೆ ರಚನೆಯಾದವು. ಆದರೆ ಬಿಳಿಗಿರಿ ಸಾಂಪ್ರದಾಯಿಕ ಕಾವ್ಯವಸ್ತುಗಳನ್ನೂ ತೀರಾ ಗಂಭೀರ ಎನ್ನಿಸುವ ವಸ್ತುಗಳನ್ನೂ ಬೇಕೆಂತಲೇ ಕೈಬಿಟ್ಟಂತೆ ತೋರುತ್ತದೆ. ಅವರ ಕಾವ್ಯ ವಸ್ತುಗಳು ಹಾಸುಗೆ, ಲೂನಾ, ಭದ್ರಾವತಿ ಎಂಬ ಊರು, ಹೊಗೆಸೊಪ್ಪು ಇತ್ಯಾದಿಗಳು. ಅವು ಅವರಿಗೆ ತಾಗಿದ್ದ ವಸ್ತುಗಳು. ಅವರೆಂದೂ ಅಪ್ರಾಮಾಣಿಕರಾಗಿ ಕವಿತೆ ಬರೆಯಲು ಹೋಗಲಿಲ್ಲ. ಇಲ್ಲದ ಅನುಭೂತಿಯನ್ನು ಇದೆಯೆಂದು ಭ್ರಮಿಸಿ ಬರೆಯುವ ತಪ್ಪನ್ನು ಮಾಡಲಿಲ್ಲ. ನವೋದಯ ಕಾಲದ ಕವಿಗಳು ತಮ್ಮನ್ನು ತಾವು ಋಷಿಗಳೆಂದು ಕರೆದುಕೊಂಡು ಭಾವಾವೇಶದಿಂದ ಬರೆಯುತ್ತಿದ್ದ ಪರಿಯನ್ನು ಬಿಳಿಗಿರಿ ತಮ್ಮ ಕವನಗಳಲ್ಲಿ ಖಂಡಿಸಿದ್ದಾರೆ. ‘ಅನುಭಾವಿ ಕವಿ’ ಎನ್ನುವ ಕವಿತೆಯಲ್ಲಿ ಅವರು ಈ ತರದ ಕವಿಗಳ ಹಿಪೊಕ್ರಸಿಯನ್ನು ಬಯಲು ಮಾಡಲು ಹಿಂಜರಿಯಲಿಲ್ಲ. ಅಲೌಕಿಕತೆಯನ್ನು ಸುಮ್ಮನೆ ನಿರಾಕರಿಸಿ, ಲೌಕಿಕವಾಗಿ ಚೆನ್ನಾಗಿ ಬದುಕುವ ರೀತಿ ತಮಗಿಷ್ಟವೆಂದು ಮುಂದೆ ಅನೇಕ ಕವಿತೆಗಳಲ್ಲಿ ತೋರಿಸಿಕೊಟ್ಟರು. ‘ರಸವೇ ಜನನ, ವಿರಸ ಮರಣ, ಸಮರಸವೇ ಜೀವನ’ ಎಂದ ಕವಿವಾಣಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ‘ರಸವೇ ಸಿಹಿ, ವಿರಸವೆ ಕಹಿ, ಸಮರಸವೇ ಸಪ್ಪೆ!’ ಎಂದು ಮಾಡಿಕೊಂಡರು. ವಿಮರ್‍ಶಕರೆಂದು ಕರೆಸಿಕೊಳ್ಳುವ ಸ್ವ-ಪ್ರಶಂಸೆಯ ವೀರರನ್ನು ಸಹ ಅವರು ಬಿಟ್ಟಿಲ್ಲ. ತಮ್ಮ ಕವನಗಳಲ್ಲಿ ಮಟ್ಟ ಹಾಕಿದ್ದಾರೆ. ಅವರ ‘ಕ್ರಾಮೇಡ್ ವಿಮರ್‍ಶಕ’ ಎಂಬ ಪದ್ಯದ ಕೆಲ ಸಾಲುಗಳನ್ನು ನೋಡಿ:

ಈತನು ಹೊಗಳದ ಕವಿಯೇ ಇಲ್ಲ!/ಈತನು ತೆಗಳದ ಕವಿಯೇ ಇಲ್ಲ!
ಇಂದೊಬ್ಬನ ಹೊಗಳುವನಿವ ತುಂಬ/ ನಾಳೆಯೆ ಅವನನು ಬೈಯುವ ಹುಂಬ!
(ಅವನಿಗು ಇವನಿಗು ವಿರಸವೊ ಏನೊ!/ ಕೆಲಸದ ಒತ್ತಡ, ಮರೆವೊ ಏನೊ!)
ಪ್ರಶಸ್ತಿ ಪ್ರಖ್ಯಾತಿಗಾಗಿ ಕಾಯುವ ಕವಿಗಳ ಮನಸ್ಸನ್ನೂ ಅವರು ಬಿಟ್ಟಿಲ್ಲ. ಅದಕ್ಕೆಂದೇ;

ಮೂರೇ ತಿಂಗಳ ಕಳೆದರೆ ಸಾಕೋ
ತುಂಬಲು ನನಗರವತ್ತಾರು
ಪ್ರಶಸ್ತಿಗಿನ್ನೂ ಎರಡು ದಶಕಗಳು
ಕಾಯುವುದೆಂದರೆ ಬೇಜಾರು!

ಈ ರೀತಿ ಕವಿತೆಗಳನ್ನು ಬರೆಯುತ್ತಲೇ ಹೋದ ಬಿಳಿಗಿರಿ ಪದಗಳಲ್ಲಿ ಆಟ ಆಡುತ್ತಾ ಮೋಜನ್ನು ಅನುಭವಿಸುತ್ತಾ ಅದನ್ನು ಓದುಗರಿಗೂ ವಿಸ್ತರಿಸುವುದರಲ್ಲಿ ಖುಷಿ ಪಟ್ಟರು.

ಒಳಗಣ ರಂಗಿನ ವಿನ್ಯಾಸಗಳನ್ನು
ಮೆರೆಸುವ ಗಾಜಿನ ಗೋಲಿಗಳ
ತೆರ ಹೊಳೆವೀ ಬಿಳಿಗಿರಿ ಕೃತಿಗಳು ಖುಷಿ-
ಗೊಳಿಸಲಿ ಸಹೃದಯ ಪೋಲಿಗಳ!

ಎಂದೇ ತಮ್ಮ ಹೃದಯ ತೆರೆದಿಟ್ಟರು ಬಿಳಿಗಿರಿ.

ತಾವೆಂದೂ ಮೇಜರ್ ಕವಿಯಲ್ಲ ಎನ್ನುವುದನ್ನು ವಿನಯದಿಂದಲೇ ಒಪ್ಪಿಕೊಳ್ಳುತ್ತಿದ್ದ ಅವರ ಮನಸ್ಸು ‘ಬಿಳಿಗಿರಿಯೆಂಬುವನಿದ್ದನು ಹಿಂದೆ ಪರವಾಯಿಲ್ಲವು!’ ಎಂದು ಕನ್ನಡ ಕಾವ್ಯದ ಚರಿತ್ರೆಕಾರ ಮುಂದೆ ಸಾಗಿದರೆ ಅಷ್ಟೇ ಸಾಕು ಎಂದು ಹೇಳಲು ಹಿಂಜರಿಯುತ್ತಿರಲಿಲ್ಲ. ಇಂತಹಾ ಬಿಳಿಗಿರಿ ಸಾಯುವ ಸ್ವಲ್ಪದಿನಗಳ ಮುಂಚೆ ಬರೆದದ್ದು ಸಹ ಅತ್ಯಂತ ಪೋಲೀ ಎನ್ನಿಸುವ ಜೀವನಪ್ರೀತಿಯ ಕವಿತೆಗಳನ್ನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂ ಬೋಜ ಮುನಿಯ
Next post ಮುದ್ದು ಕಂದನ ವಚನಗಳು : ನಾಲ್ಕು

ಸಣ್ಣ ಕತೆ

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…